- ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಹಾಳೆ, ಪ್ಲೇಟ್, ಚಮಚ, ಬಾಟಲಿಗಳ ಬಳಕೆ ನಿಂತಿಲ್ಲ
– ರಾಜಕುಮಾರ್ ಭಾವಸಾರ್
ಮೈಸೂರು: ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳ ನಿಷೇಧವಿದ್ದರೂ ಮೈಸೂರಿನ ಬಹುತೇಕ ಕಲ್ಯಾಣ ಮಂಟಪ, ಛತ್ರಗಳಲ್ಲಿ ಪ್ಲಾಸ್ಟಿಕ್ ಲೋಟ, ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಪ್ಲೇಟ್ ಮತ್ತು ಚಮಚಗಳ ಬಳಕೆ ನಿರಾಂತಕವಾಗಿ ನಡೆದಿದೆ.
ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಸ್ಟ್ರಾ ಕೊಳವೆ, ಊಟದ ಮೇಜಿನ ಮೇಲೆ ಹರಡುವ ಹಾಳೆಗಳು, ಧರ್ಮೊಕೋಲ್‍ನಿಂದ ತಯಾರಾದ ವಸ್ತುಗಳ ಬಳಕೆ ಮಾಡುವಂತಿಲ್ಲ ಎಂದು ಸರ್ಕಾರದ ಕಟ್ಟುನಿಟ್ಟಿನ ಆದೇಶ ಹೇಳುತ್ತದೆ. ಆದರೆ ಮೈಸೂರಿನಲ್ಲಿ ನಗರಪಾಲಿಕೆ ಮತ್ತು ಪರಿಸರ ಅಧಿಕಾರಿಗಳು ಸಾಕಷ್ಟು ಎಚ್ಚರಿಕೆ ವಹಿಸಿದ್ದರೂ ಪ್ಲಾಸ್ಟಿಕ್ ಬಳಕೆ ನಿಷೇಧ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.
ಅನೇಕ ಅಂಗಡಿಗಳಲ್ಲಿ, ಹೋಟೆಲ್‍ಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ಗಳನ್ನು ಕದ್ದು ಮುಚ್ಚಿ ಬಳಸಲಾಗುತ್ತಿದೆ. ಅಧಿಕಾರಿಗಳು ಮೈಸೂರಿನ ಮಧ್ಯ ಭಾಗದ ಅಂಗಡಿಗಳಲ್ಲಿ ಮಾತ್ರ ನಿಷೇಧಿತ ಪ್ಲಾಸ್ಟಿಕ್ ಮಾರಾಟ, ಬಳಕೆಯ ಬಗ್ಗೆ ನಿಗಾ ವಹಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲೇ ನಗರದ ಕೆಲವೇ ಕಿ.ಮೀ. ದೂರದ ಹಲವು ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಮಾರಾಟ, ಬಳಕೆಗೆ ಕಡಿವಾಣ ಬಿದ್ದಂತೆ ಕಾಣುತ್ತಿಲ್ಲ.
ಮೈಸೂರು ಮತ್ತು ಹೊರ ವಲಯದ ಕಲ್ಯಾಣ ಮಂಟಪ, ಛತ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ಯಾವುದೇ ಅಡ್ಡಿಯಿಲ್ಲದೆ ನಡೆಯುತ್ತಿದೆ. ಊಟದ ಟೇಬಲ್ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಐಸ್‍ಕ್ರಿಂ ತಿನ್ನಲು ಪ್ಲಾಸ್ಟಿಕ್ ಚಮಚಗಳು, ಪಾನಿಪುರಿ ಮಾರಾಟದ ಗಾಡಿಗಳಲ್ಲಿ ಪ್ಲಾಸ್ಟಿಕ್ ಚಮಚಗಳನ್ನು ಈಗಲೂ ನೀಡಲಾಗುತ್ತಿದೆ. ಇದು ಇನ್ನೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದಕ್ಕೆ ನಿದರ್ಶನವಾಗಿದೆ.
ಹಣ್ಣು, ತರಕಾರಿ ಅಂಗಡಿಗಳು, ಮಾರುಕಟ್ಟೆ ಇನ್ನಿತರ ಕಡೆಗಳಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳನ್ನು ನೀಡಲಾಗುತ್ತಿದೆ. ಟೀ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಲೋಟಗಳ ಬಳಕೆ ನಿಂತಿಲ್ಲ. ಆದರೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಪ್ರಕಾರ, ಈಗಾಗಲೇ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟದ ಅಂಗಡಿಗಳ ಮೇಲೆ ಸಾಕಷ್ಟು ದಾಳಿ ನಡೆಸಿದ್ದೇವೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಭಾರೀ ಪ್ರಮಾಣದಲ್ಲಿ ವಶಪಡಿಸಿಕೊಂಡಿದ್ದೇವೆ. ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಅದನ್ನು ತೀವ್ರಗೊಳಿಸುತ್ತೇವೆ ಎನ್ನುತ್ತಾರೆ.
ಹೀಗಿದ್ದರೂ ಮೈಸೂರು ನಗರದ ಅನೇಕ ಕಡೆಗಳಲ್ಲಿ ಕಸದ ತೊಟ್ಟಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ಗಳ ರಾಶಿಯೇ ಕಂಡು ಬರುತ್ತಿದೆ. ಮನೆ ಮನೆಗಳಲ್ಲಿ ಕಸ ಸಂಗ್ರಹಿಸುವವರಿಗೆ ಸಾರ್ವಜನಿಕರು ಪ್ಲಾಸ್ಟಿಕ್ ಚೀಲಗಳಲ್ಲಿಯೇ ಕಸ ತುಂಬಿ ಕೊಡುತ್ತಿದ್ದಾರೆ. ಇನ್ನೂ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ ಎಂಬುದು ಇದರಿಂದ ತಿಳಿದು ಬರುತ್ತದೆ.
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳು, ದೈನಂದಿನ ಬಳಕೆಯಲ್ಲಿರುವ ಇತರೆ ಪ್ಲಾಸ್ಟಿಕ್ ವಸ್ತುಗಳು ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿ ಉಂಟು ಮಾಡಲಿದೆ. ಪ್ಲಾಸ್ಟಿಕ್ ವಸ್ತುಗಳ ವ್ಯಾಪಕ ಬಳಕೆಯಿಂದ ಪರಿಸರ, ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು, ಚರಂಡಿಗಳ, ಮೋರಿಗಳ ಮತ್ತು ಒಳಚರಂಡಿಗಳ ನೀರು ಸರಾಗ ಹರಿವಿಗೆ ತಡೆಯನ್ನು ಉಂಟು ಮಾಡುತ್ತಿದೆ. ಜೊತೆಗೆ ನಗರ ಪ್ರದೇಶಗಳಲ್ಲಿನ ಜಲಕಾಯಗಳ ಮಾಲೀನ್ಯಕ್ಕೆ ಕಾರಣವಾಗುತ್ತಿದೆ.
ಆದ್ದರಿಂದ ಈ ಸಮಸ್ಯೆಗಳು ಪುನರಾವರ್ತನೆಯಾಗದಂತೆ ಪರಿಣಾಮಕಾರಿಯಾಗಿ ತಡೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರ ಪರಿಸರ ಸಂರಕ್ಷಣೆ ಕಾಯಿದೆ 1986ರ ಸೆಕ್ಷನ್5ರಲ್ಲಿನ ಅಧಿಕಾರ ಚಲಾಯಿಸಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಸ್ಟ್ರಾ ಕೊಳವೆ, ಊಟದ ಮೇಜಿನ ಮೇಲೆ ಹರಡುವ ಹಾಳೆ ಹಾಗೂ ಧರ್ಮೊಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಫಿಲಂನಿಂದ ತಯಾರಾದಂಥ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ನಿಷೇದಿಸಿ, 2016ರಲ್ಲಿಯೇ ಆದೇಶ ಜಾರಿ ಮಾಡಿದೆ. ಯಾವುದೇ ವ್ಯಕ್ತಿ ಮೇಲ್ಕಂಡ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆಯನ್ನು ಮಾಡುವುದನ್ನು ರಾಜ್ಯಾದ್ಯಂತ ನಿಷೇಧಿಸಿದೆ.
ಪ್ಲಾಸ್ಟಿಕ್ ಬಳಕೆ, ಯಾವುದಕ್ಕೆ ವಿನಾಯಿತಿ
- ಕೆಲ ಸಂದರ್ಭ ಮತ್ತು ಚಟುವಟಿಕೆಗಳಿಗೆ ಬಳಸುವ ಪ್ಲಾಸ್ಟಿಕ್ ವಸ್ತುಗಳಿಗೆ ಈ ಅಧಿಸೂಚನೆಯಿಂದ ವಿನಾಯಿತಿ ನೀಡಲಾಗಿದೆ.
- ವಿಶೇಷ ಆರ್ಥಿಕ ವಲಯ (ಎಸ್‍ಇಝೆಡ್) ಮತ್ತು ರಫ್ತು ಉದ್ದೇಶಿತ ಘಟಕಗಳಲ್ಲಿ (ಇಓಯು) ಸ್ಥಾಪಿತವಾದ ಪ್ಲಾಸ್ಟಿಕ್ ಉದ್ಯಮಗಳಲ್ಲಿ ರಫ್ತು ಮಾಡುವ ಉದ್ದೇಶಕ್ಕೆಂದು ಪ್ರತ್ಯೇಕವಾಗಿ ಹಾಗೂ ರಫ್ತು ಆರ್ಡರ್ ಮೇರೆಗೆ ಉತ್ಪಾದಿಸಲ್ಪಡುವ ಪ್ಲಾಸ್ಟಿಕ್ ವಸ್ತುಗಳು.
- ಸಾಮಗ್ರಿಗಳನ್ನು ಬಳಸುವುದಕ್ಕೆ ಮೊದಲು ಉತ್ಪಾದನಾ/ಸಂಸ್ಕರಣಾ ಘಟಕಗಳಲ್ಲಿ ಪ್ಯಾಕ್ ಮಾಡಿ ಸೀಲ್ ಮಾಡಲು ಬಳಸುವ ಹಾಗೂ ಸಾಮಗ್ರಿಗಳ ಪ್ಯಾಕೇಜಿಂಗ್ ಮಾಡುವ ಸಂದರ್ಭದಲ್ಲಿ ಅವಿಭಾಜ್ಯವಾಗಿ ಉಪಯೋಗಿಸುವ ಪ್ಲಾಸ್ಟಿಕ್ ಬ್ಯಾಗ್‍ಗಳು.
- ಸರ್ಕಾರಿ ಇಲಾಖೆಗಳಿಂದ ಅಥವಾ ಇತರೆ ಸಂಬಂಧಪಟ್ಟ ಸಂಸ್ಥೆಗಳಿಂದ ಸ್ವೀಕೃತವಾದ ಆರ್ಡರ್‍ಗೆ ಎದುರಾಗಿ ಅರಣ್ಯ ಮತ್ತು ತೋಟಗಾರಿಕೆ ನರ್ಸರಿಗಳಲ್ಲಿ ಬಳಸುವ ಪ್ಲಾಸ್ಟಿಕ್ ಚೀಲಗಳು ಹಾಗೂ ಹಾಳೆಗಳು.
- ಹಾಲು ಮತ್ತು ಹಾಲು ಉತ್ಪನ್ನಗಳ (ಹೈನು ಉತ್ಪನ್ನಗಳು) ಪ್ಯಾಕಿಂಗ್‍ಗೆ ಬಳಸುವ ಪ್ಲಾಸ್ಟಿಕ್ ವಸ್ತುಗಳಿಗೆ ಈ ಅಧಿಸೂಚನೆಯಿಂದ ವಿನಾಯಿತಿ ನೀಡಲಾಗಿದೆ.
ಮೊಕದ್ದಮೆ ಹೂಡಲು ಕ್ರಮ
ನಿಷೇಧವನ್ನು ಉಲ್ಲಂಘಿಸಿದವರ ವಿರುದ್ಧ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಪರಿಸರ (ಸಂರಕ್ಷಣೆ) ಕಾಯಿದೆ, 1986ರ ಸೆಕ್ಷನ್ 194 ಅನ್ವಯ ಪ್ರದತ್ತವಾಗಿರುವ ಅಧಿಕಾರದಂತೆ ಆಯಾ ವ್ಯಾಪ್ತಿಯಲ್ಲಿ ಬರುವ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು, ಕ್ರಮ ಜರುಗಿಸಲು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಸಹಾಯಕ ಆಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲಾ ಪ್ರಾದೇಶಿಕ ಪರಿಸರ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ಪ್ಲಾಸ್ಟಿಕ್ ಎಂದರೇನು?
ಪ್ಲಾಸ್ಟಿಕ್ ಎಂದರೆ ಪಾಲಿ ಪ್ರೊಟೈಲಿನ್ (ಪಿಪಿ), ನಾನ್-ಓವನ್ ಪಾಲಿ ಪ್ರೊಟೈಲಿನ್, ಮಲ್ಟಿ ಲೇಯರ್ಸ್ ಕೊ-ಎಕ್ಸ್‍ಟ್ರೂಡರ್ ಪಾಲಿ ಪ್ರೊಲೈಲಿನ್, ಪಾಲಿ ಇತಲಿನ್ (ಪಿಇ), ಪಾಲಿ ವಿನೈಲ್ ಕ್ಕಲೋರೈಡ್ (ಪಿವಿಸಿ), ಹೈ ಮತ್ತು ಲೋಡೆನ್ಸಿಟಿ ಪಾಲಿ ಇತಲಿನ್ (ಹೆಚ್‍ಡಿಪಿಇ ಮತ್ತು ಎಲ್‍ಡಿಪಿಇ), ಧರ್ಮೊಕೋಲ್ ಎಂದು ಕರೆಯಲ್ಪಡುವ ಪಾಲಿ ಸ್ಪಿರಿನ್ (ಪಿಎಸ್, ಪಾಲಿ ಅಮೈಡ್ಸ್ (ನೈಲಾನ್), ಪಾ;ಲಿ ಟೆರೆಫೈಲೇಟ್ (ಪಿಟಿ), ಪಾಲಿ ಮೀಥೈಲ್ ಮೆಥಕ್ರಿಲೇಟ್ (ಪಿಎಂಎಂ) ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‍ಗಳಿಂದ ತಯಾರಾದ ಎಲ್ಲಾ ವಸ್ತುಗಳು.
ಕ್ಯಾರಿಬ್ಯಾಗ್ ಎಂಬ ಶಬ್ದಕ್ಕೆ ಪ್ಲಾಸ್ಟಿಕ್ ತ್ಯಾಜ್ಯ (ನಿರ್ವಹಣೆ ಮತ್ತು ನಿಭಾವಣೆ) ನಿಯಮಗಳು 2011ರ ನಿಯಮ 3 (ಬಿ)ರಲ್ಲಿ ನೀಡಿರುವ ವ್ಯಾಖ್ಯಾನವನ್ನು ಯಥಾವತ್ತಾಗಿ ಬಳಸುವುದು. ಈ ವ್ಯಾಖ್ಯಾನದಲ್ಲಿ ಯಾವುದೇ ಸಾಮಗ್ರಿಗಳನ್ನು ಬಳಸುವುದಕ್ಕೆ ಮೊದಲು ಪ್ಯಾಕ್ ಮಾಡಿ ಸೀಲ್ ಮಾಡಿರುವ ಪ್ಯಾಕೇಜಿಂಗ್ ಪ್ಲಾಸ್ಟಿಕ್‍ಗಳು ಸೇರಿರುವುದಿಲ್ಲ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ಲಾಸ್ಟಿಕ್ ತ್ಯಾಜ್ಯ ನಿಯಮಗಳು 2011ರ ನಿಯಮ (4)ರ ಷರತ್ತು (ಎ)ನಲ್ಲಿ ಪಟ್ಟಿ ಮಾಡಲಾಗಿರುವ ಕಾರ್ಯಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಹೊಂದಿದ್ದು, ಇನ್ನುಳಿದ ಸ್ಥಳೀಯ ಸಂಸ್ಥೆಗಳು ನಿಯಮ (4)ರ ಷರತ್ತು (ಬಿ)ನಲ್ಲಿ ಪಟ್ಟಿ ಮಾಡಲಾಗಿರುವ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರವನ್ನು ಹೊಂದಿರುತ್ತವೆ.
