ದೋಸ್ತಿ ಬಟೆಜ್‍ನಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ಮಠಮಾನ್ಯಗಳಿಗೆ ಭರಪೂರ ಕೊಡುಗೆ
ಮೈಸೂರು

ದೋಸ್ತಿ ಬಟೆಜ್‍ನಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ಮಠಮಾನ್ಯಗಳಿಗೆ ಭರಪೂರ ಕೊಡುಗೆ

February 9, 2019
  • ಮದ್ಯ ವ್ಯಸನಿಗಳು, ನೋಂದಣಿ ಮೇಲೆ ಅಧಿಕ ಶುಲ್ಕ
  • ಹಾಲು ಉತ್ಪಾದಕರ ಪ್ರೋತ್ಸಾಹದನ 6 ರೂ.ಗೆ ಹೆಚ್ಚಳ
  • ಶಾಲಾ, ಅಂಗನವಾಡಿ ಮಕ್ಕಳಿಗೆ ಉಚಿತ ಹಾಲು
  • ಸಣ್ಣ, ಅತೀ ಸಣ್ಣ ರೈತರಿಗೆ ಒಲಿಯಲಿದ್ದಾಳೆ ‘ಗೃಹಲಕ್ಷ್ಮಿ’
  • ಕೇರಳ ಮಾದರಿ `ಸಾಲ ಪರಿಹಾರ ಆಯೋಗ’ ರಚನೆ
  • ನದಿಗಳಿಂದ ಹಳ್ಳಿಗಳಿಗೆ ಕುಡಿಯುವ ನೀರಿನ ‘ಜಲಧಾರೆ’
  • ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿ, ಇ ಆಫೀಸ್ ವ್ಯವಸ್ಥೆ
  • ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಆರಂಭ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕೃಷಿ, ನೀರಾವರಿ, ಕೂಲಿ ಕಾರ್ಮಿಕರು, ಮಹಿಳೆಯರು ಹಾಗೂ ಮಠಮಾನ್ಯಗಳಿಗೆ ಭರಪೂರ ಕೊಡುಗೆ ನೀಡಿದ್ದಾರೆ.

ಪ್ರತಿಪಕ್ಷ ಬಿಜೆಪಿ ಸಭಾತ್ಯಾಗದ ನಡುವೆ ಮುಖ್ಯಮಂತ್ರಿ ಯವರು 2019-20ನೇ ಸಾಲಿನ ಮುಂಗಡ ಪತ್ರವನ್ನು ವಿಧಾನಸಭೆಯಲ್ಲಿಂದು, ರೂ. 2.34 ಲಕ್ಷ ಕೋಟಿ ಗಾತ್ರದ ಆಯವ್ಯಯ ಮಂಡಿಸಿ ನಾಲ್ಕು ತಿಂಗಳ ಮಟ್ಟಿಗೆ ಲೇಖಾನುದಾನ ಕೋರಿದ್ದಾರೆ. ಸುದೀರ್ಘ 250 ನಿಮಿಷ ಗಳ ಕಾಲ ಎಡೆಬಿಡದೆ ಮುಂಗಡಪತ್ರ ಮಂಡಿಸುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಪ್ರಶ್ನೆ ಮಾಡುವವರಿಗೆ ಉತ್ತರವನ್ನು ನೀಡಿದರು. ಜನಸಾಮಾನ್ಯರಿಗೆ ಯಾವುದೇ ಹೊರೆ ಹೇರದಿದ್ದರೂ, ಎಂದಿನಂತೆ ಮದ್ಯ ವ್ಯಸನಿಗಳು ಹಾಗೂ ನೋಂದಣಿ ಶುಲ್ಕ ಹೆಚ್ಚಳ ಮಾಡುವ ಮೂಲಕ ಸಂಪನ್ಮೂಲ ಕ್ರೋಢಿಕರಣಕ್ಕೂ ಒತ್ತು ನೀಡಿದ್ದಾರೆ.

ವಿಶೇಷ ಕೊಡುಗೆ: ವ್ಯಾಪಾರ ವಹಿವಾಟು ಮಾಡಿ ತೆರಿಗೆ ವಂಚಿಸುತ್ತಿದ್ದವರನ್ನು ಜಿಎಸ್‍ಟಿ ಅಡಿಯಲ್ಲಿ ತಂದು, ಹೆಚ್ಚು ತೆರಿಗೆ ಸಂಗ್ರಹಕ್ಕೂ ಆದ್ಯತೆ ನೀಡಿದ್ದಾರೆ. ಹಾಲು ಉತ್ಪಾದಕರ ಪ್ರೋತ್ಸಾಹಧನವನ್ನು ಐದರಿಂದ ಆರು ರೂ.ಗೆ ಹೆಚ್ಚಿಸುವುದರ ಜೊತೆಗೆ
ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲಾ ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಹಾಲು, ಸಣ್ಣ ಮತ್ತು ಅತೀ ಸಣ್ಣ ರೈತರು ಶೇ.3ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಗೃಹ ಲಕ್ಷ್ಮಿ ಬೆಳೆಸಾಲ ಯೋಜನೆ, ಕೇರಳ ಮಾದರಿಯಲ್ಲಿ ಬೆಳೆ ಅಡಮಾನ ಇಟ್ಟು ಹಣ ಪಡೆಯುವ ಸಾಲ ಪರಿಹಾರ ಆಯೋಗ, ಹಳ್ಳಿಗಳಿಗೆ ಮೇಲ್ಮೈ ಪದರದಿಂದ ನೀರು ಹರಿಸುವ ಜಲಧಾರೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಕೌನ್ಸಿಲಿಂಗ್ ಮೂಲಕ ವರ್ಗಾವಣೆ: ವರ್ಗಾವಣೆಯಲ್ಲಿ ಭ್ರಷ್ಟಾಚಾರವನ್ನು ಮಟ್ಟ ಹಾಕುವ ಸಲುವಾಗಿ ಮಹತ್ವದ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿಯವರು ಸಿ ಮತ್ತು ಡಿ ವೃಂದ ನೌಕರರ ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿ ಜಾರಿಗೊಳಿಸುವ ಪ್ರಕಟಣೆ ಮಾಡಿದ್ದಾರೆ.ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದ್ದು, ಎಲ್ಲಾ ಇಲಾಖೆಗಳಲ್ಲೂ ಕೌನ್ಸಿಲಿಂಗ್ ಮೂಲಕವೇ ಸಿ ಮತ್ತು ಡಿ ದರ್ಜೆಯ ನೌಕರರನ್ನು ವರ್ಗಾವಣೆ ಮಾಡಲು ಮುಂದಾದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ನಿರೀಕ್ಷೆ ಇದೆ. ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಎಲ್ಲಾ ಕಚೇರಿಗಳಲ್ಲಿ ಇ-ಆಫೀಸ್ ವ್ಯವಸ್ಥೆ ರೂಪಿಸಲಾಗುತ್ತದೆ ಎಂದರು.

ಸಾವಿರ ಆಂಗ್ಲ ಮಾಧ್ಯಮ ಶಾಲೆ: ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಈ ಶಾಲೆ ಆರಂಭಿಸಲಾಗುವುದು.

ನಾಲ್ಕು ಹೊಸ ತಾಲೂಕು: ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟೆ ಜಿಲ್ಲೆಯ ತೇರದಾಳ, ಚಿಕ್ಕಮಗಳೂರು ಜಿಲ್ಲೆಯ ಕಳಸಾವನ್ನು ಹೊಸ ತಾಲೂಕುಗಳನ್ನಾಗಿ ಘೋಷಿಸಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲೇ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲ ಮನ್ನಾ ಮಾಡಲು 12600 ಕೋಟಿ ರೂ ಒದಗಿಸಿದ್ದಾರೆ.

