ಲಂಚ ಸ್ವೀಕಾರ: ಗ್ರಾಪಂ ಕಾರ್ಯದರ್ಶಿ ಎಸಿಬಿ ಬಲೆಗೆ
ಮೈಸೂರು

ಲಂಚ ಸ್ವೀಕಾರ: ಗ್ರಾಪಂ ಕಾರ್ಯದರ್ಶಿ ಎಸಿಬಿ ಬಲೆಗೆ

September 7, 2018

ಮೈಸೂರು: ಮನೆಯೊಂದರ 11ಬಿ ನಮೂನೆ ನೀಡಲು 12 ಸಾವಿರ ರೂ. ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಎಸಿಬಿ ಪೊಲೀ ಸರಿಗೆ ಸಿಕ್ಕಿಬಿದ್ದಿದ್ದಾನೆ. ಮೈಸೂರು ತಾಲೂಕು ಸಿದ್ದಲಿಂಗಪುರ ಗ್ರಾಮ ಪಂಚಾಯ್ತಿ ಕಾರ್ಯ ದರ್ಶಿ ಎಂ.ಮರಪ್ಪ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ಹಣದ ಸಮೇತ ಸಿಕ್ಕಿಬಿದ್ದವರಾಗಿದ್ದು, ಸದ್ಯ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.

ಮೈಸೂರು ತಾಲೂಕು ಬೆಲವತ್ತಿ ಗ್ರಾಮದ ಶೀಲವತಿ ಎಂಬುವವರು ಗ್ರಾಮದ ಸರ್ವೆ ನಂ.93/29ರಲ್ಲಿ ನಿರ್ಮಿಸಿರುವ ವಾಸದ ಮನೆಗೆ 11ಬಿ ಫಾರಂ(ಖಾತೆ) ಪಡೆಯಲು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಮರಪ್ಪ, ಪ್ರಕ್ರಿಯೆ ನಡೆಸಿ 11ಬಿ ವಿತರಿಸಲು 12 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅರ್ಜಿದಾರರಾದ ಶೀಲವತಿ 3 ದಿನಗಳ ಹಿಂದೆ ಮೈಸೂರಿನ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಎಸಿಬಿ ಎಸಿಪಿ ಉಮೇಶ್ ಜಿ.ಶೇಟ್, ಇಂದು ಬೆಳಿಗ್ಗೆ ಅಧೀನಾಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ, ಶೀಲವತಿ ಅವರಿಂದ 12 ಸಾವಿರ ರೂ. ನಗದು ಸ್ವೀಕರಿಸುತ್ತಿದ್ದಾಗ ಇಂದು ಬೆಳಿಗ್ಗೆ 11.45 ಗಂಟೆಗೆ ಸಿದ್ದಲಿಂಪುರ ಗ್ರಾಪಂ ಕಚೇರಿಯಲ್ಲೇ ಮರಪ್ಪನನ್ನು ನಗದು ಸಮೇತ ಬಂಧಿಸಿದರು. ಇನ್ಸ್‍ಪೆಕ್ಟರ್‍ಗಳಾದ ಶೇಖರ್, ವಿನಯ್, ಸಿಬ್ಬಂದಿಗಳಾದ ಕುಮಾರ್‍ಆರಾಧ್ಯ, ಗುರುಪ್ರಸಾದ್, ಸಂತೋಷ್, ಚೇತನ್ ಹಾಗೂ ಪುಷ್ಪಲತಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »