ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ: ಹೆಚ್.ಡಿ.ರೇವಣ್ಣ
ಹಾಸನ

ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ: ಹೆಚ್.ಡಿ.ರೇವಣ್ಣ

October 12, 2018

ಹಾಸನ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪೂರ್ವ ಯೋಜನೆ ಸಿದ್ಧಪಡಿಸಿ ಅದಕ್ಕೆ ಅನುಗುಣವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಸಾಮಾಜಿಕ ಅರಣ್ಯ, ರೇಷ್ಮೆ, ಮೀನುಗಾರಿಕೆ, ನಗರಾಭಿವೃದ್ಧಿ, ಕುಡಿಯುವ ನೀರು ಸರಬರಾಜು ಸೇರಿದಂತೆ ಎಲ್ಲಾ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆಗೆ ಜಾರಿಯಾಗಬೇಕು. ಆ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಜಿಲ್ಲೆಯಲ್ಲಿ ಕೃಷಿಕರು, ಜನಸಾಮಾನ್ಯರು ಎಲ್ಲಾರ ವೈಯುಕ್ತಿಕ ಜೀವನಮಾನ ಸುಧಾ ರಣೆಯಾಗುವುದರ ಜೊತೆಗೆ ಎಲ್ಲೆಡೆ ಕುಡಿಯುವ ನೀರು, ವಿದ್ಯುತ್ ಪೂರೈಕೆ, ರಸ್ತೆ ಅಭಿವೃದ್ಧಿಗಳು ನಡೆಯಬೇಕು. ಅದಕ್ಕೆ ಇಲಾಖಾ ವಾರು ಯೋಜನೆ ರೂಪುಗೊಳ್ಳಬೇಕು. ಹಾಸನ ನಗರವನ್ನು ನಗರ ಪಾಲಿಕೆ ಮೇಲ್ದ ರ್ಜೆಗೆ ಏರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರದ ಎಲ್ಲಾ ತಾಲೂಕುಗಳಲ್ಲಿ ಬಾಕಿ ಇರುವ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಅಮೃತ ಯೋಜನೆ ಪ್ರಗತಿ: ನಗರಾಭಿ ವೃದ್ಧಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಜಯರಾಂ ಮಾತನಾಡಿ, ಹಾಸನ ನಗರ ದಲ್ಲಿ 117 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ ಯೋಜನೆ ಜಾರಿಯಲ್ಲಿದೆ. ಹಾಸನ ನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ 24×7 ರಂತೆ ಕುಡಿಯುವ ನೀರು ಪೂರೈಕೆ ಯೋಜನೆಗೆ 300ಕೋಟಿ ರೂಪಾಯಿ ಅಗತ್ಯವಿದೆ. ಈಗಾಗಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬಾಕಿ ಉಳಿದಿರುವ 70 ಕೋಟಿ ರೂಪಾಯಿ ಅನುದಾನದಲ್ಲಿ ಈ ಯೋಜನೆಗೆ ಬಳಸಲು ನಿರ್ಧರಿಸಲಾಗಿದೆ. ಉಳಿದ 230 ಕೋಟಿ ರೂಪಾಯಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಈಗಾಗಲೇ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಕುಡಿಯುವ ನೀರು ಯೋಜನೆಗಳನ್ನು ಆದಷ್ಟು ಶೀಘ್ರ ಮುಕ್ತಾಯಗೊಳಿಸಲಾಗುವುದು ಎಂದರು.

ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ಮಹಾನಗರ ಪಾಲಿಕೆಯಾದರೆ ಸ್ವಾಗತಾರ್ಹ ಆದರೆ, ರಸ್ತೆ ಕಾಮಗಾರಿಗಳನ್ನು ನಡೆಸಿದ ನಂತರ ಮತ್ತೆ ಅಗೆದು ಪೈಪ್ ಲೈನ್ ಅಳವಡಿಸುವ ಬದಲು ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗೆ ಪೈಪ್ ಲೈನ್ ಅಳವಡಿಸಿ ನಂತರ ರಸ್ತೆ ಕಾಮಗಾರಿಗಳನ್ನು ನಡೆಸುವುದು ಸೂಕ್ತ. ಹಾಗೇ ಅಮೃತ ಯೋಜನೆಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಈಗಲೇ ಮುಕ್ತಾಯಗೊಳ್ಳಿಸಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಂದೆ ರಸ್ತೆಗಳನ್ನು ಅಗೆಯದಂತೆ ಕಾಮಗಾರಿ ಪೂರ್ವದಲ್ಲೆ ಪೈಪ್‍ಲೈನ್‍ಗಳನ್ನು ಅಳವಡಿಸುವ ಕುರಿತಂತೆ ನೀಲಿನಕ್ಷೆ ಸಿದ್ದಪಡಿಸಿ ಸಲ್ಲಿಸುವಂತೆ ಲೋಕೋಪಯೋಗಿ ಇಂಜಿನಿಯರ್‌ಗೆಗೆ ಸೂಚಿಸಿದರು.

ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಹೆಚ್.ಕೆ.ಕುಮಾರ ಸ್ವಾಮಿ, ಕೆ.ಎಸ್.ಲಿಂಗೇಶ್ ಅವರು ತಮ್ಮ ಕ್ಷೇತ್ರಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಸಮಸ್ಯೆ: ಜಿಲ್ಲೆಯಲ್ಲಿ ಭಾರತ ಸಂಚಾರ ನಿಗಮದ ವತಿಯಿಂದ ನೀಡಲಾಗಿರುವ ದೂರವಾಣಿ ಸಂಪರ್ಕ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಬಿಎಸ್‍ಎನ್‍ಎಲ್ ನೆಟ್‍ವರ್ಕ್‍ಗಳು ಸರಿಯಾಗಿಸಿಗುತ್ತಿಲ್ಲ. ಸಕಲೇಶಪುರ ತಾಲೂಕಿನಲ್ಲಿ ಬಹುತೇಕ ಊರುಗಳಲ್ಲಿ ಇನ್ನು ದೂರವಾಣಿ ಸಂಪರ್ಕ ಸಾಧ್ಯವಾಗಿಲ್ಲ ಎಂದು ಶಾಸಕರುಗಳು ಗಮನ ಸೆಳೆದರು. ಕೂಡಲೇ ಈ ಸಮಸ್ಯೆ ಬಗ್ಗೆ ಹರಿಸಿ ಅಗತ್ಯವಿರುವ ಅನುದಾನದ ಹಾಗೂ ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಸೂಚಿಸಿದರು.

ಪಶುವೈದ್ಯಕೀಯ ಕಾಲೇಜಿಗೆ ಅಗತ್ಯ ವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಪಶುಪಾಲನಾ ಹಾಗೂ ಹಾಸನ ಡೈರಿ ಸಹಯೋಗದೊಂದಿಗೆ ಉತ್ತಮ ತಳಿಯ ಹಸು ಹಾಗೂ ಕುರಿ ಸಾಕಾಣಿಕೆಗೆ ಶೇಡ್ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

108 ವಾಹನದಲ್ಲಿ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸಿದಲ್ಲಿ ಕಾರಣವನ್ನು ಲಿಖಿತವಾಗಿ ನೀಡಬೇಕು ಎಂದು ಸಚಿವರು ಸೂಚಿಸಿದರು. ಆಸ್ಪತ್ರೆ ಕಟ್ಟಡ ದುರಸ್ತಿ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು ಎಂದರು.

ಇದೇ ರೀತಿ ಜಲಾಶಯ ಯೋಜನೆ ಗಳ ನಿರಾಶ್ರಿತರ ಭೂಮಿ ಉಳ್ಳವರ ಪಾಲಾಗುತ್ತಿರುವ ಬಗ್ಗೆಯೂ ಜಿಲ್ಲಾಧಿಕಾರಿಯವರು ನಿಗಾ ವಹಿಸಬೇಕು ಎಂದು ಸಚಿವರು ಸೂಚಿಸಿದರು. ಗ್ರಾಮ ಲೆಕ್ಕಗರು ಸಾರ್ವಜನಿಕರ ಸೇವೆಯಲ್ಲಿ ತೋರುತ್ತಿರುವ ನಿರ್ಲಕ್ಷ, ಪಡಿತರ ಅಕ್ಕಿ ವಿತರಣೆಯಲ್ಲಿ ನಡೆಯು ತ್ತಿರುವ ಅಕ್ರಮ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ವೇತ ದೇವ ರಾಜ್, ಉಪಾಧ್ಯಕ್ಷ ಸುಪ್ರದೀಪ್ ಯಜಮಾನ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ಸಿಇಓ ಪುಟ್ಟಸ್ವಾಮಿ, ಸ್ಥಾಯಿ ಸಮಿತಿ ಸಮಿತಿ ಅಧ್ಯಕ್ಷ ಲೋಕೇಶ್ ಹಾಜರಿದ್ದರು.

