ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ
ಮೈಸೂರು

ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ

September 27, 2018

ನವದೆಹಲಿ: ಬಹು ನಿರೀಕ್ಷಿತ ಆಧಾರ್ ಸಿಂಧುತ್ವ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಆಧಾರ್ ಮೇಲಿನ ದಾಳಿ, ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಹೇಳುವ ಮೂಲಕ ಆಧಾರ್ ಸಿಂಧುತ್ವವನ್ನು ಎತ್ತಿ ಹಿಡಿದಿದೆ. ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ಮಹತ್ವದ ತೀರ್ಪು ಹೊರಬಿದ್ದಿದ್ದು, ಅಂತಿಮ ತೀರ್ಪಿನ ವಿವರವನ್ನು ನ್ಯಾಯಮೂರ್ತಿ ಎ.ಕೆ.ಸಿಕ್ರಿ ಓದಿದರು.

‘ಆಧಾರ್ ಮೇಲಿನ ದಾಳಿ ಸಂವಿಧಾನಕ್ಕೆ ವಿರುದ್ಧವಾದುದು. ಆಧಾರ್ ದತ್ತಾಂಶಗಳ ಸೋರಿಕೆ ಅಥವಾ ಅವುಗಳನ್ನು ಕದಿಯುವುದು ಸಂವಿಧಾನಕ್ಕೆ ವಿರುದ್ಧವಾದದ್ದು. ಆಧಾರ್ ಮಾಹಿತಿ ರಕ್ಷಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂತೆಯೇ ಸಮಾಜದ ಹಿತದೃಷ್ಟಿಯಿಂದ ಕೆಲವು ನಿರ್ಬಂಧಗಳು ಅಗತ್ಯ ಎಂದಿರುವ ಕೋರ್ಟ್, ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ನಿಂದ ಉಪಯೋಗವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟಿದೆ. ಅಂತೆಯೇ ಆಧಾರ್ ಮಾಹಿತಿಯನ್ನು ತಿರುಚಲು ಸಾಧ್ಯವಿಲ್ಲ ಎಂದು ಹೇಳಿರುವ ಕೋರ್ಟ್, ನಕಲಿ ಆಧಾರ್ ಕಾರ್ಡ್ ಸೃಷ್ಟಿಯೂ ಸಾಧ್ಯವಿಲ್ಲ. ನಕಲಿ ಆಧಾರ್ ಕಾರ್ಡ್ ಸೃಷ್ಟಿಸಲು ಸಾಧ್ಯವಿದ್ದರೆ ಅದನ್ನು ತಡೆಗಟ್ಟಲು ಯತ್ನಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಒಟ್ಟು 40 ಪುಟಗಳ ತೀರ್ಪಿನ ಸಾರಾಂಶವನ್ನು ನ್ಯಾ.ಸಿಕ್ರಿ ಓದಿದ್ದು, ಖಾಸಗೀತನದ ಹಕ್ಕು ಪ್ರತಿಯೊಬ್ಬರಿಗೂ ಘನತೆ ಯಿಂದ ಬದುಕುವ ಹಕ್ಕನ್ನು ನೀಡಿದೆ, ಆಧಾರ್ ಸಮಾಜ ಒಂದು ವರ್ಗಕ್ಕೆ ಘನತೆ ಯಿಂದ ಬದುಕುವ ಮಾರ್ಗ ವನ್ನು ನೀಡಿದೆ ಎಂದು ಹೇಳಿದ್ದಾರೆ.

3 ನ್ಯಾಯಾಧೀಶರು ಪರ, ಇಬ್ಬರು ಮಾತ್ರ ವಿರೋಧ: ಇನ್ನು ಇಂದಿನ ಪಂಚ ಸದಸ್ಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಎ.ಕೆ.ಸಿಕ್ರಿ, ನ್ಯಾ.ಎ.ಎಂ. ಖಾನ್ ವಿಲ್ಕರ್, ನ್ಯಾ.ಡಿ.ವೈ.ಚಂದ್ರಚೂಡ್, ನ್ಯಾ. ಅಶೋಕ್ ಭೂಷಣ್ ಅವರಿದ್ದರು.

ಆಧಾರ್ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಐವರು ನ್ಯಾಯಮೂರ್ತಿಗಳಲ್ಲಿ ಮೂವರು ನ್ಯಾಯಮೂರ್ತಿಗಳು ಸಿಂಧುತ್ವವನ್ನು ಸ್ವಾಗತಿಸಿದ್ದರೆ, ಇನ್ನಿಬ್ಬರು ವಿರೋಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚಸದಸ್ಯ ಪೀಠ ಈ ಪ್ರಕರಣದ ವಿಚಾರಣೆಯನ್ನು ಕಳೆದ ಮಾರ್ಚ್ ತಿಂಗಳಿನಿಂದ ಆರಂಭಿಸಿತ್ತು. 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಬಹುಮುಖ್ಯ ದಾಖಲೆಗಳೊಂದಿಗೆ ಜೋಡಿಸುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುವ ಸಂಭವವಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿತ್ತು. ಖಾಸಗೀತನ ಮೂಲಭೂತ ಹಕ್ಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿರುವುದು, ಆಧಾರ್ ಕಡ್ಡಾಯ ಕ್ರಮದಿಂದ ಖಾಸಗೀತನಕ್ಕೆ ಧಕ್ಕೆಯಾಗುತ್ತದೆ ಎಂಬ ಆರೋಪಕ್ಕೆ ಪುಷ್ಟಿ ನೀಡಿದಂತಾಗಿತ್ತು. ಆಧಾರ್ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಸೇರಿದಂತೆ 24 ಮಂದಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠವು ಸುದೀರ್ಘ ಅವಧಿಯವರೆಗೆ ವಿಚಾರಣೆ ನಡೆಸಿದ್ದು, ಮೇ ತಿಂಗಳಿನಲ್ಲಿ ತೀರ್ಪು ಕಾಯ್ದಿರಿಸಿತ್ತು.

Translate »