ಕ್ವಾರಂಟೈನ್ ಒಪ್ಪಿದವರಿಗೆ ರಾಜ್ಯಕ್ಕೆ ಪ್ರವೇಶಾವಕಾಶ
ಮೈಸೂರು

ಕ್ವಾರಂಟೈನ್ ಒಪ್ಪಿದವರಿಗೆ ರಾಜ್ಯಕ್ಕೆ ಪ್ರವೇಶಾವಕಾಶ

May 11, 2020

ಬೆಂಗಳೂರು, ಮೇ 10-ವಿದೇಶ ಹಾಗೂ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ. ಕ್ವಾರಂಟೈನ್ ಸೇರಿದಂತೆ ಹಲವು ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶವಿದೆ. ಇನ್ನು ಮುಂದೆ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಮೃತ ದೇಹವನ್ನು ತರುವಂತಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಭಾನುವಾರ ನಡೆದ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಹೊರ ರಾಜ್ಯದಿಂದ ಬರುವ ಕನ್ನಡಿಗರು ಕಡ್ಡಾಯವಾಗಿ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಲೇಬೇಕು. ಅವರು ಲಾಕ್‍ಡೌನ್ ವೇಳೆಯಲ್ಲಿ ಅನಿ ವಾರ್ಯವಾಗಿ ಬೇರೆ ರಾಜ್ಯದಲ್ಲಿ ಸಿಲುಕಿಕೊಂಡವರಾಗಿರ ಬೇಕು. ಯಾವ ಊರಿಗೆ ಬರುತ್ತೇವೆ, ಯಾವ ದಿನಾಂಕ ದಂದು ಬರುತ್ತೇವೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಬೇಕು. ಹೀಗೆ ಬರುವ ಅರ್ಜಿಗಳನ್ನು ಕ್ವಾರಂಟೈನ್ ವ್ಯವಸ್ಥೆಯ ಆಧಾರದ ಮೇಲೆ ಪರಿಗಣಿಸಿ ಅವರನ್ನು ಕರೆಸಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು.
ರಾಜ್ಯಕ್ಕೆ ಬಂದ ತಕ್ಷಣವೇ ಅವರು ತಮ್ಮ ಊರಿಗೆ ಹೋಗದೇ ಕಡ್ಡಾಯವಾಗಿ 14 ದಿನ ಕ್ವಾರಂಟೈನ್‍ಗೆ ಒಳ ಪಡಬೇಕು. ಕ್ವಾರಂ ಟೈನ್‍ಗೆ ಸಿದ್ಧವಿರುವವರು ಮಾತ್ರ ನೋಂದಣಿ ಮಾಡಿಸಿಕೊಳ್ಳತಕ್ಕದ್ದು. ಕ್ವಾರಂಟೈನ್‍ಗೊಳಗಾಗಲು ಒಪ್ಪದವರನ್ನು ಯಾವುದೇ ಕಾರಣಕ್ಕೂ ಕರೆಸಿಕೊಳ್ಳುವುದಿಲ್ಲ. ವಿದೇಶ ಅಥವಾ ಹೊರ ರಾಜ್ಯದಿಂದ ಬರುವ ಮೊದಲು ಅವರು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರೂ ಕೂಡ ಕರ್ನಾಟಕಕ್ಕೆ ಬಂದ ಮೇಲೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕು. ರಾಜ್ಯದ ಯಾವುದೇ ವ್ಯಕ್ತಿ ಹೊರ ರಾಜ್ಯದಲ್ಲಿ ಮೃತಪಟ್ಟರೆ ಮೃತ ದೇಹವನ್ನು ರಾಜ್ಯಕ್ಕೆ ತರುವಂತಿಲ್ಲ. ಅವರು ಎಲ್ಲಿ ಮೃತಪಟ್ಟಿದ್ದಾರೋ ಅಲ್ಲೇ ಅಂತ್ಯಸಂಸ್ಕಾರ ಮಾಡಬೇಕು. ತಾಯ್ನಾಡಿಗೆ ಬರುವ ಕನ್ನಡಿಗರ ಸುರಕ್ಷತೆ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಈ ಮಾರ್ಗ ಸೂಚಿಯನ್ನು ರೂಪಿಸಲು ತೀರ್ಮಾನಿಸಲಾಗಿದ್ದು, ಸೋಮ ವಾರ ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸುವ ವೀಡಿಯೋ ಸಂವಾದದ ವೇಳೆ ಈ ವಿಚಾರವನ್ನು ಅವರಿಗೆ ತಿಳಿಸಲು ಸಭೆ ತೀರ್ಮಾನಿಸಿದೆ.

ಇಂದಿನ ಈ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವಥ್‍ನಾರಾಯಣ್, ಗೋವಿಂದ ಕಾರಜೋಳ, ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್, ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿದಂತೆ ಹಲವು ಪ್ರಮುಖ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕೇಂದ್ರದಿಂದ ಮುಂದಿನ ವಾರ ಮತ್ತೊಂದು ಕೊರೊನಾ ಪ್ಯಾಕೇಜ್?: ನವದೆಹಲಿ: ಕೊರೊನಾ ಸಂಕಷ್ಟ ಮತ್ತು ಲಾಕ್‍ಡೌನ್‍ನಿಂದ ತೊಂದರೆಗೆ ಸಿಲುಕಿದ ದೇಶದ ಬಡವರ ಕಷ್ಟ ನಿವಾರಣೆಗಾಗಿ ಕೇಂದ್ರ ಶೀಘ್ರದಲ್ಲೇ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದೆ ಎಂದು ಹೇಳಲಾಗು ತ್ತಿದೆ. ಈಗಾಗಲೇ ಕೇಂದ್ರ ಸರ್ಕಾರವು 1.7 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಆರ್ಥಿಕತೆಯ ಸುಧಾರಣೆಗೆ ಸರ್ಕಾರ ಮುಂದಿನ ವಾರ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದು ಪ್ಯಾಕೇಜ್ ಘೋಷಣೆ ಸಂಬಂಧ ಕಳೆದ ಶನಿವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದು, ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಪ್ರಧಾನಿ ಕಾರ್ಯಾಲಯ ಸಿದ್ಧತೆ ನಡೆಸುತ್ತಿದೆ ಎಂದೂ ಹೇಳಲಾಗಿದೆ.

Translate »