ಭಾರತ ಸರ್ಕಾರವು ಹೊರಡಿಸಿರುವ ಅಧಿಸೂಚನೆ ಸಂ;ಎಸ್.ಓ.394(ಇ), ದಿನಾಂಕ:16.04.1987ರಲ್ಲಿ ಹಾಗೂ ಕಾಲಕಾಲಕ್ಕೆ ಆಗುವ ತಿದ್ದುಪಡಿಗಳ ಅನುಸಾರ ಪಟ್ಟಿ ಮಾಡಲಾಗಿರುವ ಎಲ್ಲಾ ಅಧಿಕಾರಿಗಳು ಈ ಅಧಿಸೂಚನೆಯನ್ನು ಉಲ್ಲಂಘಿಸಿದವರ ವಿರುದ್ಧ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಪರಿಸರ (ಸಂರಕ್ಷಣೆ) ಕಾಯಿದೆ, 1986ರ ಸೆಕ್ಷನ್ 19ರಡಿ ದೂರುಗಳನ್ನು ದಾಖಲಿಸಬಹುದು ಎಂದು ಸರ್ಕಾರದ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ವಶ, ಮಾಲೀಕನಿಗೆ 2 ಸಾವಿರ ರೂ. ದಂಡ
ಮೈಸೂರು” ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಮೈಸೂರು ನಗರಪಾಲಿಕೆ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಮೈಸೂರಿನ ಶಿವರಾಂಪೇಟೆಯ ಪ್ಲಾಸ್ಟಿಕ್ ಪದಾರ್ಥಗಳ ಮಾರಾಟದ ಅಂಗಡಿ ಮೇಲೆ ದಾಳಿ ನಡೆಸಿ, 180 ಕೆಜಿಯಷ್ಟು ನಿಷೇದಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು.
ಮೈಸೂರು ನಗರಪಾಲಿಕೆ ಪರಿಸರ ಇಂಜಿನಿಯರ್ ಮೈತ್ರಿ ಅವರು ಅಭಯ ತಂಡದೊಂದಿಗೆ ಶಿವರಾಂಪೇಟೆಯ ರಾಜ್ ಟ್ರೇಡಿಂಗ್ ಕಂಪನಿ ಅಂಗಡಿಯ ಮೇಲೆ ದಾಳಿ ನಡೆಸಿದರು. ನಿಷೇಧಿತ ಪ್ಲಾಸ್ಟಿಕ್ ದಾಸ್ತಾನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನಿಗೆ 2 ಸಾವಿರ ರೂ. ದಂಡ ವಿಧಿಸಿದರು.
ನಾವು ಸದ್ಯದಲ್ಲೆ ಕಲ್ಯಾಣ ಮಂಟಪ ಮತ್ತು ಛತ್ರಗಳ ಮಾಲೀಕರ ಸಭೆ ಕರೆದು ನಿಷೇಧಿತ ಪ್ಲಾಸ್ಟಿಕ್ ಹಾಳೆ, ಚಮಚ, ಲೋಟ ಮತ್ತು ಬಾಟಲಿಗಳನ್ನು ಬಳಕೆ ಮಾಡದಂತೆ ನಿರ್ದೇಶಿಸುತ್ತೇವೆ. ನಮ್ಮ ಆದೇಶವನ್ನು ಧಿಕ್ಕರಿಸಿದವರಿಗೆ ನೋಟೀಸ್ ನೀಡಿ, ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುವುದು. – ಡಾ.ಡಿ.ಜಿ.ನಾಗರಾಜು, ಆರೋಗ್ಯಾಧಿಕಾರಿ, ಮೈಸೂರು ನಗರಪಾಲಿಕೆ.