ಸಂಗೀತ ವಿವಿ ವಿದ್ಯಾರ್ಥಿ ಪ್ರತಿಭಟನೆಗೆ ಸೆ.10ರವರೆಗೆ ತಾತ್ಕಾಲಿಕ ವಿರಾಮ
ಮೈಸೂರು

ಸಂಗೀತ ವಿವಿ ವಿದ್ಯಾರ್ಥಿ ಪ್ರತಿಭಟನೆಗೆ ಸೆ.10ರವರೆಗೆ ತಾತ್ಕಾಲಿಕ ವಿರಾಮ

September 7, 2018

ಮೈಸೂರು: ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಮೈಸೂರು ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ವಿವಿ ಆವರಣದಲ್ಲಿ ನಡೆಸುತ್ತಿದ್ದ ಪ್ರತಿಭಟನೆಗೆ ಸೆ.10ರವರೆಗೆ ತಾತ್ಕಾಲಿಕ ವಿರಾಮ ನೀಡಿದ್ದಾರೆ.

ಸುಸಜ್ಜಿತ ಬೋಧನ ಕೊಠಡಿ ಒದಗಿಸಬೇಕು. ವಿದ್ಯಾರ್ಥಿನಿಯರು ಮತ್ತು ಮಹಿಳಾ ಬೋಧಕ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ಒದಗಿಸಬೇಕು. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪುರುಷ/ಮಹಿಳಾ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ಸಮಯಕ್ಕೆ ಸರಿಯಾಗಿ ಫಲಿತಾಂಶ, ಅಂಕಪಟ್ಟಿ ನೀಡಬೇಕು. ಇದು ಪ್ರದರ್ಶಕ ಕಲೆಗಳ ವಿವಿ ಆಗಿದ್ದು, ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸಭಾಂ ಗಣ ಮತ್ತು ವೇದಿಕೆ ಇಲ್ಲ. ಕೂಡಲೇ ಸುಸಜ್ಜಿತ ಸಭಾಂ ಗಣ ವ್ಯವಸ್ಥೆ ಕಲ್ಪಿಸಬೇಕು ಇತ್ಯಾದಿ ಹಲವು ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಮೂರು ದಿನದಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು.
ನಿನ್ನೆ (ಬುಧವಾರ) ಶಾಸಕ ಎಸ್.ಎ.ರಾಮದಾಸ್ ಸಹ ಪ್ರತಿಭಟನಾನಿರತರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿ, ವಿವಿ ಹಂಗಾಮಿ ಕುಲಪತಿ ಪ್ರೊ.ಆರ್.ರಾಜೇಶ್, ಕುಲಸಲಚಿವ ಪ್ರೊ.ನಾಗೇಶ್ ಬೆಟ್ಟಕೋಟೆ ಅವರೊಂ ದಿಗೆ ಚರ್ಚಿಸಿದರು. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ವಿವಿಯ ಅಭಿವೃದ್ದಿಗೆ ಸಾಧ್ಯವಿರುವ ಪ್ರಯತ್ನ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದರು. ಆದರೆ ಉನ್ನತ ಶಿಕ್ಷಣ ಸಚಿವರು ಸ್ಥಳಕ್ಕೆ ಬರದ ಹೊರತು ಪ್ರತಿಭಟನೆ ಹಿಂಪಡೆಯಲು ವಿದ್ಯಾರ್ಥಿಗಳು ನಿರಾಕರಿಸಿದ್ದರು.

ಗುರುವಾರ ಪ್ರತಿಭಟನಾ ಸ್ಥಳಕ್ಕೆ ಜಾತ್ಯತೀತ ಜನತಾ ದಳ ಯುವ ಘಟಕದ ಜಿಲ್ಲಾಧ್ಯಕ್ಷ ಗಿರೀಶ್‍ಗೌಡ ಭೇಟಿ ನೀಡಿ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರು ನಿನ್ನೆಯೇ ಬರುವುದಿತ್ತು. ಆದರೆ, ದಸರಾ ಗಜಪಡೆಗೆ ಅರಮನೆ ಆವರಣಕ್ಕೆ ಆಹ್ವಾನ ಸೇರಿದಂತೆ ಹಲವು ಕಾರ್ಯಕ್ರಮಗಳ ಒತ್ತಡದಿಂದಾಗಿ ಬರಲಾಗಿಲ್ಲ. ಸೆ.10ರಂದು ಖಂಡಿತ ಬರುವುದಾಗಿ ತಿಳಿಸಿದ್ದು, ಅವರೇ ಬಂದು ಸಮಸ್ಯೆಯನ್ನು ಆಲಿಸು ತ್ತಾರೆ. ಅಲ್ಲಿಯವರೆಗೆ ಪ್ರತಿಭಟನೆ ಹಿಂತೆಗೆದು ಕೊಳ್ಳುವಂತೆ ಮನವಿ ಮಾಡಿದರು.

ಇದೇ ಅಭಿಪ್ರಾಯವನ್ನು ವಿಶ್ವ ವಿದ್ಯಾನಿಲಯದ ಕುಲಸಚಿವ ನಾಗೇಶ್ ಬೆಟ್ಟಕೋಟೆ ಅವರು ವ್ಯಕ್ತ ಪಡಿಸಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿ ದರು. ಸಚಿವರು ಸೆ.10ರಂದು ಬರುತ್ತಾರೆಂಬ ಭರವಸೆ ಹಿನ್ನೆಲೆಯಲ್ಲಿ ಎರಡು ದಿನದಿಂದ ವಿವಿ ಆವ ರಣದಲ್ಲಿ ಧರಣಿ ಕುಳಿತಿದ್ದವರು ಗುರುವಾರ ವಿವಿ ಒಳಾವರಣ ದಲ್ಲಿ ಸಭೆ ಸೇರಿ, ಪ್ರತಿಭಟನೆಗೆ ತಾತ್ಕಾಲಿಕ ವಿರಾಮ ನೀಡಿರುವುದಾಗಿ ವಿದ್ಯಾರ್ಥಿ ಮುಖಂಡ ಸೂರಜ್ ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ರಾದ ಚೇತನ್, ಮೇಘನಾ, ದೀಪಕ್, ಅನಿತಾ, ರುಬಿನ್ ಸಂಜಯ್ ಇನ್ನಿತರರು ಹಾಜರಿದ್ದರು.

Translate »