ಭಾರತದ ಅರ್ಥ ವ್ಯವಸ್ಥೆ ವಿಚಾರದಲ್ಲಿ ಅನ್ಯ ದೇಶೀಯ ವ್ಯವಸ್ಥೆ ಹೋಲಿಕೆ ಸಮಂಜಸವಲ್ಲ: ಆರ್ಥಿಕ ಚಿಂತಕ ಡಾ. ಸಿ.ಕೆ. ರೇಣುಕಾರ್ಯ ಅಭಿಮತ
ಮೈಸೂರು

ಭಾರತದ ಅರ್ಥ ವ್ಯವಸ್ಥೆ ವಿಚಾರದಲ್ಲಿ ಅನ್ಯ ದೇಶೀಯ ವ್ಯವಸ್ಥೆ ಹೋಲಿಕೆ ಸಮಂಜಸವಲ್ಲ: ಆರ್ಥಿಕ ಚಿಂತಕ ಡಾ. ಸಿ.ಕೆ. ರೇಣುಕಾರ್ಯ ಅಭಿಮತ

July 31, 2018

ಮೈಸೂರು: ಭಾರತದ ಆರ್ಥಿಕ ಸ್ಥಿತಿಗತಿ ವಿಶ್ಲೇಷಿಸಿ ಅರ್ಥೈಸಿಕೊಳ್ಳಲು ಅನ್ಯ ದೇಶೀಯ ಆರ್ಥಿಕ ಸಿದ್ಧಾಂತಗಳು ಹೆಚ್ಚು ಪ್ರಯೋಜನಕ್ಕೆ ಬಾರದು. ಈ ಹಿನ್ನೆಲೆಯಲ್ಲಿ ದೇಶದ ಅರ್ಥ ವ್ಯವಸ್ಥೆಗೆ ಅನುಗುಣವಾಗಿ ನಮ್ಮದೇ ಆರ್ಥಿಕ ಸಿದ್ಧಾಂತಗಳನ್ನು ಸಿದ್ಧಪಡಿಸಬೇಕಿದೆ ಎಂದು ಆರ್ಥಿಕ ಚಿಂತಕರೂ ಆದ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ ಅಭಿಪ್ರಾಯಪಟ್ಟರು.

ಪದವಿ ಪೂರ್ವ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲಾ ಉಪನಿರ್ದೇಶಕರ ಕಚೇರಿ ಜಂಟಿ ಆಶ್ರಯದಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರಿಗೆ ಅರ್ಥಶಾಸ್ತ್ರ ಕುರಿತಂತೆ ಮೈಸೂರಿನ ಗೋಪಾಲಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿರುವ 7 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಮೆರಿಕ, ಬ್ರಿಟನ್ ಸೇರಿದಂತೆ ಅನ್ಯ ದೇಶೀಯ ತಜ್ಞರ ಆರ್ಥಿಕ ಸಿದ್ಧಾಂತಗಳು ದೇಶದ ಆರ್ಥಿಕ ವ್ಯವಸ್ಥೆಗೆ ಪೂರಕವಾಗಿಲ್ಲ. ಹೀಗಾಗಿ ಈ ಸಿದ್ಧಾಂತಗಳ ಮೂಲಕ ನಮ್ಮ ಅರ್ಥ ವ್ಯವಸ್ಥೆ ವಿಶ್ಲೇಷಣೆ ಕಷ್ಟಸಾಧ್ಯ. ಭಾರತದ ಅರ್ಥ ವ್ಯವಸ್ಥೆ ವಿಶಿಷ್ಟ ಹಾಗೂ ವಿಭಿನ್ನ ಲಕ್ಷಣ ಹೊಂದಿದೆ. ಹಾಗಾಗಿ ನಮ್ಮದೇ ಪರಿಕಲ್ಪನೆಯಡಿ ಆರ್ಥಿಕ ಚಿಂತನೆಗಳು ಮೂಡಿಬರಬೇಕು ಎಂದು ಪ್ರತಿಪಾದಿಸಿದರು.

ಅರ್ಥಶಾಸ್ತ್ರ ಕಾಲಕ್ಕನುಗುಣವಾಗಿ ಅನೇಕ ಬದಲಾವಣೆಗಳನ್ನು ಕಾಣುತ್ತ ಸಾಗುತ್ತಿದೆ. ಈ ಬದಲಾವಣೆ ಪ್ರಕ್ರಿಯೆಯೊಂದಿಗೆ ಅರ್ಥೈಸಿಕೊಳ್ಳಲು ಅತ್ಯಂತ ಕ್ಲಿಷ್ಟ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಸೂಕ್ಷ್ಮ ಅರ್ಥಶಾಸ್ತ್ರದ ವಿಶ್ಲೇಷಣೆ ಮಾಡಿದರೆ ಸಾಕು ಅದನ್ನು ವಿಸ್ತರಿಸಿಕೊಂಡು ಸಮಗ್ರ ಅರ್ಥಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಬಹುದು ಎಂಬ ಭಾವನೆ 1926ರವರೆಗೆ ಇತ್ತು. ಆದರೆ ಆ ಬಳಿಕ ಅದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ನಂತರ ಈ ಎರಡನ್ನೂ ಅದರದೇ ಸಿದ್ಧಾಂತಗಳ ಮೂಲಕ ಅರ್ಥೈಸಿಕೊಳ್ಳುವ ಪ್ರಯತ್ನ ಸೂಕ್ತ ಎಂಬ ನಿಲುವಿಗೆ ಬರಲಾಯಿತು. ಇದಕ್ಕಾಗಿ ಸಂಖ್ಯಾಶಾಸ್ತ್ರ ಹಾಗೂ ಗಣಿತಶಾಸ್ತ್ರವನ್ನು ವ್ಯಾಪಕವಾಗಿ ಬಳಸಿಕೊಳ್ಳಲು ಪ್ರಾರಂಭಿಸಲಾಯಿತು ಎಂದು ವಿವರಿಸಿದರು.

ಸಮಗ್ರ ಅರ್ಥಶಾಸ್ತ್ರ ಅರ್ಥೈಸಿಕೊಳ್ಳಲು ಸಿದ್ಧಾಂತಗಳು ಇದ್ದರೂ ವಿಶ್ಲೇಷಣೆ ಕ್ಲಿಷ್ಟವಾಗಿಯೇ ಉಳಿದಿದೆ. ಇದೇ ಕಾರಣಕ್ಕೆ ಅಮೆರಿಕದಂತಹ ದೇಶದಲ್ಲೂ ಬಹುತೇಕ ಪ್ರಾಧ್ಯಾಪಕರು ಸಮಗ್ರ ಅರ್ಥಶಾಸ್ತ್ರ ಕುರಿತ ಪಾಠಪ್ರವಚನ ನೀಡಲು ಮುಂದೆ ಬಾರದ ಸ್ಥಿತಿ ಇದೆ. ಹೀಗಾಗಿ ನಮ್ಮ ವಿದ್ಯಾರ್ಥಿಗಳ ಅಲೋಚನಾ ಕ್ರಮ ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಉಪನ್ಯಾಸಕರು ಬೋಧನಾ ಕೌಶಲ್ಯ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಜೀಮ್ ಪ್ರೇಮ್‍ಜೀ ಸಂಸ್ಥೆ ಭಾರತದ ಅರ್ಥ ವ್ಯವಸ್ಥೆಗೆ ಅನುಗುಣವಾದ ಆರ್ಥಿಕ ಚಿಂತನೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದೆ. ಜೊತೆಗೆ ದೇಶದ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸುವ ಕೆಲಸವನ್ನೂ ಮಾಡುತ್ತಿದೆ. ಕನ್ನಡದ ಅನುವಾದಕ್ಕೆ ಸಂಬಂಧಿಸಿದಂತೆ ನಾನು ಸಂಯೋಜಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಸಮಾಜ ವಿಜ್ಞಾನಗಳಲ್ಲಿ ಎತ್ತರ ಸ್ಥಾನ: ಅರ್ಥಶಾಸ್ತ್ರವು ಸಮಾಜ ವಿಜ್ಞಾನಗಳ ವಿಷಯಗಳ ಪೈಕಿ ಎತ್ತರದ ಸ್ಥಾನದಲ್ಲಿದೆ. ಆದರೆ ಇಂತಹ ಉನ್ನತ ಸ್ಥಾನದಲ್ಲಿರುವ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ದಕ್ಷಿಣ ಭಾರತದಲ್ಲಿ ಇತ್ತೀಚೆಗೆ ಇಳಿಮುಖವಾಗುತ್ತಿದೆ. ಈ ಹಿಂದೆ ಮೈಸೂರು ವಿವಿ ಸ್ನಾತಕೋತ್ತರ ಪದವಿಯ ಅರ್ಥಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರವೇಶ ಪಡೆಯುವುದೇ ಒಂದು ಹೆಚ್ಚುಗಾರಿಕೆ ಎನ್ನುವಂತಹ ವಾತಾವರಣವಿತ್ತು. ಆದರೆ ಪ್ರಸ್ತುತ ಅಂತಹ ಸನ್ನಿವೇಶ ಇಲ್ಲವಾಗಿದೆ ಎಂದು ಡಾ.ಸಿ.ಕೆ.ರೇಣುಕಾರ್ಯ ವಿಷಾದಿಸಿದರು.

ಎರಡು ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಪಿಯು ಕಾಲೇಜುಗಳ 150ಕ್ಕೂ ಹೆಚ್ಚು ಉಪನ್ಯಾಸಕರು ಹಾಗೂ ಅಧ್ಯಾಪಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಮೈಸೂರು ಜಿಲ್ಲಾ ಉಪನಿರ್ದೇಶಕ ಡಾ.ದಯಾನಂದ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಂಜುನಾಥ್ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪದವಿಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರ ಹಾಗೂ ಪ್ರಾಚಾರ್ಯರ ವೇದಿಕೆ ರಾಜ್ಯಾಧ್ಯಕ್ಷ ಕಾಡ್ನೂರು ಶಿವೇಗೌಡ, ಕಾರ್ಯಾಗಾರದ ಸಂಯೋಜಕ ಬಿ.ಎಸ್.ಜಗದೀಶ್, ಸಹ ಸಂಚಾಲಕ ಜನಾರ್ಧನ್ ಮತ್ತಿತರರು ಹಾಜರಿದ್ದರು.

ಅರ್ಥಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪದವಿಪೂರ್ವ ಕಾಲೇಜುಗಳಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‍ಸಿಇಆರ್‍ಟಿ) ಪಠ್ಯಕ್ರಮ ಜಾರಿಗೊಳ್ಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಪಿಯು ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರಿಗೆ ಈ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಖಾಸಗಿ ಪಿಯು ಕಾಲೇಜಿನ ಉಪನ್ಯಾಸಕರಿಗೂ ಇದೇ ಮಾದರಿಯಲ್ಲಿ ತರಬೇತಿ ಕಾರ್ಯಕ್ರಮ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆಗೆ ಖಾಸಗಿ ಕಾಲೇಜುಗಳ ಉಪನ್ಯಾಸಕರು ಮನವಿ ಮಾಡಿದ್ದಾರೆ.

Translate »