ಮರದ ಅಂಬಾರಿ ಹೊತ್ತು ಯಶಸ್ವಿ ತಾಲೀಮು ನಡೆಸಿದ ಅಭಿಮನ್ಯು
ಮೈಸೂರು

ಮರದ ಅಂಬಾರಿ ಹೊತ್ತು ಯಶಸ್ವಿ ತಾಲೀಮು ನಡೆಸಿದ ಅಭಿಮನ್ಯು

October 19, 2020

ಮೈಸೂರು,ಅ.18(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ, ಅರಮನೆಯ ಆವರಣದಲ್ಲಿ ಬೀಡುಬಿಟ್ಟಿರುವ ಅಂಬಾರಿ ಆನೆ ಅಭಿಮನ್ಯುಗೆ ಭಾನುವಾರದಿಂದ ಮರದ ಅಂಬಾರಿ ಹೊರಿಸುವ ತಾಲೀಮು ಆರಂಭಿಸಲಾಯಿತು.

ಈ ಸಾಲಿನ ಜಂಬೂಸವಾರಿ ಅ.26ರಂದು ನಡೆಯಲಿದ್ದು, ಇದಕ್ಕಾಗಿ ಗಜಪಡೆಯನ್ನು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ. ಅ.2ರಂದು ಅರಮನೆ ಆವರಣ ಪ್ರವೇಶಿಸಿದ್ದ ಅಭಿಮನ್ಯು ನೇತೃತ್ವದ ಗಜಪಡೆಗೆ ವಿಶೇಷ ಆಹಾರ ನೀಡುವ ಮೂಲಕ ಆರೈಕೆ ಮಾಡ ಲಾಗುತ್ತಿದೆ. ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೆಗಲಿಗೇರಿಸಿಕೊಂಡಿರುವ ಅಭಿಮನ್ಯು ಅದಕ್ಕಾಗಿ ಸಜ್ಜಾಗುತ್ತಿದ್ದಾನೆ. ಕಳೆದ 10 ದಿನದಿಂದ ತೊಟ್ಟಿಲೊಂದಿಗೆ 600 ಕೆಜಿ ತೂಕದ ಮರಳು ಮೂಟೆ ಹೊತ್ತು ತಾಲೀಮು ನಡೆಸಲಾಗುತ್ತಿದ್ದ ಅಭಿಮನ್ಯುವಿಗೆ ಇಂದಿನಿಂದ 6 ದಿನ ಮರದ ಅಂಬಾರಿಯೊಂದಿಗೆ 750 ಕೆಜಿ ಬಾರ ಹೊರಿಸುವ ತರಬೇತಿ ನೀಡಲಾಗುತ್ತಿದೆ.

ಈ ಸಾಲಿನ ಮರದ ಅಂಬಾರಿಯನ್ನು ಇಂದು ಮೊದಲ ಬಾರಿಗೆ ಕಟ್ಟಲಾಯಿತು. ಅ.13ರಂದು ಕ್ರೇನ್‍ಗೆ ಬಣ್ಣ ಹೊಡೆದು ಅ.15ರಂದು ಜೋಡಿಸಲಾಗಿತ್ತು. ರಾಜವಂಶಸ್ಥ ರಾದ ಪ್ರಮೋದಾದೇವಿ ಒಡೆಯರ್ ನಿವಾಸ ಮುಂಭಾಗದ ಆವರಣದಲ್ಲಿ ಜೋಡಿಸ ಲಾಗಿರುವ ಕ್ರೇನ್‍ಗೆ ಇಂದು ಬೆಳಿಗ್ಗೆ ಪೂಜೆ ಸಲ್ಲಿಸಿ ಅಭಿಮನ್ಯುವಿನ ಮೇಲೆ ಚಿನ್ನದ ಅಂಬಾರಿಯನ್ನು ಕಟ್ಟುವ ಮಾದರಿಯಲ್ಲಿಯೇ ಮರದ ಅಂಬಾರಿಯನ್ನು ಕ್ರೇನ್ ಮೂಲಕ ಮೇಲೆತ್ತಿ ಆನೆಯ ಮೇಲಿರಿಸಿ ಕಟ್ಟಲಾಯಿತು. ಬಳಿಕ ಕುಮ್ಕಿ ಆನೆಗಳಾದ ಕಾವೇರಿ, ವಿಜಯ ಆನೆಯೊಂದಿಗೆ ತಾಲೀಮಿನಲ್ಲಿ ಪಾಲ್ಗೊಂಡು ಗಮನ ಸೆಳೆಯಿತು.

ಮರದ ಅಂಬಾರಿ 350 ಕೆಜಿ ತೂಕವಿದ್ದು, ಅದರೊಂದಿಗೆ 250 ಕೆಜಿ ತೂಕದ ಮರಳು ಮೂಟೆ ಸೇರಿದಂತೆ 600 ಕೆಜಿ ಬಾರ ಹೊರಿಸಿ ಜಯಮಾರ್ತಾಂಡ ದ್ವಾರ, ಕೋಡಿ ಸೋಮೇಶ್ವರ ದೇವಾಲಯ, ತ್ರಿನೇಶ್ವರ ದೇವಾಲಯ ಹಾಗೂ ವರಹಸ್ವಾಮಿ ದೇವಾಲಯ ಮುಂಭಾಗದ ರಸ್ತೆಯಲ್ಲಿ ಎರಡು ಸುತ್ತು ತಾಲೀಮು
ನಡೆಸಲಾಯಿತು. ಅಲ್ಲದೆ ಜಂಬೂಸವಾರಿ ದಿನ ಅಂಬಾರಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಸ್ಥಳ ಹಾಗೂ ರಾಷ್ಟ್ರಗೀತೆ ನುಡಿಸುವ ವೇಳೆ ಸೊಂಡಿಲೆತ್ತಿ ಸೆಲ್ಯೂಟ್ ಹೊಡಿಸುವ ತಾಲೀಮನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್, ಡಿಸಿಎಫ್ ಎಂ.ಜಿ.ಅಲೆಗ್ಸಾಂಡರ್, ಪಶುವೈಧ್ಯ ಡಾ. ಡಿ.ಎನ್.ನಾಗರಾಜು, ಆರ್‍ಎಫ್‍ಓ ಕೆ.ಸುರೇಂದ್ರ, ಪಶುವೈದ್ಯರ ಸಹಾಯಕರಾದ ರಂಗರಾಜು, ಅಕ್ರಮ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »