ಸಂಸ್ಕøತಿ-22 ಸಾಂಸ್ಕøತಿಕ ಕಾರ್ಯಕ್ರಮಕ್ಕೆ ನಟ ಶಿವರಾಜ್‍ಕುಮಾರ್ ಚಾಲನೆ
ಮೈಸೂರು

ಸಂಸ್ಕøತಿ-22 ಸಾಂಸ್ಕøತಿಕ ಕಾರ್ಯಕ್ರಮಕ್ಕೆ ನಟ ಶಿವರಾಜ್‍ಕುಮಾರ್ ಚಾಲನೆ

November 5, 2022

ಮೈಸೂರು, ನ.4(ಜಿಎ)- ಮೈಸೂರು ನನ್ನ ನೆಚ್ಚಿನ ಊರಾಗಿದ್ದು, ನಮ್ಮ ಕುಟುಂಬಕ್ಕೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ ಎಂದು ಚಲನಚಿತ್ರ ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನಗರದ ಜೆ.ಕೆ. ಮೈದಾನದ ಆವರಣದಲ್ಲಿರುವ ಕಾಲೇಜಿನ ಅಲ್ಯುಮ್ನಿ ಅಸೋಸಿಯೇಷನ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಸಂಸ್ಕೃತಿ-22’ರ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮೊದಲು ನಮ್ಮ ತಂದೆ ಶೂಟಿಂಗ್‍ಗಾಗಿ ಮೈಸೂರಿಗೆ ಬರುತ್ತಿದ್ದರು. ನಂತರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಕ್ತಿಧಾಮ ನಿರ್ಮಿಸಿದರು. ಈಗ ನನಗೂ ಮೈಸೂರು ಎರಡನೇ ಮನೆಯಾಗಿದ್ದು, ಇಲ್ಲಿನ ಕಾಫಿ, ಬಿರಿಯಾನಿ ಮತ್ತು ಮೈಸೂರಿನ ವಾತಾವರಣ ತುಂಬ ಇಷ್ಟ. ಎಲ್ಲರೂ ನೆಮ್ಮದಿ ಜೀವನ ನಡೆಸಲು ಸಾಧ್ಯವಿದೆ ಎಂದು ಮೈಸೂರನ್ನು ಕೊಂಡಾಡಿದರು. ನಮ್ಮ ಕುಟುಂಬಕ್ಕೂ ಡಾಕ್ಟರ್‍ಗೂ ಸಂಬಂಧವಿದ್ದು, ಕುಟುಂಬದಲ್ಲಿ ಅನೇಕರು ಡಾಕ್ಟರ್‍ಗಳಾಗಿದ್ದಾರೆ. ನನ್ನ ಮಗಳು ಸಹ ಇಲ್ಲಿಯೇ ಎಂಬಿಬಿಎಸ್ ಪದವಿ ಪಡೆದಿದ್ದಾಳೆ. ಮತ್ತೊಂದೆಡೆ ನಮ್ಮ ತಂದೆ, ತಾಯಿ, ನನಗೆ ಹಾಗೂ ನಮ್ಮೆಲ್ಲರ ಪ್ರೀತಿಯ ಅಪ್ಪುಗೂ ಗೌರವ ಡಾಕ್ಟರೇಟ್ ಇಲ್ಲಿಯೇ ನೀಡಲಾಗಿದೆ ಎಂದರು.

ತಂದೆಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿದ ನಂತರ 1994ರಲ್ಲಿ ಇದೇ ಮೈದಾನದಲ್ಲಿ ಅವರನ್ನು ಅಭಿನಂದಿಸಲಾಗಿತ್ತು. ಅಂದು ‘ಜೇನಿನ ಹೊಳೆಯೊ ಹಾಲಿನ ಮಳೆಯೋ’ ಗೀತೆ ಹಾಡಿದ್ದ ತಕ್ಷಣ ಮಳೆ ಸುರಿದಿತ್ತು. ಆ ದೃಶ್ಯ ಇಂದಿಗೂ ನನಗೆ ಕಣ್ಮುಂದೆ ಬರುತ್ತಿದೆ. 99 ವರ್ಷ ತುಂಬಿರುವ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ. ಶತಮಾ ನೋತ್ಸವದ ಕಾರ್ಯಕ್ರಮಕ್ಕೂ ಬರುತ್ತೇನೆ ಎಂದು ತಿಳಿಸಿದರು.

ನಂತರ ನಟ ಶಿವರಾಜ್ ಕುಮಾರ್ ಅವರು ತಾವು ನಟಿಸಿದ ಚಿತ್ರಗಳ ಗೀತೆಗಳನ್ನು ಹಾಡಿದರಲ್ಲದೆ ನೃತ್ಯ ಮಾಡುವುದರೊಂದಿಗೆ ಕೆಲವು ಚಿತ್ರಗಳ ಡೈಲಾಗ್ ಹೇಳಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಎಂಎಂಸಿ ಅಂಡ್ ಆರ್‍ಐ ಡೀನ್ ಅಂಡ್ ಡೈರೆಕ್ಟರ್ ಡಾ.ಕೆ.ಆರ್.ದಾಕ್ಷಾಯಿಣಿ, ಕೆ.ಆರ್. ಆಸ್ಪತ್ರೆ ಅಧೀಕ್ಷಕ ಡಾ.ನಂಜುಂಡಸ್ವಾಮಿ, ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕ ಡಾ.ರಾಜೇಂದ್ರ ಕುಮಾರ್, ಪಿಕೆಟಿಬಿ ಆಸ್ಪತ್ರೆ ಅಧೀಕ್ಷಕ ಡಾ.ಸಿ. ಪ್ರಶಾಂತ್, ಸ್ಟೂಡೆಂಟ್ ವೇಲ್ಫೇರ್ ಆಫೀಸರ್ ಡಾ.ಎಸ್. ಚಂದ್ರಶೇಖರ್ ಸೇರಿದಂತೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Translate »