ಗಂಗೋತ್ರಿ ಕಾಲೇಜಿನಲ್ಲಿ ಯೋಗ-ಪ್ರೇರಣ ಕಾರ್ಯಕ್ರಮ
ಮೈಸೂರು

ಗಂಗೋತ್ರಿ ಕಾಲೇಜಿನಲ್ಲಿ ಯೋಗ-ಪ್ರೇರಣ ಕಾರ್ಯಕ್ರಮ

July 31, 2018

ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳ ಯಶಸ್ಸಿಗಾಗಿ ಯೋಗ-ಪ್ರೇರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮೈಸೂರಿನ ಶ್ರೀ ವೇದವ್ಯಾಸ ಯೋಗ ಫೌಂಡೇಷನ್ ಸಂಸ್ಥಾಪಕ ಡಾ.ಕೆ.ರಾಘವೇಂದ್ರ ಆರ್.ಪೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಗಿಲ್ ವಿಜಯ ದಿವಸದ ಮಹತ್ವ ತಿಳಿಸಿ, ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರ ಸಾಧನೆ ಬಗ್ಗೆ ವಿವರಿಸಿದರು. ಸ್ವಾಮಿ ಜಗದಾತ್ಮಾನಂದರ ‘ಬದುಕಲು ಕಲಿಯಿರಿ’ ಪುಸ್ತಕ ಕುರಿತು ವಿವರಿಸಿದರು. ಮಕ್ಕಳಿಗೆ ಬೌದ್ಧಿಕ, ಮಾನಸಿಕ, ಭಾವನಾತ್ಮಕ, ಶಾರೀರಿಕ ಆಧ್ಯಾತ್ಮಿಕ ಪರಿಕಲ್ಪನೆಯನ್ನು ತಿಳಿಸಿದರು.

ವ್ಯಕ್ತಿಗೆ ಪ್ರೇರಣೆ ನೀಡುವ ನವಶಕ್ತಿಗಳ ಬಗ್ಗೆ ವಿವರಣೆ ನೀಡುತ್ತಾ ನವರಾತ್ರಿ ವಿಶೇಷತೆಯನ್ನು ಸರಳವಾಗಿ ತಿಳಿಸಿದರು. ಮಾನವ ಸಂಕುಲದ ಬೆಳವಣಿಗೆ ಮತ್ತು ವಿಕಾಸ ತತ್ವವನ್ನು ವಿವರಿಸಿ ದಶಾವತಾರದ ಸಂಪೂರ್ಣ ಮಾಹಿತಿ ನೀಡಿದರು. 1987ರಲ್ಲಿ ಲಂಡನ್ನಿನಲ್ಲಿ ಡಾ.ಪೈರವರ ಯೋಗ ಶಕ್ತಿ ವಿಶ್ವ ದಾಖಲೆಯಾಯಿತು. ಅದನ್ನು ‘ಸೂಪರ್ ಬ್ರೈನ್ ಯೋಗ’ ಎಂದು ಕರೆಯುತ್ತಾರೆ. ಇದರಲ್ಲಿ ಬರುವ ಕರ್ಣತಂತ್ರ ಹಾಗೂ ಪ್ರಾಣತಂತ್ರ ಮನಸ್ಸನ್ನು ನಿಗ್ರಹಿಸುವ ಏಕಾಗ್ರತೆಯ ತಂತ್ರ ಮೊದಲಾದ ತಂತ್ರಗಳನ್ನು ಮಕ್ಕಳಿಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಅಧ್ಯಕ್ಷ ಟಿ.ರಂಗಪ್ಪನವರು ಕಾರ್ಗಿಲ್ ಯುದ್ಧ ಗೆದ್ದು 18 ವರ್ಷ ಕಳೆದಿದೆ. ಪ್ರತಿ ವರ್ಷ ಜು.26ರಂದು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿ ನಮನ ಸಲ್ಲಿಸುತ್ತೇವೆ. ದೇಶದ ಗಣ್ಯಾತಿಗಣ್ಯರೂ ಕಾರ್ಗಿಲ್ ವಿಜಯ ದಿವಸ ನೆನಪಿಸಿಕೊಂಡು ಸೈನಿಕರ ಬಲಿದಾನವನ್ನು ಕೊಂಡಾಡಿ, ಬಲಿದಾನ ಮಾಡಿದ ವೀರ ಸೈನಿಕರನ್ನು ಈ ದಿನ ನೆನೆಯೋಣ ಎಂದರು. ಕಾರ್ಯಕ್ರಮದಲ್ಲಿ ಸಂಯೋಜನಾಧಿಕಾರಿ ಶ್ರೀಮತಿ ಕಾಂತಿ ನಾಯಕ್, ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಹಾಗೂ ಇತರರು ಭಾಗವಹಿಸಿದ್ದರು.

Translate »