ಗ್ಲಾಮರಸ್ ಲುಕ್‍ನಲ್ಲಿ ಅದ್ವಿತಿ ಶೆಟ್ಟಿ
ಸಿನಿಮಾ

ಗ್ಲಾಮರಸ್ ಲುಕ್‍ನಲ್ಲಿ ಅದ್ವಿತಿ ಶೆಟ್ಟಿ

April 3, 2020

ಕೆಲ ವರ್ಷಗಳ ಹಿಂದೆ ಬಿಡುಗಡೆಯಾಗಿ, ಜನಪ್ರಿಯವಾಗಿದ್ದ ಸೈಕೋ ಚಿತ್ರ ನಿಮಗೆಲ್ಲ ನೆನಪಿರಬಹುದು. ಆ ಚಿತ್ರವನ್ನು ನಿರ್ದೇಶಿಸಿದ್ದವರು ವಿ.ದೇವದತ್ತ. ಒಂದಷ್ಟು ವರ್ಷ ಮರೆಯಾಗಿದ್ದ ಅವರು ಈಗ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. “ಎಸ್” ಎಂಬ ಹೆಸರಿನ  ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ವಿ.ದೇವದತ್ತ ಅವರು ಕೊರೋನಾ ಕಂಟಕ ಮುಗಿದ ನಂತರ ಚಿತ್ರದ ಚಿತ್ರೀಕರಣವನ್ನು ಆರಂಭಿಸಲಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ ಹಾಗು ದೊಡ್ಡಬಳ್ಳಾಪುರದ ಸುತ್ತಮುತ್ತ ಒಂದೇ ಹಂತದಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆಯಲಿದೆ. ಚಿತ್ರದ ಎರಡು ಹಾಡುಗಳನ್ನು ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿ ಶೂಟ್ ಮಾಡುವ ಯೋಜನೆಯೂ ಇದೆ. ಇನ್ನು ಈ ಚಿತ್ರಕ್ಕೆ ನಾಗರಾಜು ಕೆ.ವಿ. ಅವರು ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಒಂದು ಶಿಕಾರಿಯ ಕಥೆ ಚಿತ್ರದಲ್ಲಿ ನಟಿಸಿದ್ದ ಅಭಿಮನ್ಯು ಪ್ರಜ್ವಲ್  ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಕಿರುತೆರೆ ನಟಿ ಅದ್ವಿತಿ ಶೆಟ್ಟಿ ನಾಯಕಿಯಾಗಿ ಕಾಣಿಸಿ ಕೊಳ್ಳಲಿದ್ದಾರೆ. ಸಭಾಕುಮಾರ್ ಅವರ ಛಾಯಾಗ್ರಹಣ, ಪ್ರದೀಪ್ ವರ್ಮ ಅವರ ಸಂಗೀತ ನಿರ್ದೇಶನ ಹಾಗೂ ಬಿ.ಎಸ್. ಕೆಂಪರಾಜ್ ಸಂಕಲನ ಈ ಚಿತ್ರಕ್ಕಿದೆ.

ಈ ಹಿಂದೆ ಫ್ಯಾನ್ ಎಂಬ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅದ್ವಿತಿ ಶೆಟ್ಟಿ ಅವರ ಎರಡನೇ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಗ್ಲಾಮರಸ್ ಲುಕ್ ಹೊಂದಿರೋ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಎಸ್ ಚಿತ್ರದ ಫೋಟೋಗಳು ಈಗಾಗಲೇ ಎಲ್ಲರ ಗಮನ ಸೆಳೆದಿವೆ. ಮುಂದಿನ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದ್ದು, ಸೈಕೋ ಚಿತ್ರದ ನಿರ್ದೇಶಕ ಗುರುದತ್ ಈ ಚಿತ್ರದ ಮೂಲಕ ಮತ್ತೊಮ್ಮೆ ಚಿತ್ರರಂಗದಲ್ಲಿ ಅದೃಷ್ಠ ಕಂಡುಕೊಳ್ಳಲು ಮುಂದಾಗಿದ್ಧಾರೆ.

Translate »