ಒಂದೇ ಕ್ವಾಟರ್ ಕುಡಿಯೋ ರೀತಿ ಮಾಡ್ರಪ್ಪಾ..!  ಅಧಿಕಾರಿಗಳಲ್ಲಿ ಶಾಸಕ ಶಿವಲಿಂಗೇಗೌಡ ಮನವಿ

ಹಾಸನ: ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಣ್ಣೆ ವಿಚಾರವಾಗಿಯೇ ಹೆಚ್ಚು ಸಮಯ ಚರ್ಚೆಯಾಯಿತು.
ಮೊದಲಿಗೆ ಮದ್ಯದ ವಿಚಾರ ಪ್ರಸ್ತಾಪಿಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು, ಗ್ರಾಮಗಳಲ್ಲಿ ರೈತರಿಗೆ ಎಣ್ಣೆ ಸಾಲ ಸಿಗುತ್ತಿದೆ. ಒಂದು ಕ್ವಾಟರ್ ಕುಡಿಯುವವನು, ಸಾಲ ಸಿಗುತ್ತೆ ಅಂತಾ ಆರು-ಏಳು ಕ್ವಾಟರ್ ಕುಡಿತ್ತಿದ್ದಾನೆ. ದಯವಿಟ್ಟು ಒಂದು ಕ್ವಾಟರ್ ಮಾತ್ರ ಕುಡಿಯುವ ರೀತಿ ಮಾಡ್ರಪ್ಪ ಎಂದು ಹೇಳಿದರು. ಅವರ ಮಾತಿನ ಧಾಟಿ ಸಭೆಯಲ್ಲಿ ನಗುವಿಗೆ ಕಾರಣವಾಯಿತು.ಮನೆಯಲ್ಲಿ ಪತ್ನಿ, ಮಕ್ಕಳ ಬಗ್ಗೆ ಚಿಂತೆ ಮಾಡುವುದಿಲ್ಲ. ಮದ್ಯದ ಚಟದಿಂದ ಸಾಲದ ಕೂಪಕ್ಕೆ ಬೀಳುತ್ತಿದ್ದಾರೆ ಎಂದು ಶಾಸಕರು ಮಾತು ಮುಗಿಸಿದರು.

ಇದಕ್ಕೆ ಧ್ವನಿಗೂಡಿಸಿದ ಚನ್ನರಾಯಪಟ್ಟಣ ಶಾಸಕ ಸಿ.ಎನ್.ಬಾಲಕೃಷ್ಣ ಮದ್ಯದ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ನೀರನ್ನು ಮಾರಾಟ ಮಾಡುತ್ತಿದ್ದಾರೆ. ಮತ್ತಿನ ಅಮಲಿನಲ್ಲಿ ಕೆಲವರು ಅದನ್ನೇ ಕುಡಿಯುತ್ತಾರೆ. ಅಧಿಕಾರಿಗಳು ಚೆನ್ನಾಗಿ ಡ್ರೆಸ್ ಹಾಕಿಕೊಂಡು ಬರುತ್ತಾರೆ. ಕೆಲಸ ಮಾತ್ರ ಮಾಡುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಹಾಸನ ಶಾಸಕ ಪ್ರೀತಮ್ ಜೆ. ಗೌಡ ಮಾತನಾಡಿ, ನಗರ ಭಾಗಗಳಲ್ಲಿ ಬೆಳಗ್ಗೆಯೇ ಮದ್ಯದಂಗಡಿ ಓಪನ್ ಆಗುತ್ತಿವೆ. ದಯವಿಟ್ಟು 11 ಗಂಟೆಯ ನಂತರ ಮದ್ಯದಂಗಡಿ ತೆರೆಯಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಂಡರು.

ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಕುಡಿದು ಮನೆಗೆ ಬಂದು ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ಮಾಡುತ್ತಾರೆ. ಈ ರೀತಿ ಕುಡಿದು ಓಡಾಡುವರ ಮೇಲೆ ಒಂದರೆಡು ಕೇಸ್ ಹಾಕಿ ಬುದ್ಧಿ ಕಲಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಕುಡಿದು ಬೈಕ್ ಓಡಿಸುತ್ತಾರೆ. ಒಂದು ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡರೆ ಪರಿಹಾರದ ಹಣ ಕೂಡ ಸಿಗಲ್ಲ. ಈ ಕುರಿತು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

ನರೇಗಾದಡಿ ತೆಂಗಿನ ಸಸಿ ವಿತರಿಸಿ

ನುಸಿ ರೋಗದಿಂದ ಹಾಳಾಗಿರುವ ತೆಂಗಿನ ಮರಗಳನ್ನು ಕಿತ್ತು ಬದಲಾಗಿ ಹೊಸ ಗಿಡಗಳನ್ನು ನೆಡಲು ನರೇಗಾ ಯೋಜನೆಯಡಿ ಅವಕಾಶ ಕಲ್ಪಿಸಬೇಕು ಎಂದು ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ನುಸಿ ರೋಗದಿಂದ ಹಲವು ತೆಂಗಿನ ಮರಗಳು ನಾಶವಾಗಿದೆ. ಈ ರೋಗವನ್ನು ಸಂಪೂರ್ಣವಾಗಿ ನಿವಾರಿ ಸಲು ರೈತರಿಗೆ ನರೇಗಾ ಯೋಜನೆಯಡಿ ಹೊಸ ತೆಂಗಿನ ಸಸಿ ವಿತರಿಸಬೇಕು. ನುಸಿ ರೋಗದಿಂದ ಹಾಳಾಗಿರುವ ಮರಗಳನ್ನು ತೆಗೆಯಲು ಕ್ರಮಕೈಗೊಳ್ಳಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ತಹಶೀಲ್ದಾರ್, ತೋಟಗಾರಿಕೆ, ಕೃಷಿ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚಿಸುವಂತೆ ತಿಳಿಸಿದರು.

Translate »