ಬಾಡಿಗೆ ವಿಚಾರದಲ್ಲಿ ಪದಾರ್ಥಗಳ ರಸ್ತೆಗೆಸೆದು ಮಳಿಗೆಗೆ ಬೀಗ ಹಾಕಿದ ಮಾಲೀಕ
ಮೈಸೂರು

ಬಾಡಿಗೆ ವಿಚಾರದಲ್ಲಿ ಪದಾರ್ಥಗಳ ರಸ್ತೆಗೆಸೆದು ಮಳಿಗೆಗೆ ಬೀಗ ಹಾಕಿದ ಮಾಲೀಕ

June 12, 2018

ಮೈಸೂರು:  ನಿಗದಿತ ಬಾಡಿಗೆ ನೀಡುತ್ತಿಲ್ಲವೆಂದು ಕಟ್ಟಡದ ಮಾಲೀಕ, ಏಕಾಏಕಿ ಅಂಗಡಿಗೆ ನುಗ್ಗಿ, ವಸ್ತುಗಳನ್ನೆಲ್ಲಾ ಹೊರಗೆಸೆದು, ಬೀಗ ಹಾಕಿದ ಕಾರಣ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ಘಟನೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕಟ್ಟಡದ ಮಾಲೀಕರಾದ ಕೋದಂಡರಾಮು ಅವರು, ಮಳಿಗೆಯೊಂದನ್ನು ದಯಾಶಂಕರ್ ಹಾಗೂ ರಾಜೇಶ್ ಅವರಿಗೆ ಬಾಡಿಗೆಗೆ ನೀಡಿದ್ದರು. ಸುಮಂಗಲಿ ಸಿಲ್ಕ್ ಹೆಸರಿನಡಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಇವರು ಮಾಸಿಕ 28 ಸಾವಿರ ರೂ. ಬಾಡಿಗೆ ನೀಡುತ್ತಿದ್ದರು. ಕೆಲ ತಿಂಗಳ ಹಿಂದೆ ಬಾಡಿಗೆ ಹೆಚ್ಚಿಸುವ ವಿಚಾರವಾಗಿ ಕಟ್ಟಡ ಮಾಲೀಕ ಹಾಗೂ ಮಳಿಗೆದಾರರ ನಡುವೆ ಮಾತುಕತೆ ನಡೆದು, ಮಾಸಿಕ 30 ಸಾವಿರ ಬಾಡಿಗೆಗೆ ಒಪ್ಪಿದ್ದರು ಎನ್ನಲಾಗಿದೆ.

ಇದನ್ನು ಒಪ್ಪದ ಕಟ್ಟಡ ಮಾಲೀಕ ಕೋದಂಡರಾಮು, ಎಲ್ಲೆಡೆ ಬಾಡಿಗೆ ಹೆಚ್ಚಾಗಿದ್ದು, ಈ ಮಳಿಗೆಯ ಬಾಡಿಗೆಯನ್ನೂ ದುಪ್ಪಟ್ಟು ನೀಡಬೇಕೆಂದು ಒತ್ತಾಯಿಸುತ್ತಿದ್ದರು. ಆದರೆ ಮಳಿಗೆದಾರರು ಅಷ್ಟು ಬಾಡಿಗೆ ನೀಡುತ್ತಿರಲಿಲ್ಲ. ಇಂದು ಸಂಜೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಕೋದಂಡರಾಮು ಸುಮಾರು 10 ಮಂದಿ ಸಹಚರರೊಂದಿಗೆ ಮಳಿಗೆಗೆ ನುಗ್ಗಿ, ಸೀರೆಗಳನ್ನು ಹೊರಗೆಸೆದು, ಬೀಗ ಹಾಕಿದ್ದಾರೆ. ಘಟನೆಯಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ದೇವರಾಜ ಠಾಣೆ ಪೊಲೀಸರು, ಗುಂಪನ್ನು ಚದುರಿಸಿ, ಕಟ್ಟಡ ಹಾಗೂ ಅಂಗಡಿ ಮಾಲೀಕರನ್ನು ಕರೆದೊಯ್ದು ವಿಚಾರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »