ಪಿಒಪಿ ಗಣಪನ ನಿಷೇಧಿಸಿದ ಸರ್ಕಾರ
ಮೈಸೂರು

ಪಿಒಪಿ ಗಣಪನ ನಿಷೇಧಿಸಿದ ಸರ್ಕಾರ

September 7, 2018

ಬೆಂಗಳೂರು: ಪ್ಲಾಸ್ಟರ್ ಆಫ್ ಪ್ಯಾರಿಸ್-(ಪಿಒಪಿ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯನ್ನು ಸರ್ಕಾರ ನಿಷೇಧಿಸಿದೆ.

ಪರಿಸರಕ್ಕೆ ಹಾನಿ ಮಾಡುವ ಮತ್ತು ನದಿ, ಕೆರೆ ನೀರನ್ನು ಕಲ್ಮಶಗೊಳಿಸುವ ಇಂತಹ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನೇ ನಿಷೇಧಿಸಲಾಗಿದೆ. ಇದರ ನಡುವೆಯೂ ಎಲ್ಲಿಯಾದರೂ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸಿ, ವಿಸರ್ಜನೆಗೆ ಮುಂದಾದರೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಮತ್ತು ಪರಿಸರ ಸಚಿವ ಆರ್.ಶಂಕರ್ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣ್ಣಿನ ಗಣೇಶ ಕೂಡ 5 ಅಡಿಗಳಿಗಿಂತ ಎತ್ತರ ಇರಬಾರದು, ಮಣ್ಣಿನಲ್ಲಿ ತಯಾರಿಸಿದ ಮೂರ್ತಿಗಳಿಗೆ ಪರಿಸರದ ಮೇಲೆಪರಿಣಾಮ ಬೀರುವ ಅಪಾಯಕಾರಿ ಬಣ್ಣಗಳ ಲೇಪನ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ. ಮಣ್ಣಿನಲ್ಲಿ ಐದು ಅಡಿಗಿಂತ ಎತ್ತರಕ್ಕೆ ಮೂರ್ತಿ ಮಾಡಲು ಸಾಧ್ಯವಿಲ್ಲ, ಮಾಡಿದರೂ ಮೂರ್ತಿಯ ಸ್ವರೂಪದ ಅಂದ ಕೆಡುತ್ತದೆ ಎಂದರು.

ಪಿಒಪಿ ಮತ್ತು ಬಣ್ಣದ ಗಣೇಶ ಮೂರ್ತಿಗಳು ವಿಷಕಾರಿ ರಾಸಾಯನಿಕ ಅಂಶಗಳಿಂದ ಕೂಡಿರುತ್ತವೆ. ಇಂತಹ ಮೂರ್ತಿಗಳನ್ನು ವಿಸರ್ಜಿಸಿದರೆ ಅವು ನೀರಿನಲ್ಲಿ ಕರಗುವುದಿಲ್ಲ ಮತ್ತೊಂದೆಡೆ ಅವುಗಳಲ್ಲಿನ ರಾಸಾಯನಿಕಗಳು ನೀರನ್ನು ಸಂಪೂರ್ಣ ಮಲಿನ ಮಾಡುತ್ತವೆ. ಇಂತಹ ನೀರು ಯಾವುದೇ ಬಳಕೆಗೂ ಸಾಧ್ಯವಿಲ್ಲ. ಇದರ ಅರಿವು ಮೂಡಿಸಲು ಸರ್ಕಾರ ಹಲವು ಕಾರ್ಯಕ್ರಮ ಹಾಕಿಕೊಂಡಿದೆ. ಸಾರ್ವಜನಿಕರೂ ಕೂಡ ಪರಿಸರ ಮತ್ತು ನೀರು ಮಾಲಿನ್ಯ ತಡೆಗಟ್ಟಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Translate »