ವಿಧಾನಸಭೆಯಲ್ಲಿ ವಾಗ್ಯುದ್ಧ: ಕಲಾಪ ಮುಂದೂಡಿಕೆ
ಮೈಸೂರು

ವಿಧಾನಸಭೆಯಲ್ಲಿ ವಾಗ್ಯುದ್ಧ: ಕಲಾಪ ಮುಂದೂಡಿಕೆ

February 8, 2019

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಬಹುಮತವಿಲ್ಲ ಎನ್ನುವು ದಾದರೆ ಅವಿಶ್ವಾಸ ನಿರ್ಣಯ ಮಂಡಿಸಿ ಎಂದು ಪ್ರತಿಪಕ್ಷ ಬಿಜೆಪಿಗೆ ಕಾಂಗ್ರೆಸ್-ಜೆಡಿಎಸ್ ಸವಾಲು ಹಾಕಿದರೆ, ವಿಶ್ವಾಸ ಮತ ಮಂಡಿಸಲು ಸಿದ್ಧವಿರುವುದಾಗಿ ವಿಪಕ್ಷ ಸದಸ್ಯರು ಪ್ರತಿಸವಾಲು ಹಾಕಿದ್ದ ರಿಂದ ವಿಧಾನಸಭೆಯಲ್ಲಿಂದು ಭಾರೀ ವಾಗ್ಯುದ್ಧಕ್ಕೆ ಕಾರಣವಾಗಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಬೆಳಿಗ್ಗೆ ಸದನ ಸಮಾವೇಶಗೊಳ್ಳುತ್ತಿ ದ್ದಂತೆ ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾ ಗಕ್ಕೆ ಧಾವಿಸಿ ಧರಣಿ ಆರಂಭಿಸಿ, ಬಹುಮತ ವಿಲ್ಲದ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಕೂಗಿದರು.

ಬಹುಮತವಿಲ್ಲದ ಸರ್ಕಾರಕ್ಕೆ ಮುಂದುವರಿಯುವ ಹಕ್ಕಿಲ್ಲ, ಡೌನ್-ಡೌನ್ ಚೀಫ್ ಮಿನಿಸ್ಟರ್, ಡೌನ್ ಡೌನ್ ಎಂದು ಬಿಜೆಪಿ ಸದಸ್ಯರು ಏರಿದ ಧ್ವನಿಯಲ್ಲಿ ಕೂಗಿದಾಗ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇ ಗೌಡ, ಪ್ರಿಯಾಂಕ ಖರ್ಗೆ ಮತ್ತಿತರರು ಸರ್ಕಾರಕ್ಕೆ ಬಹುಮತವಿಲ್ಲ ಎಂಬ ನಂಬಿಕೆಯಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಲಿ ಎಂದು ತಿರುಗೇಟು ನೀಡಿದರು.

ಸಭಾಧ್ಯಕ್ಷ ರಮೇಶ್ ಕುಮಾರ್ ಧರಣಿ ನಿರತ ಬಿಜೆಪಿ ಸದಸ್ಯರನ್ನು ಉದ್ದೇಶಿಸಿ, ನೀರಿಲ್ಲದ ಬಾವಿಯಲ್ಲಿ ಬಿದ್ದಿದ್ದೀರಿ ಎಂದು ಹಾಸ್ಯ ಚಟಾಕಿ ಹಾರಿಸಿ, ಸಭೆಯ ಮುಂದಿರುವ ಕಾಗದ ಪತ್ರಗಳನ್ನು ಮಂಡಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಮತ್ತಿತರ ಸಚಿವರಿಗೆ ಸೂಚಿಸಿದರು.

ಸಚಿವರು ತಮ್ಮ ಮುಂದಿದ್ದ ಕಾಗದ ಪತ್ರಗಳನ್ನು ಮಂಡಿಸತೊಡಗಿದಾಗ, ಧರಣಿ ನಿರತ ಬಿಜೆಪಿ ಸದಸ್ಯರು ಗದ್ದಲ ಮುಂದುವರಿಸಿದರು. ಬಿಜೆಪಿ ಸದಸ್ಯರ ವಿರುದ್ಧ ಆಡಳಿತ ಸದಸ್ಯರು, ವಾಗ್ಧಾಳಿ ನಡೆಸಿ, ಸರ್ಕಾರಕ್ಕೆ ಬಹುಮತವಿದೆ ಎಂಬ ಕಾರಣಕ್ಕಾಗಿಯೇ ಧರಣಿ ನಡೆಸುತ್ತಿದ್ದೀರಿ, ಒಂದು ವೇಳೆ ನಿಮಗೆ ಸಂಖ್ಯಾ ಬಲ ವಿದ್ದಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ ಎಂದರು.

ಸದನದಲ್ಲೇ ಬಲಾ-ಬಲ ನಿರ್ಧಾರವಾಗಲಿ, ಧರಣಿ ನಡೆಸುತ್ತಿರುವುದು ರಾಜಕೀಯ ಪ್ರಚಾರಕ್ಕಾಗಿಯೇ ಹೊರತು ಇನ್ಯಾವ ಕಾರಣಕ್ಕೂ ಅಲ್ಲ ಎಂದು ಕಾಂಗ್ರೆಸ್ ಸದಸ್ಯರು ಛೇಡಿಸಿದರು. ಧರಣಿ ನಿರತ ಬಿಜೆಪಿ ಸದಸ್ಯರ ಗದ್ದಲ ಮುಂದುವರಿದಾಗ ಸಭಾಧ್ಯಕ್ಷ ರಮೇಶ್ ಕುಮಾರ್, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಅಂಗೀಕಾರವಾಗಬೇಕು, ಅದನ್ನು ಬಿಟ್ಟು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದೀರಿ, ಇದು ಸಂಸದೀಯ ಪ್ರಜಾಸತ್ತೆಯಲ್ಲಿ ಕಾಣದ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆ ಆರಂಭಿಸುವಂತೆ ಸಭಾಧ್ಯಕ್ಷರು ನೀಡಿದ ಸೂಚನೆ ಮೇರೆಗೆ, ಮಾತನಾಡಿದ ಕಾಂಗ್ರೆಸ್‍ನ ಎಸ್.ಟಿ.ಸೋಮಶೇಖರ್, ರಾಜ್ಯ ಸರ್ಕಾರ ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತಿದೆ, ಹಸಿರು ಕರ್ನಾಟಕ ಮಾಡಲು 652 ಲಕ್ಷ ಸಸಿಗಳನ್ನು ರಾಜ್ಯಾದ್ಯಂತ ನೆಡಲು ತೀರ್ಮಾನಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇತ್ತ ಪ್ರತಿಭಟನಾನಿರತ ಬಿಜೆಪಿ ಸದಸ್ಯರು ಸರ್ಕಾ ರದ ವಿರುದ್ಧ ಧಿಕ್ಕಾರದ ಘೋಷಣೆ ಮುಂದುವರೆಸಿ, ಅಧಿಕಾರ ನಡೆಸಲು ನೈತಿಕ ಹಕ್ಕು ಇಲ್ಲದ ಮುಖ್ಯ ಮಂತ್ರಿ ರಾಜೀನಾಮೆ ನೀಡಬೇಕು ಎಂದು ಕೂಗಿದರು.

ಗದ್ದಲ ತೀವ್ರಗೊಂಡಾಗ ಸದನ ಕಲಾಪವನ್ನು ಹತ್ತು ನಿಮಿಷ ಮುಂದೂಡಿರುವುದಾಗಿ ಘೋಷಿಸಿ ಸಭಾಧ್ಯಕ್ಷ ರಮೇಶ್ ಕುಮಾರ್ ಹೊರನಡೆದರು.

ಸದನ ಮತ್ತೆ ಆರಂಭವಾದಾಗ ಧರಣಿ ಮುಂದು ವರಿಸಿದ ಬಿಜೆಪಿ ಸದಸ್ಯರು, ಏರಿದ ಧ್ವನಿಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗತೊಡಗಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿರುವುದನ್ನು ಗಮನಿಸಿದ ರಮೇಶ್ ಕುಮಾರ್, ಶುಕ್ರವಾರ ಮಧ್ಯಾಹ್ನ 12.30ಕ್ಕೆ ಕಲಾಪ ಮುಂದೂಡಿದರು.

Translate »