ಸಂಸದ ಪ್ರತಾಪ್ ಸಿಂಹರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಮೈಸೂರು

ಸಂಸದ ಪ್ರತಾಪ್ ಸಿಂಹರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

July 29, 2018

ಮೈಸೂರು: ಸಂಸದ ಪ್ರತಾಪ್ ಸಿಂಹ ಅವರು ಇಂದು ಮೈಸೂರಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ವಿಜಯನಗರ 2ನೇ ಹಂತದ ಹೈಟೆನ್ಷನ್ ರಸ್ತೆಯಲ್ಲಿರುವ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಕೃಷ್ಣದೇವರಾಯ ಸರ್ಕಲ್ ಬಳಿ ಪ್ರತಾಪ್ ಸಿಂಹ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಅಮೃತ ಯೋಜನೆಯ 1 ಕೋಟಿ ರೂ. ಅನುದಾನದಲ್ಲಿ ಮೈಸೂರು ಮಹಾನಗರ ಪಾಲಿಕೆ ಕೈಗೊಂಡಿರುವ ಕಾಮಗಾರಿಗೆ ಕೇಂದ್ರ ಸರ್ಕಾರದ ಶೇ. 50 ರಷ್ಟು ಅನುದಾನ ರಾಜ್ಯ ಸರ್ಕಾರ ಶೇ. 25 ಮತ್ತು ಪಾಲಿಕೆಯು ಶೇ. 25 ರಷ್ಟು ಅನುದಾನವನ್ನು ಬಳಸಲಾಗುತ್ತಿದೆ. 38.86 ಲಕ್ಷ ರೂ.ಗಳಲ್ಲಿ ಸಿವಿಲ್ ಕಾಮಗಾರಿ, 16.45 ಲಕ್ಷ ರೂ.ಗಳಲ್ಲಿ ಎಲೆಕ್ಟ್ರಿಕಲ್ ಕೆಲಸ, 19.91 ಲಕ್ಷ ರೂ.ಗಳಲ್ಲಿ ಮಕ್ಕಳ ಆಟೋಪಕರಣಗಳು, 3.84 ಲಕ್ಷ ರೂ.ಗಳಲ್ಲಿ ಜಿಮ್ ಐಟಂಗಳು, 19.76 ಲಕ್ಷ ರೂ. ಹಣದಲ್ಲಿ ತೋಟಗಾರಿಕೆ ಅಭಿವೃದ್ಧಿ ಹಾಗೂ 15 ಸಾವಿರ ರೂ.ಗಳಲ್ಲಿ ಇತರ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 6 ತಿಂಗಳೊಳಗಾಗಿ ಕೆಲಸ ಮುಕ್ತಾಯಗೊಳಿಸುವಂತೆ ಗುತ್ತಿಗೆದಾರ ಸಿದ್ದಯ್ಯ ಯೋಗೇಶ ಅವರಿಗೆ ಸೂಚಿಸಲಾಗಿದೆ.

ಮಾಜಿ ವಿಧಾನ ಪರಿಷತ್ ಸದಸ್ಯ ಡಿ. ಮಾದೇಗೌಡ, ಶಾಸಕ ಎಲ್. ನಾಗೇಂದ್ರ, ಕಾರ್ಪೊರೇಟರ್ ಮಹದೇವಪ್ಪ, ಪಾಲಿಕೆ ಅಧಿಕಾರಿಗಳು ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.ನಂತರ ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ಅವರು ವಿಜಯನಗರ ರೈಲ್ವೇ ಬಡಾವಣೆಯಲ್ಲಿರುವ ಕೊಡವ ಗೌಡ ಸಮಾಜ ಭವನದ ಮೊದಲ ಮಹಡಿಯ ಕಟ್ಟಡ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಿದರು. ತಾವು ಕಾಮಗಾರಿಗೆ 20 ಲಕ್ಷ ರೂ.ಗಳನ್ನು ಸಂಸದರ ಅನುದಾನದಿಂದ ಮಂಜೂರು ಮಾಡಿ ಈಗಾಗಲೇ 10 ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದೇನೆ. ಮುಂದೆಯೂ ನಿಮ್ಮ ಜೊತೆಗಿದ್ದು ಸಹಕಾರ ನೀಡುತ್ತೇನೆಂದು ಸಿಂಹ ಭರವಸೆ ನೀಡಿದರು.

ನಂತರ ಮಾತನಾಡಿದ ನಾಗೇಂದ್ರ ಅವರು, ತಾವೂ ಸಹ 10 ಲಕ್ಷ ರೂ.ಗಳ ಅನುದಾನ ಕೊಡುವುದಾಗಿ ಪ್ರಕಟಿಸಿದರು. ಕೊಡಗು ಗೌಡ ಸಮಾಜ ಮೈಸೂರು ಅಧ್ಯಕ್ಷ ಚೆಟ್ಟಿಮಾಡ ಯು. ಜನಾರ್ಧನ, ಕಾರ್ಯದರ್ಶಿ ಕುಂಟಿಕಣ ಗಣಪತಿ, ಗೌರವ ಕಾರ್ಯದರ್ಶಿ ನಯಿನಿರ ರಮೇಶ ಸೇರಿದಂತೆ ಸಮಾಜದ ಹಲವರು ಈ ವೇಳೆ ಉಪಸ್ಥಿತರಿದ್ದು, ವಿಸ್ತರಣಾ ಕಟ್ಟಡಕ್ಕೆ 1 ಕೋಟಿ ರೂ. ವೆಚ್ಚವಾಗಲಿದ್ದು, ಮತ್ತಷ್ಟು ಅನುದಾನ ಕೊಡಿಸುವಂತೆ ಮನವಿ ಮಾಡಿದರು.

ಮಡಿವಾಳ ಸಮಾಜದಿಂದ ಕುಕ್ಕರಹಳ್ಳಿ ಬಳಿ ನಿರ್ಮಿಸುತ್ತಿರುವ ದೋಬಿ ಘಾಟ್ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಸಂಸದರ ಅನುದಾನದಡಿ 5 ಲಕ್ಷ ರೂ., 6 ಲಕ್ಷ ರೂ. ವೆಚ್ಚದಲ್ಲಿ ಚಾಮರಾಜಪುರಂನ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿನ ಟೆನಿಸ್ ಕ್ಲಬ್ ಅಭಿವೃದ್ಧಿ ಕಾಮಗಾರಿ, ಶಾರದಾದೇವಿನಗರ ಬಳಿ ಪಾರ್ಕ್ ಅಭಿವೃದ್ಧಿ ಕೆಲಸಗಳಿಗೂ ಸಂಸದರು ಗುದ್ದಲಿ ಪೂಜೆ ನೆರವೇರಿಸಿದರು.

Translate »