ಯಾರು ಎಷ್ಟೇ ಅಡ್ಡಿ ಆತಂಕಗಳನ್ನು ಸೃಷ್ಟಿ ಮಾಡಿದರೂ, ರೈತರ ಸಾಲ ಮನ್ನಾ ಮಾಡಿಯೇ ತೀರುತ್ತೇವೆ ಎಂದಿರುವ ಮುಖ್ಯಮಂತ್ರಿಯವರು ಒಂದು ಟೈಮ್ ಸೆಟ್ಲಮೆಂಟ್‍ನಿಂದ ಹಿಂದೆ ಸರಿಯುವುದಿಲ್ಲ ಎಂದು ಕೃಷಿಕನಿಗೆ ಭರವಸೆ ನೀಡಿದ್ದಾರೆ.
ಈವರೆಗೂ ಸಾಲಮನ್ನಾ ಯೋಜನೆಯಡಿ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ನಡಿ ರೈತರ ಖಾತೆಗಳಿಗೆ ಒಟ್ಟು 12600 ಕೋಟಿ ಹಣವನ್ನು ಬಿಡುಗಡೆ ಮಾಡ ಲಾಗಿದೆ. ಸಹಕಾರಿ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲದ ಪೈಕಿ 6150 ಕೋಟಿ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಮಾಡಿದ ಸಾಲದ ಪೈಕಿ 6500 ಕೋಟಿ ರೂಗಳನ್ನು ಸಾಲ ಮನ್ನಾ ಯೋಜನೆಗೆ ನೀಡಲಾಗಿದೆ ಎಂದು ಪ್ರಕಟಿಸಿದರು.

ಕೇಂದ್ರದ ಬೆಳೆ ವಿಮೆ ಪದ್ಧತಿ ರಾಜ್ಯದ ರೈತರಿಗೆ ನಿರೀಕ್ಷಿತ ಪ್ರಯೋಜನ ನೀಡದ ಹಿನ್ನೆಲೆಯಲ್ಲಿ ಪ್ರತ್ಯೇಕ ಬೆಳೆ ವಿಮೆ ಯೋಜನೆ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.

ತೆರಿಗೆದಾರರ ಹಣ ಪೋಲಾಗದಂತೆ ಸರ್ಕಾರ ಎಚ್ಚರಿಕೆ ವಹಿಸಿದ್ದು, ರೈತರ ಖಾತೆಗಳಿಗೆ ನೇರವಾಗಿ ಸಾಲಮನ್ನಾದ ಹಣವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದು ದೇಶದಲ್ಲೇ ಅತ್ಯಂತ ಪಾರದರ್ಶಕ ಯೋಜನೆಯಾಗಿದೆ ಎಂದು ಸಮರ್ಥಿಸಿಕೊಂಡರು.
ಅಂಗನವಾಡಿ ಕಾರ್ಯಕರ್ತೆಯರ ಮಾಸಾಶನವನ್ನು 500 ರೂ. ಏರಿಕೆ ಮಾಡ ಲಾಗಿದ್ದು,ಸಹಾಯಕರಿಗೆ 250 ರೂ. ವೇತನ ಹೆಚ್ಚಳ ಮಾಡಲಾಗಿದೆ.

ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಸಮುದಾಯಕ್ಕೂ ಭರಪೂರ ಘೋಷಣೆ ಗಳನ್ನು ಪ್ರಕಟಿಸಿರುವ ಮುಖ್ಯಮಂತ್ರಿಯವರು, ವಿಭಾಗ ಮಟದಲ್ಲಿ ನಾಲ್ಕು, ಹಿಂದುಳಿದ ವರ್ಗಗಳ ಮೊರಾರ್ಜಿ ಪದವಿ ಪೂರ್ವ ಕಾಲೇಜುಗಳಲ್ಲಿ ನೀಟ್ ತರಬೇತಿ ಕೇಂದ್ರ ಗಳನ್ನು ಪ್ರಾರಂಭಿಸಲು 4 ಕೋಟಿ ಅನುದಾನ ನೀಡಿದ್ದಾರೆ.

ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 25 ಕೋಟಿ, ವಿಶ್ವಕರ್ಮ ಸಮುದಾಯದ ಸಮಗ್ರ ಅಭಿವೃದ್ದಿ 25 ಕೋಟಿ, ಅಮರ ಶಿಲ್ಪಿ ಜಕಣಾಚಾರಿ ಕೇಂದ್ರ ಪ್ರಾರಂಭ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ 25 ಕೋಟಿ, ಸವಿತಾ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ, ಹಿಂದುಳಿದ ವರ್ಗದಲ್ಲಿರುವ ಸೂಕ್ಷ್ಮ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 134 ಕೋಟಿ ರೂಗಳನ್ನು ಒದಗಿಸಲಾಗಿದೆ.

ಮುಸ್ಲಿಂ ಸಮುದಾಯದಲ್ಲಿ ಆಧುನಿಕ ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವನೆ ಮೂಡಿಸಲು ಮೌಲಾನ ಅಜಾದ್ ಟ್ರಸ್ಟ್ ಸ್ಥಾಪನೆಗೆ 25 ಕೋಟಿ ರೂ. ಮುಸ್ಲಿಂ ಖಬರ್ ಸ್ಥಾನಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 10 ಕೋಟಿ ರೂ, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮೂಲಸೌಲಭ್ಯಕ್ಕೆ 400 ಕೋಟಿ, ರಾಜ್ಯದ 5 ಕಡೆ 5 ಮೊರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣುಮಕ್ಕಳ ವಸತಿ ಶಾಲೆ ನಿರ್ಮಿಸಲು 25 ಕೋಟಿ ರೂ. ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.

ಕಾರ್ಮಿಕರಿಗೆ ಶ್ರಮಿಕ ಸೌರಭ: ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಶ್ರಮಿಕ ಸೌರಭ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಯುವಕರ ಸಬಲೀಕರಣಕ್ಕಾಗಿ 5 ಕಡೆ ಕ್ರೀಡಾ ವಸತಿ ನಿಲಯಗಳ ನಿರ್ಮಾಣಕ್ಕಾಗಿ 12.5 ಕೋಟಿ ರೂ., 13ರಿಂದ 15 ವರ್ಷ ವಯೋಮಾನದವರಿಗೆ ಮಿನಿ ಒಲಂಪಿಕ್ ಗೇಮ್ಸ್ ಆರಂಭಿಸುವುದಾಗಿ ತಿಳಿಸಿದ್ದಾರೆ.
ಅನ್ನಭಾಗ್ಯಕ್ಕೆ 3700 ಕೋಟಿ: ಹಿಂದಿನ ಕಾಂಗ್ರೆಸ್ ಸರ್ಕಾರ ಅವಧಿಯ ಜನಪ್ರಿಯ ಯೋಜನೆಯಾದ ಅನ್ನಭಾಗ್ಯ ಯೋಜನೆ 3700 ಕೋಟಿ ಹಾಗೂ ಸೋರಿಕೆಯನ್ನು ತಡೆಗಟ್ಟಲು ಪ್ರತಿ ವಿಭಾಗಕ್ಕೆ ವಿಚಕ್ಷಣ ದಳ ಸೇರಿದಂತೆ ಮತ್ತಿತರ ಪ್ರಮುಖ ಇಲಾಖೆಗಳಿಗೆ ಭರಪೂರ ಯೋಜನೆಗಳನ್ನು ಹೆಚ್‍ಡಿಕೆ ಘೋಷಿಸಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಡಿಜಟಲೀಕರಣ ಹಾಗೂ ತೆರಿಗೆ ವ್ಯಾಪ್ತಿಯ ಹೊರಗುಳಿದ ಆಸ್ತಿಗಳ ಸೇರ್ಪಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಹಳ್ಳಿಗಳಲ್ಲಿ ಸ್ವಚ್ಛ ಮೇವ ಜಯತೆ: ಒಂದು ಸಾವಿರ ಗ್ರಾಮ ಪಂಚಾಯತಿಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಿಸಿ ನೀಡುವ ಉದ್ದೇಶದಿಂದ ಸ್ವಚ್ಛ ಮೇವ ಜಯತೆ ಆಂದೋಲನ ಕೈಗೊಳ್ಳಲು ತೀರ್ಮಾನಿಸಲಾಗಿದೆ. 2019 ಅನ್ನು ಜಲವರ್ಷವೆಂದು ಘೋಷಣೆ ಮಾಡಲಾಗಿದ್ದು, ಜಲಾಮೃತ ಯೋಜನೆಯಡಿ 20 ಸಾವಿರ ಜಲಸಂರಕ್ಷಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬರೋಬ್ಬರಿ 500 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಸುಭದ್ರ ಶಾಲೆ ಯೋಜನೆಯಡಿ ರಾಜ್ಯದ 6825 ಗ್ರಾಮೀಣ ಶಾಲೆಗಳಿಗೆ ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಿಸಲು 90 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಕೂಲಿ ಕಾರ್ಮಿಕರು ಮತ್ತು ಅವಲಂಭಿತರಿಗಾಗಿ ಶ್ರಮಿಕ ಸೌರಭ ಯೋಜನೆಯನ್ನು ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ.ಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 5 ಲಕ್ಷ ರೂ.ಗಳ ಮುಂಗಡ ಹಣ, ಸ್ವಂತ ಮನೆ ಹೊಂದಿರುವ ಕಾರ್ಮಿಕರಿಗೆ ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ರೂ.ಗಳ ನೆರವು ಒದಗಿಸಲಾಗಿದೆ. ಕಾರ್ಮಿಕ ಆರೋಗ್ಯ ಭಾಗ್ಯ ಸೌಲಭ್ಯದಡಿ ಒಂದೂವರೆ ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚ ಮರುಪಾವತಿ. ಅಪಘಾತದಲ್ಲಿ ಮೃತ ಪಟ್ಟ ಕಾರ್ಮಿಕರಿಗೆ 2 ಲಕ್ಷ ರೂ. ಪರಿಹಾರ, ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು, ಕಾರ್ಮಿಕರ ಮಕ್ಕಳಲ್ಲಿ ಸ್ವಯಂ ಉದ್ಯೋಗ ಉತ್ತೇಜಿಸಲು 50 ಸಾವಿರ ರೂ. ಬಡ್ಡಿ ರಹಿತ ಸಹಾಯಧನ ನೀಡಲಾಗುತ್ತಿದೆ.

