ಮೈಸೂರು, ಮೇ 31(ಎಸ್‍ಪಿಎನ್)- ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಾಗೂ 24 ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಪ್ರವೇಶ ಅವಕಾಶ ಕಲ್ಪಿಸುವ ಸಂಬಂಧ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯರು ನಗರದಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಮೈಸೂರು ಅಗ್ರಹಾರದ ಜೆಎಸ್‍ಎಸ್ ಆಸ್ಪತ್ರೆ ಬಳಿ ಇರುವ ದಿವಾನ್ ಪೂರ್ಣಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಇಓ ಯತಿರಾಜು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಿವಲಿಂಗು, ಕುಮಾರಿ, ಶಶಿಕಲಾ, ಸವಿತಾ ಘಾಟ್ಕಿ ಭಾಗವಹಿಸಿದ್ದರು.
ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಉತ್ತನಹಳ್ಳಿ ಮಾರಮ್ಮ ದೇವಸ್ಥಾನ ಹಾಗೂ ಮೈಸೂರು ಅರಮನೆ ಆವರಣದಲ್ಲಿರುವ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಿಕೊಡಲು ವ್ಯವಸ್ಥಾಪನಾ ಸಮಿತಿಯಿಂದ ತೆಗೆದುಕೊಳ್ಳಬೇಕಿರುವ ಮುಂಜಾ ಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಬೆಂಗಳೂರಿನ ಹಿಂದೂ ಧಾರ್ಮಿಕ ಸಂಸ್ಥೆ ಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರ ಕಚೇರಿಯಿಂದ 8 ಮಾರ್ಗ ಸೂಚಿಗಳ ಜ್ಞಾಪನಾಪತ್ರ ಶುಕ್ರವಾರ ಬಂದಿದೆ. ಅದರಂತೆ ದೇವಸ್ಥಾನದ ಒಳ-ಹೊರ ಆವರಣದ ಸ್ವಚ್ಛತೆ, ಥರ್ಮೋ ಸ್ಕ್ಯಾನಿಂಗ್‍ನಿಂದ ಭಕ್ತರ ಆರೋಗ್ಯ ತಪಾಸಣೆ, ಮಾಸ್ಕ್ ಧರಿಸಿದÀವರಿಗೆ ಮಾತ್ರ ದೇವಸ್ಥಾನ ಪ್ರವೇಶಿಸಲು ಅನುವು ಮಾಡಿ ಕೊಡುವುದು, ದೇವಾ ಲಯ ಆವರಣದಲ್ಲಿ ರಾಸಾಯನಿಕ ಸಿಂಪಡಣೆ, ಭದ್ರತಾ ಸಿಬ್ಬಂದಿ ನೇಮಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಅಂತಿಮವಾಗಿ ರಾಜ್ಯ ಸರ್ಕಾರ ನೀಡುವ ಮಾರ್ಗಸೂಚಿ ಪಾಲಿಸಲು ತೀರ್ಮಾನಿಸಲಾಗಿದೆ ಎಂದು ಎಂದು ಇಓ ಯತಿರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದರು.