ಆದಿಜಾಂಬವ ಶಾಸಕರು, ಸಾಹಿತಿಗಳ ಸನ್ಮಾನ ಸಮಾರಂಭಕ್ಕೆ ಮೈಸೂರು ಭಾಗದ ಮುಖಂಡರ ಕಡೆಗಣನೆ ಆರೋಪ
ಮೈಸೂರು

ಆದಿಜಾಂಬವ ಶಾಸಕರು, ಸಾಹಿತಿಗಳ ಸನ್ಮಾನ ಸಮಾರಂಭಕ್ಕೆ ಮೈಸೂರು ಭಾಗದ ಮುಖಂಡರ ಕಡೆಗಣನೆ ಆರೋಪ

July 29, 2018

ಮೈಸೂರು: ಬೆಂಗಳೂರಿನಲ್ಲಿ ಆದಿಜಾಂಬವ ಸಮುದಾಯದ ಶಾಸಕರು, ಸಾಹಿತಿಗಳು ಹಾಗೂ ಕಲಾವಿದರಿಗೆ ಜು.29ರಂದು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಆದರೆ ಮೈಸೂರು ಭಾಗದ ಸಮುದಾಯದ ಮುಖಂಡರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲೂ ಹಾಕಿಸದೇ ಕಡೆಗಣಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಮಂಡ್ಯ ಜಿಲ್ಲಾ ಸಮಿತಿ ಆರೋಪಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ ಮಾತನಾಡಿ, ಬೆಂಗಳೂರಿನ ಭಾವರೂಪಕ ಪ್ರತಿಷ್ಠಾನ ಟ್ರಸ್ಟ್ ಹಾಗೂ ಆದಿಜಾಂಬವ ಜಾಗೃತ ವೇದಿಕೆ ಜಂಟಿ ಆಶ್ರಯದಲ್ಲಿ ಆದಿಜಾಂಬವ ಸಮುದಾಯಕ್ಕಾಗಿ ಆಯೋಜಿಸಿರುವ ಈ ಸಮಾ ರಂಭದಲ್ಲಿ ಮೈಸೂರು ಭಾಗದಲ್ಲಿನ ಸಮುದಾಯದ ಮುಖಂಡರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಮೇಯರ್ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ್ ಸೇರಿದಂತೆ ಅನೇಕ ಮುಖಂಡರು ಆದಿಜಾಂಬವ ಮಾದಿಗ ಕುಲಬಾಂಧವರಾಗಿದ್ದರೂ ಪೌರಕಾರ್ಮಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಕುಟುಂಬದಿಂದ ಬಂದವರು ಎಂಬ ಕಾರಣಕ್ಕೆ ಈ ರೀತಿ ನಿರ್ಲಕ್ಷ್ಯ ಮಾಡಲಾಗಿದೆ. ಕಸ ಗುಡಿಸುವ ಜನರು, ಮಲ-ಮೂತ್ರ ಸ್ವಚ್ಛಗೊಳಿಸುವ ಜನ ಎಂದು ತಮ್ಮ ಸಮುದಾಯದವರನ್ನೇ ಶೋಷಿತ ಸಮಾಜವೊಂದು ಅಸ್ಪೃಶ್ಯರಾಗಿ ಕಾಣುತ್ತಿರುವುದು ದೊಡ್ಡ ದುರಂತ ಎಂದು ವಿಷಾದಿಸಿದರು.

ಸಂಘಟನೆಯ ಮಂಡ್ಯ ಜಿಲ್ಲಾ ಸಂಘಟನಾ ಸಂಚಾಲಕರಾದ ಎಸ್.ಕುಮಾರ, ಆರ್.ಆರ್ಮುಗಂ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »