ಕೋವಿಡ್-19 ಮಾರ್ಗಸೂಚಿ ಅನ್ವಯ ದೇವಸ್ಥಾನಗಳಿಗೆ ಪ್ರವೇಶ
ಮೈಸೂರು

ಕೋವಿಡ್-19 ಮಾರ್ಗಸೂಚಿ ಅನ್ವಯ ದೇವಸ್ಥಾನಗಳಿಗೆ ಪ್ರವೇಶ

October 11, 2020

ಮೈಸೂರು, ಅ.10(ಆರ್‍ಕೆ)-ಕೊರೊನಾ ಮಾರ್ಗಸೂಚಿಯನ್ವಯವೇ ದೇವಸ್ಥಾನ ಗಳಿಗೆ ಭಕ್ತರ ಪ್ರವೇಶಕ್ಕೆ ಅನುವು ಮಾಡಿ ಕೊಡಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರೊಂದಿಗೆ ಇಂದು ಬೆಳಿಗ್ಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಅವರು, ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳಿಂದ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ದಸರಾ ಮಹೋತ್ಸವದ ಸಂದರ್ಭ ದಲ್ಲೂ ಇದೇ ಮಾರ್ಗಸೂಚಿಗಳು ಅನ್ವಯ ವಾಗಲಿದ್ದು, ಹೆಚ್ಚಿನ ಭಕ್ತಾದಿಗಳು ಆಗಮಿ ಸುವುದರಿಂದ ರಜಾ ದಿನಗಳು ಹಾಗೂ ವಿಶೇಷ ದಿನಗಳಂದು ಚಾಮುಂಡೇಶ್ವರಿ, ಶ್ರೀ ನಂಜುಂಡೇಶ್ವರ ಸೇರಿದಂತೆ ಪ್ರಮುಖ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಪ್ಪಿ ಸಲು ಸರ್ಕಾರ ಈ ಕ್ರಮ ಜರುಗಿಸಿದ್ದು ಸಾರ್ವ ಜನಿಕರು ಸಹಕರಿಸಬೇಕೆಂದು ತಿಳಿಸಿದರು.

ಮುಕ್ತವಾಗಿ ಚರ್ಚಿಸಲಿ: ತಿರುಪತಿಯಲ್ಲಿ ಕರ್ನಾಟಕ ಭವನದ ಉನ್ನತೀಕರಣ ಕಾಮ ಗಾರಿ ವಿಚಾರದ ಸಂಬಂಧ ಮಾಜಿ ಸಚಿವ ಸಾ.ರಾ.ಮಹೇಶ್ ಮಾಡಿರುವ ಆರೋ ಪಕ್ಕೆ ಪ್ರತಿಕ್ರಿಯೆ ನೀಡಿದ ಕೋಟಾ ಶ್ರೀನಿ ವಾಸ ಪೂಜಾರಿ ಅವರು, ತಿರುಪತಿಯ ಕರ್ನಾಟಕ ಭವನದಲ್ಲಿ ಭಕ್ತಾದಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್‍ನಲ್ಲಿ ಚರ್ಚೆ ಯಾದ ಕಾರಣ 200 ಕೋಟಿ ರೂ. ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಅನಿವಾರ್ಯ ಕಾರಣಗಳಿಂದ ಅಲ್ಲಿನ ಸ್ಥಳೀಯ ನಿರ್ಮಾಣ ಕಂಪನಿ ಮೂಲಕ ಕಾಮಗಾರಿ ಮಾಡಿಸಲಾಗುತ್ತಿದೆ. ಸಾ.ರಾ. ಮಹೇಶ್ ಅವರಿಗೆ ಈ ವಿಷಯದಲ್ಲಿ ಅನುಮಾನವಿದ್ದಲ್ಲಿ ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಲಿ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಸಚಿವದ್ವಯರು

ಮೈಸೂರು, ಅ.10(ಆರ್‍ಕೆ)-ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ಬೆಳಿಗ್ಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶೀಕೇಂದ್ರ  ಸ್ವಾಮಿಗಳ ಆಶೀರ್ವಾದ ಪಡೆದರು.

ಶ್ರೀಗಳೊಂದಿಗೆ 15 ನಿಮಿಷ ಕಾಲ ಸಮಾಲೋಚನೆ ನಡೆಸಿದ ಸಚಿವರು, ದಸರಾ ಮಹೋತ್ಸವದ ಸರಳ ಆಚರಣೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಶ್ರೀಗಳಿಂದ ಅಗತ್ಯ ಸಲಹೆ, ಮಾರ್ಗದರ್ಶನ ಪಡೆದರು.

ನಂತರ ಮಠದಲ್ಲಿ ಪ್ರಸಾದ ಸ್ವೀಕರಿಸಿದ ಅವರು, ನಂತರ ಪ್ರಮತಿ ಶಾಲೆಯಲ್ಲಿ ಏರ್ಪಡಿಸಿದ್ದ ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್.ಭೈರಪ್ಪ ಅವರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮಧ್ಯಾಹ್ನ 1.30 ಗಂಟೆಗೆ ನಜರ್‍ಬಾದಿನ ಸರ್ಕಾರಿ ಅತಿಥಿ ಗೃಹದಲ್ಲಿ ದಸರಾ ಕಾರ್ಯಕ್ರಮಗಳ ಆಯೋಜನೆ, ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಚಿವರು ಬೆಂಗಳೂರಿಗೆ ಹಿಂತಿರುಗಿದರು.

ಸಭೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಕಮೀಷ್ನರ್ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ನಗರ ಪಾಲಿಕೆ ಕಮೀಷ್ನರ್ ಗುರುದತ್ ಹೆಗ್ಡೆ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಭಾರತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

 

 

Translate »