ತಾಯಿ ಅಗಲಿಕೆಯಿಂದ ಮನನೊಂದು ಯುವಕ ಆತ್ಮಹತ್ಯೆ
ಮೈಸೂರು

ತಾಯಿ ಅಗಲಿಕೆಯಿಂದ ಮನನೊಂದು ಯುವಕ ಆತ್ಮಹತ್ಯೆ

October 12, 2018

ಮೈಸೂರು:  ತಾಯಿಯ ಅಗಲಿಕೆಯಿಂದ ಮನನೊಂದು ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಮೇಟಗಳ್ಳಿಯಲ್ಲಿ ನಡೆದಿದೆ.

ಮೇಟಗಳ್ಳಿಯ ಮಾರಿಗುಡಿ ಬೀದಿ ನಿವಾಸಿ ವಿನಾಯಕ(28), ಆತ್ಮಹತ್ಯೆ ಮಾಡಿ ಕೊಂಡಿರುವ ಯುವಕ. ಬೆಂಗಳೂರು ಮೂಲದ ವಿನಾಯಕನ ಕುಟುಂಬ ಮೇಟಗಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿತ್ತು. ತಂದೆ ತೀರಿಹೋದ ಬಳಿಕ ವಿನಾಯಕ ಕ್ಲಬ್‍ವೊಂದರಲ್ಲಿ ಕೆಲಸ ಮಾಡಿಕೊಂಡು ತಾಯಿಯನ್ನು ಸಲಹುತ್ತಿದ್ದ. ಆದರೆ ಸುಮಾರು 20 ದಿನಗಳ ಹಿಂದೆ ಪಾಶ್ರ್ವವಾಯುಗೆ ತಾಯಿಯೂ ಬಲಿಯಾಗಿದ್ದರು. ಪರಿಣಾಮ ಒಂಟಿಯಾಗಿದ್ದ ವಿನಾಯಕ ಆಘಾತಕ್ಕೊಳಗಾಗಿದ್ದ.

ಮೂರ್ನಾಲ್ಕು ದಿನಗಳಿಂದ ವಿನಾಯಕನಿದ್ದ ಮನೆಯ ಬಾಗಿಲು ಯಾವಾಗಲೂ ಮುಚ್ಚಿದಂತಿತ್ತು. ವಿನಾಯಕನೂ ಕಾಣಿಸಿಕೊಂಡಿರಲಿಲ್ಲ. ಕೆಲಸಕ್ಕೆ ಹೋಗಿರಬಹುದು ಎಂದು ನೆರೆಹೊರೆಯವರು ಅಂದುಕೊಂಡಿದ್ದರು. ಆದರೆ ಗುರುವಾರ ವಿನಾಯಕನ ಮನೆಯ ಕಡೆಯಿಂದ ದುರ್ವಾಸನೆ ಬಂದಿದೆ. ಆದರೂ ಎಲ್ಲೋ ಹೆಗ್ಗಣ ಸತ್ತಿರಬಹುದೆಂದು ಭಾವಿಸಿದ್ದರು. ವಾಸನೆ ಹೆಚ್ಚಾದಾಗ ಅನುಮಾನಗೊಂಡು ಕಿಟಕಿ ಮೂಲಕ ನೋಡಿದಾಗ ವಿನಾಯಕ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.
ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಮೇಟಗಳ್ಳಿ ಪೊಲೀಸರು, ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಕೆಳಗಿಳಿಸಿ, ಜೆಎಸ್‍ಎಸ್ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಿ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈವರೆಗೆ ಯಾವ ಸಂಬಂಧಿಕರೂ ಬಂದಿಲ್ಲ. ಹಾಗಾಗಿ ವಿನಾಯಕನ ಸ್ನೇಹಿತರನ್ನು ಸಂಪರ್ಕಿಸಿ, ಅಂತ್ಯ ಸಂಸ್ಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Translate »