ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ, ಮತದಾರರ ಪಟ್ಟಿ ಸೇರ್ಪಡೆ ಸೇವೆ ಸಿದ್ಧ ‘ಜನಸೇವಕ’
ಮೈಸೂರು

ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ, ಮತದಾರರ ಪಟ್ಟಿ ಸೇರ್ಪಡೆ ಸೇವೆ ಸಿದ್ಧ ‘ಜನಸೇವಕ’

June 9, 2020

ಬೆಂಗಳೂರು, ಜೂ. 8(ಕೆಎಂಶಿ)-ಆಧಾರ್ ನೊಂದಣಿ, ಎಪಿಎಲ್ ಪಡಿತರ ಚೀಟಿ ಮತ್ತು ಮತದಾರ ಯಾದಿಗೆ ಹೆಸರು ನೋಂದಣಿ ಸೇವೆಗಳನ್ನು ಸಕಾಲ ಸ್ಕೀಂನ ಜನಸೇವಕ ಯೋಜನೆಯಡಿ ಒದಗಿಸಲು ಸಂಬಂಧಿಸಿದ ಇಲಾಖೆ ಗಳು ಸಹಮತ ವ್ಯಕ್ತಪಡಿಸಿದ್ದು, ಇಷ್ಟರಲ್ಲಿಯೇ ಈ ಸೇವೆಗಳನ್ನು ‘ಜನಸೇವಕ’ ವ್ಯಾಪ್ತಿಗೆ ತರಲಾಗುವುದು ಎಂದು ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕ ಸ್ಥಗಿತವಾಗಿದ್ದ ನಾಗರಿಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ‘ಜನಸೇವಕ’ ಯೋಜನೆಯನ್ನು ಪುನರಾ ರಂಭಗೊಳಿಸುವ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ಸೋಮ ವಾರ ನಡೆದ ಅಧಿಕಾರಿಗಳ ಹಾಗೂ ಬೆಂಗಳೂರಿನ ಸಂಬಂಧಿಸಿದ ವಿಧಾನಸಭಾ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತ ವಾಗಿದ್ದ ಈ ಯೋಜನೆಯನ್ನು ಶೀಘ್ರದಲ್ಲೇ ಪುನರಾ ರಂಭಿಸಲಾಗುವುದು ಎಂದರು.

ಪ್ರಸ್ತುತ ‘ಜನಸೇವಕ’ ಯೋಜನೆ ಬೆಂಗಳೂರು ಮಹಾ ನಗರದ ರಾಜಾಜಿನಗರ, ಬೊಮ್ಮನಹಳ್ಳಿ, ಮಹದೇವಪುರ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜಾರಿ ಯಲ್ಲಿದ್ದು, ಆದಾಯ, ಜಾತಿ ಪ್ರಮಾಣ ಪತ್ರ, ಹಿರಿಯ ನಾಗರಿಕರ ಪಿಂಚಣಿ ಸೇವೆ, ಕಾರ್ಮಿಕ, ಆರೋಗ್ಯ, ಪೊಲೀಸ್ ಸೇವೆಗಳು ಸೇರಿದಂತೆ 50 ಸೇವೆಗಳನ್ನು ಒದಗಿಸಲಾಗುತ್ತಿತ್ತು. ಇನ್ನು ಮುಂದೆ ಈ ವ್ಯಾಪ್ತಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ತೀರಾ ಅಗತ್ಯವಾಗಿರುವ ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ ಮತ್ತು ಮತದಾರ ಯಾದಿಗೆ ಹೆಸರು ನೋಂದಣಿ ಸೇವೆಗಳನ್ನು ತರಲಾಗುವುದು ಎಂದರು.

ಆಧಾರ್ ಸಂಖ್ಯೆಯು ಇತ್ತೀಚೆಗೆ ಎಲ್ಲ ವ್ಯವಹಾರಕ್ಕೂ ತೀರಾ ಅಗತ್ಯವಾಗಿರುವುದರಿಂದ ಇಂತಹ ಸ್ಥಿತಿಯಲ್ಲಿ ಹಿರಿಯ ನಾಗರಿಕರು, ಅಸಹಾಯಕರು ಈ ಸೇವೆಗಳನ್ನು ಪಡೆದುಕೊಳ್ಳಲು ಪರದಾಡುವಂತಾಗಿದೆ. ಹಿರಿಯರು ಈ ರೀತಿಯ ಕಷ್ಟಪಡುತ್ತಿರುವುದನ್ನು ಗಣನೆಗೆ ತೆಗೆದು ಕೊಂಡು ಆಧಾರ್ ನೋಂದಣಿ ಮತ್ತು ಆಧಾರ್ ಅಪ್ಡೇಟ್ ಮಾಡುವ ಸೇವೆಗಳನ್ನು ಸಹ ‘ಜನಸೇವಕ’ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಸ್ತುತ ದಿನಮಾನಗಳಲ್ಲಿ ಕೋವಿಡ್ ಸೋಂಕು ವ್ಯಾಪಕ ವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಯೋ ವೃದ್ಧರು, ಅಸ್ವಸ್ಥ ವ್ಯಕ್ತಿಗಳು ಸುರಕ್ಷಿತವಾಗಿ ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಎಲ್ಲ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ‘ಜನಸೇವಕ’ ಸಿಬ್ಬಂದಿ ನಾಗರಿಕರಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸುವ ಸಲುವಾಗಿ ಜನಸೇವಕ ಸೇವೆಗಳನ್ನು ಪುನರಾರಂಭಿಸುವ ನಿರ್ಧಾರ ತೆಗೆದುಕೊಳ್ಳ ಲಾಗಿದೆ. ತಕ್ಷಣದಿಂದಲೇ ಈ ಸೇವೆಗಳ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಯೋಜನೆ ರೂಪಿಸಿ ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಭಾಗದ ಶಾಸಕರು ತಮ್ಮ ವ್ಯಾಪ್ತಿಯಲ್ಲಿ ‘ಜನಸೇವಕ’ ಯೋಜನೆ ಪುನರಾರಂಭ ಮತ್ತು ಆಧಾರ್ ನೋಂದಣಿ ಯಂತಹ ಸೇವೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಳ್ಳಬೇಕೆಂದು ಸಚಿ ಸುರೇಶ್‍ಕುಮಾರ್ ಮನವಿ ಮಾಡಿದರು.

Translate »