ಸಿದ್ದ ಉಡುಪು ಕಾರ್ಖಾನೆಗಳ ಮಹಿಳಾ ಕಾರ್ಮಿಕರಿಗೆ ಶಿಶುಪಾಲನಾ ಕೇಂದ್ರ ಸ್ಥಾಪನೆ ಮತ್ತಿತರ ಸೌಲಭ್ಯ ಕಲ್ಪಿಸಲು 10 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್, ಎಸ್‍ಸಿ, ಎಸ್‍ಟಿ ಪಂಗಡದ 25 ಸಾವಿರ ಮಹಿಳಾ ಕಾರ್ಮಿಕರ ಕೌಶಲ್ಯ ಉನ್ನತೀಕರಣಕ್ಕೆ 37.05 ಕೋಟಿ ರೂ, ನೆರವು ಒದಗಿಸಲಾಗಿದೆ.

ವಿಭಾಗ ಮಟ್ಟದಲ್ಲಿ ಐಐಟಿ, ನೀಟ್ ಕೇಂದ್ರ: ವಿಭಾಗ ಮಟ್ಟದ ನಾಲ್ಕು ಹಿಂದುಳಿದ ಕಾಲೇಜುಗಳಲ್ಲಿ ಐಐಟಿ ಮತ್ತು ನೀಟ್ ತರಬೇತಿ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಕೇಂದ್ರಗಳ ನೂರು ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ 40 ಕೋಟಿ ರೂ. ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಗಿರಿಜನ ಉಪ ಯೋಜನೆಗೆ ಒಟ್ಟಾರೆ 33, 445 ಕೋಟಿ ರೂ.ಗಳ ಅನುದಾನ ನೀಡಲಾಗಿದೆ.ನೂರು ಕೋಟಿ ರೂ. ವೆಚ್ಚದಲ್ಲಿ ಎಸ್ ಸಿ, ಎಸ್ ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 30 ಸಂಯುಕ್ತ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಗುತ್ತಿದೆ.

ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 25 ಕೋಟಿ, ಬೆಂಗಳೂರು ನಗರದಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪನೆಗೆ 20 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದ್ದು, ಹಿಂದುಳಿದ ವರ್ಗಕ್ಕೆ ಸೇರಿದ ಸೂಕ್ಷ್ಮ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 134 ಕೋಟಿ ರೂ.ಗಳ ಅನುದಾನ ನೀಡಿರುವುದರ ಜೊತೆಗೆ ಓರ್ವ ನೋಡಲ್ ಅಧಿಕಾರಿ ಹಾಗೂ ನಾಲ್ವರು ಅಧಿಕಾರೇತರ ಸದಸ್ಯರ ಕಾರ್ಯಾಚರಣೆ ಪಡೆ ಸ್ಥಾಪನೆ ಮಾಡಲಾಗುತ್ತಿದೆ.

ರಾಜ್ಯದ ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ 1325 ಕೋಟಿ ವೆಚ್ಚದಲ್ಲಿ ಮಹಾತ್ಮಾ ಗಾಂಧೀಜಿ ನಗರ ವಿಕಾಸ ಯೋಜನೆಯನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ಬಜೆಟ್ ಮಂಡನೆ ಮಾಡಿ ಮಾತನಾಡಿದ ಅವರು, ಕಲಬುರ್ಗಿ, ಮೈಸೂರು, ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಗಳಿಗೆ ತಲಾ 150 ಕೋಟಿ, ಬೆಳಗಾವಿ, ಬಳ್ಳಾರಿ, ತುಮಕೂರು, ಶಿವಮೊಗ್ಗ, ಮಂಗಳೂರು, ದಾವಣಗೆರೆ, ವಿಜಯ ನಗರ ಪಾಲಿಕೆಗಳಿಗೆ ತಲಾ 125 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. ನೀರಿನ ದರದಲ್ಲಿ ಏಕರೂಪತೆ ತರಲು ನೀರು ದರ ನಿಗದೀಕರಣ ಸಲಹಾ ಕೋಶವನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ತೆರಿಗೆ ಸೋರಿಕೆ ತಡೆಗಟ್ಟಲು ಸಾಧ್ಯವಾಗಲಿದೆ.

ಅನ್ನದಾತನ ರಕ್ಷಣೆಗೆ `ರೈತ ಕಣಜ’

ಬೆಂಗಳೂರು: ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ ಅಭಯ ಹಸ್ತ ನೀಡಲು 500 ಕೋಟಿ ವೆಚ್ಚದಲ್ಲಿ ರೈತ ಕಣಜ ಯೋಜನೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಪ್ರಸಕ್ತ ಸಾಲಿನ ಮುಂಗಡಪತ್ರದಲ್ಲಿ ಘೋಷಣೆ ಮಾಡಿರುವ ಮುಖ್ಯಮಂತ್ರಿಯವರು ಅನಿರೀಕ್ಷಿತ ಬೆಲೆ ಕುಸಿತ ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ 12 ಅನುಸೂಚಿತ ಬೆಳೆಗಳನ್ನು ಗುರುತಿಸಲಾ ಗಿದೆ. ಈ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗುವುದು.
ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಉಂಟಾದಾಗ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆ ಬೆಲೆ ಕಡಿಮೆ ಇದ್ದರೆ ಸರ್ಕಾರ ಮಧ್ಯ ಪ್ರವೇಶ ಮಾಡಲಿದೆ. ಮಾರುಕಟ್ಟೆ ಬೆಲೆ ಮತ್ತು ಮಾರ್ಗಸೂಚಿ ಬೆಲೆ ನಡುವಿನ ವ್ಯತ್ಯಾಸದ ಹಣವನ್ನು ಪ್ರೋತ್ಸಾಹಧನದ ರೂಪದಲ್ಲಿ ರೈತರಿಗೆ ಪಾವತಿ ಮಾಡಲಾಗುತ್ತದೆ ಎಂದ ಅವರು, ಇದಕ್ಕಾಗಿ 50 ಕೋಟಿ ರೂ.ಗಳನ್ನು ನಿಗದಿಪಡಿಸಿರುವುದಾಗಿ ತಿಳಿಸಿದರು.

Translate »