ಮೊಬೈಲ್ ಟವರ್‍ಗಳ ತಡೆಗೆ ಕ್ರಮ
ಮೈಸೂರು

ಮೊಬೈಲ್ ಟವರ್‍ಗಳ ತಡೆಗೆ ಕ್ರಮ

November 30, 2018

ಮೈಸೂರು: ಮೈಸೂರು-ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗಿದ್ದು, 3 ತಿಂಗಳ ಒಳಗೆ ಟವರ್‍ಗಳ ನೋಂದಣಿ ಮಾಡಿಸದಿದ್ದರೆ, ಕಿತ್ತೊಗೆಯುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮೈಸೂರಿನ ಮುಡಾ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಟವರ್‍ಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ ಯಲ್ಲಿ ಹಲವು ದೂರುಗಳು ಸಲ್ಲಿಕೆಯಾಗಿವೆ. ಇದನ್ನು ಮನಗಂಡು ಮೊಬೈಲ್ ಟವರ್‍ಗಳ ಹಾವಳಿಯನ್ನು ನಿಯಂತ್ರಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ಎಲ್ಲೆಲ್ಲಿ, ಎಷ್ಟೆಷ್ಟು ಟವರ್‍ಗಳಿವೆ ಎಂಬುದರ ನಿಖರ ಮಾಹಿತಿ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಟವರ್‍ಗಳ ನೋಂದಣಿ ಮಾಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈಗಾಗಲೇ ಸ್ಥಾಪಿಸಲಾಗಿರುವ ಟವರ್‌ಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.

ಹೊಸದಾಗಿ ಸ್ಥಾಪಿಸಲಾಗುವ ಟವರ್‍ಗಳಿಗೆ ಅನುಮತಿ ಪಡೆಯಲೇಬೇಕಾಗಿದೆ. ನಗರಪಾಲಿಕೆ, ಮಹಾ ನಗರಪಾಲಿಕೆ, ಪುರ ಸಭೆ, ಪಟ್ಟಣ ಸಭೆ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಡಿಯಲ್ಲಿ ಟವರ್ ನಿರ್ಮಾಣಕ್ಕೆ ಮುಂದಾದರೆ ನಿಗದಿತ ಶುಲ್ಕವನ್ನು ಪಾವತಿಸಿ ಟವರ್ ಸ್ಥಾಪಿಸ ಬಹುದಾಗಿದೆ ಎಂದರು. ಶಾಲಾ-ಕಾಲೇಜುಗಳ ಬಳಿ 50 ಮೀ. ದೂರದಲ್ಲಿ ಟವರ್ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಸಂಚಾರಿ ಟವರ್‍ಗಳಿಗೂ ಅನುಮತಿ ಹಾಗೂ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಮನೆಗಳ ಮೇಲೆ ಟವರ್ ನಿರ್ಮಾಣ ಮಾಡು ವುದಕ್ಕೆ ಮುಂದಾದರೆ ಆ ಕಟ್ಟಡದ ಭದ್ರತೆಯನ್ನು ಸ್ಥಳೀಯ ಎಂಜಿನಿಯರ್‍ಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸಮಸ್ಯೆ ತಿಳಿಯಲು ಅದಾಲತ್: ಇದೇ ಮೊದಲ ಬಾರಿಗೆ ಮುಡಾ ಅದಾಲತ್ ನಡೆಸಲಾಗಿದೆ. ಈ ಅದಾಲತ್ ನಡೆಸಿದ ಉದ್ದೇಶ ತಳ ಮಟ್ಟದಲ್ಲಿನ ಸಮಸ್ಯೆಗಳನ್ನು ಗಮನಿಸಿ ಪರಿಹರಿಸುವುದೇ ಆಗಿದೆ. ಈಗಾಗಲೇ 203 ಮಂದಿ ಅದಾಲತ್‍ನಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಬಹುತೇಕ ಸಮಸ್ಯೆಗಳು ಅಧಿಕಾರಿಗಳ ಮಟ್ಟದಲ್ಲೇ ಬಗೆಹರಿಸುವಂತಹ ಸಮಸ್ಯೆಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿದೆ. ಇನ್ನಷ್ಟು ಪ್ರಕರಣಗಳಿಗೆ ಮುಡಾ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

Translate »