ಕೊರೊನಾ ನಡುವೆಯೇ ಕೊಡಗಿನಲ್ಲಿ ಹಕ್ಕಿಜ್ವರ ಭೀತಿ ಕೊಟ್ಟಮುಡಿಯಲ್ಲಿ ಕಾಗೆಗಳ ಅಸಹಜ ಸಾವು
ಕೊಡಗು

ಕೊರೊನಾ ನಡುವೆಯೇ ಕೊಡಗಿನಲ್ಲಿ ಹಕ್ಕಿಜ್ವರ ಭೀತಿ ಕೊಟ್ಟಮುಡಿಯಲ್ಲಿ ಕಾಗೆಗಳ ಅಸಹಜ ಸಾವು

March 20, 2020

ನಾಪೋಕ್ಲು, ಮಾ.19- ಕೊಡಗಿನಲ್ಲಿ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಜನತೆ ಆತಂಕಕ್ಕೊಳಗಾಗಿದ್ದಾರೆ. ಮೈಸೂರಿನ ಕುಂಬಾರಕೊಪ್ಪಲು ವ್ಯಾಪ್ತಿಯಲ್ಲಿ ಹಕ್ಕಿಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಕೊಡಗಿನ ಹೊದ್ದೂರು ಗ್ರಾಮ ಪಂಚಾಯಿತಿ ಕೊಟ್ಟಮುಡಿಯಲ್ಲಿ ಅಂಗನವಾಡಿ ಕಟ್ಟಡದ ಹಿಂಭಾಗ ಕಾಗೆಗಳು ಅಸಹಜ ರೀತಿಯಲ್ಲಿ ಸಾವನ್ನಪ್ಪಿರುವ ಪ್ರಕರಣ ನಡೆದಿದೆ.

ಗುರುವಾರ ಬೆಳಿಗ್ಗೆ ಕೊಟ್ಟಮುಡಿಯಲ್ಲಿ 20ಕ್ಕೂ ಹೆಚ್ಚು ಕಾಗೆಗಳ ಮೃತದೇಹ ಪತ್ತೆಯಾಗಿದೆ. ಅಲ್ಲದೆ, ಇಲ್ಲಿನ ತೋಟಗಳಲ್ಲೂ ಕಾಗೆಗಳ ಮೃತದೇಹ ಪತ್ತೆಯಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿದರೆ, ಕಾಡು ಮತ್ತು ಕಾಫಿ ತೋಟಗಳಲ್ಲಿ ಇನ್ನಷ್ಟು ಕಾಗೆಗಳು ಸತ್ತಿರುವ ಶಂಕೆ ವ್ಯಕ್ತವಾಗಿದೆ. ಕೇವಲ ಕಾಗೆಗಳು ಮಾತ್ರ ಸತ್ತಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.

ಮಾರಣಾಂತಿಕ ಕೊರೊನಾ ರೋಗದಿಂದ ತತ್ತರಿಸಿರು ವಾಗಲೇ ಹಕ್ಕಿಜ್ವರ ಭೀತಿಯೂ ಎದುರಾಗಿದ್ದು, ಸಾರ್ವಜನಿಕ ರಲ್ಲಿ ಆತಂಕ ಮನೆ ಮಾಡಿದೆ. ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಮಹಾಲಕ್ಷ್ಮಿಪುರ ಪಾರ್ಕ್‍ನಲ್ಲಿ ಐದು ಕಾಗೆಗಳು ಸತ್ತು ಬಿದ್ದಿರುವುದು ನಾಗರಿಕರಲ್ಲಿ ಆತಂಕ ಸೃಷ್ಟಿಸಿತ್ತು.

ಇದೀಗ ನಾಪೋಕ್ಲು ವ್ಯಾಪ್ತಿಯಲ್ಲೂ ಇದೇ ಆತಂಕ ಮನೆ ಮಾಡಿದೆ. ಕಾಗೆಗಳು ಹಕ್ಕಿಜ್ವರ ಅಥವಾ ಬೇರೆ ಯಾವ ಕಾರಣಕ್ಕೆ ಸಾವನ್ನಪ್ಪಿವೆ ಎಂಬುದನ್ನು ಪರಿಶೀಲಿ ಸಲು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಶುವೈದ್ಯಾಧಿ ಕಾರಿಗಳ ತಂಡ ಕೊಟ್ಟಮುಡಿಯತ್ತ ತೆರಳಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿಜಾಯ್ ಮಾಧ್ಯಮ ಗಳಿಗೆ ಸ್ಪಷ್ಟನೆ ನೀಡಿದ್ದು, ಸೂಕ್ತ ಪರೀಕ್ಷೆ ಬಳಿಕವಷ್ಟೇ ಕಾಗೆಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ. ಈ ವ್ಯಾಪ್ತಿಯಲ್ಲಿ ಯಾವುದೇ ಹೈಟೆನ್ಷನ್ ವಿದ್ಯುತ್ ಲೈನ್‍ಗಳಿಲ್ಲ. ಅಲ್ಲದೆ, ವಿದ್ಯುತ್ ಸ್ಪರ್ಶವಾಗಿದ್ದರೂ, ಬೇರೆ ಬೇರೆ ಸ್ಥಳಗಳಲ್ಲಿ ಕಾಗೆಗಳು ಸತ್ತು ಬೀಳುವುದಿಲ್ಲ. ಕಾಗೆಗಳು ಸಂಘ ಜೀವಿಗಳಾಗಿರುವುದರಿಂದ, ಕೆಲವೊಮ್ಮೆ ವಿಷಯುಕ್ತ ಪದಾರ್ಥಗಳನ್ನು ಸೇವಿಸಿ ಸಾವನ್ನಪ್ಪುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಏನೇ ಇದ್ದರೂ, ಅಧಿಕಾರಿಗಳ ಪರಿಶೀಲನೆ ಮತ್ತು ಲ್ಯಾಬ್ ವರದಿ ಬಳಿಕವಷ್ಟೇ ಕಾಗೆಗಳ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಕಾಗೆ ಅತ್ಯಂತ ಬುದ್ದಿವಂತ ಪಕ್ಷಿ ಎಂದೇ ಹೆಸರಾಗಿದೆ. ಇವು ಜನವಸತಿ ಸಮೀಪವೇ ವಾಸ ಮಾಡುತ್ತವಾ ದರೂ, ಚಳಿಗಾಲದಲ್ಲಿ ವಲಸೆ ಹೋಗುತ್ತವೆ. ಇವು ಹಕ್ಕಿಮರಿ ಗಳು, ಮೊಟ್ಟೆ, ಇಲಿ, ಸಣ್ಣ ಪ್ರಾಣಿಗಳು, ಸತ್ತ ಪ್ರಾಣಿಗಳು, ತರಕಾರಿ, ತ್ಯಾಜ್ಯವಸ್ತುಗಳನ್ನು ಸೇವಿಸುತ್ತವೆ. ನಮ್ಮ ಸುತ್ತಮುತ್ತಲ ಪರಿಸರವನ್ನು ಚೊಕ್ಕಟವಾಗಿಡುವಲ್ಲಿ ಕಾಗೆಗಳ ಪಾತ್ರ ಮಹತ್ವದ್ದಾದರೂ, ಇತ್ತೀಚಿನ ವರ್ಷಗಳಲ್ಲಿ ರಸಾಯನಿಕ ಕಲುಷಿತ ಪರಿಸರವು ಕಾಗೆಗಳ ಜೀವನಕ್ಕೆ ಮಾರಕವಾಗಿದೆ ಎನ್ನಬಹುದು.

Translate »