ಗಂಗೋತ್ರಿ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ
ಮೈಸೂರು

ಗಂಗೋತ್ರಿ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ

July 29, 2018

ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗಿನ ತಂಪಾದ ವಾತಾವರಣದಲ್ಲಿ ಭಕ್ತಿಭಾವದ ಗುರುಪೂರ್ಣಿಮೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಶಾಲಾ ಕಾಲೇಜಿನ ಆವರಣದಲ್ಲಿ ಶ್ರೀ ಆದಿಗುರು ಶಂಕರಾಚಾರ್ಯರಿಗೆ ಪೂಜೆ ಸಲ್ಲಿಸುತ್ತಾ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ಮೊದಲಿಗೆ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಸುರವಿ ತನ್ನ ಸುಮಧುರವಾದ ಕಂಠದಿಂದ ಪ್ರಾರ್ಥನೆ ಮಾಡಿದರು. ಆಂಗ್ಲ ಪ್ರಾಧ್ಯಾಪಕರಾದ ಲಕ್ಷ್ಮಿ ಚೌಧರಿರವರ ರಚನೆಯ ಗುರುಭಕ್ತಿಯನ್ನು ಬಿಂಬಿಸುವ ಗೀತೆಯನ್ನು ಕಾಲೇಜಿನ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಹಾಡಿದರು. ಕಾಲೇಜಿನ ವಿವಿಧ ವಿದ್ಯಾರ್ಥಿಗಳು ಗುರುವಿನ ಪ್ರಾಮುಖ್ಯತೆ ಹಾಗೂ ಅವರ ಜೊತೆ ಯಾವ ರೀತಿಯ ಅವಿನಾಭಾವ ಸಂಬಂಧವನ್ನು ಹೊಂದಿದ್ದೇವೆ ಎಂಬುದರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾಲೇಜಿನ ಉಪನ್ಯಾಸಕ ಮಹೇಂದ್ರ ಮಾತನಾಡಿ, ನೀವು ಈ ದೇಶದ ಶ್ರೇಷ್ಠ ಪ್ರಜೆಗಳಾಗಬೇಕಾದರೆ ಮೊದಲು ನಿಮ್ಮ ಮಾತಾ, ಪಿತ ಹಾಗೂ ಆಚಾರ್ಯರಿಗೆ ವಿನಮ್ರತೆಯನ್ನು ತೋರಿಸಬೇಕು. ಈ ದಿನದಿಂದಲೇ ನಿಮ್ಮ ತಂದೆ ತಾಯಿಗೆ ನಮಸ್ಕಾರವನ್ನು ಮಾಡಿ ತಾಯಿಯ ಪಾದದ ಧೂಳಿನಲ್ಲೇ ಸ್ವರ್ಗ ಎನ್ನುವುದು ನಿಮಗೆ ಸಿಗುತ್ತದೆ. ಅಲ್ಲಿಗೆ ನಿಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಮಕ್ಕಳನ್ನು ಪ್ರೇರೇಪಿಸಿದರು.

ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ರೇಖಾರವರು ಆಷಾಢಮಾಸದ ಪೌರ್ಣಮಿಯಂದು ಬರುವ ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸುತ್ತಾ, ಗುರು ಪದದ ಅರ್ಥ ಹಾಗೂ ಆ ಹೆಸರಿನಲ್ಲಿರುವ ಅಗಾಧವಾದ ಶಕ್ತಿಯನ್ನು ಸವಿವರವಾಗಿ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು.

ಸಂಯೋಜನಾಧಿಕಾರಿ ಶ್ರೀಮತಿ ಕಾಂತಿನಾಯಕ್ ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಝರೀನಾ ಬಾಬುಲ್ ಮತ್ತಿತರರು ಹಾಜರಿದ್ದರು.

Translate »