ಮಂಗಳವಾರವೂ ಮೃಗಾಲಯಕ್ಕೆ ಪ್ರವೇಶ
ಮೈಸೂರು

ಮಂಗಳವಾರವೂ ಮೃಗಾಲಯಕ್ಕೆ ಪ್ರವೇಶ

June 30, 2020

ಮೈಸೂರು, ಜೂ.29(ಎಂಟಿವೈ)- ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂದಿನ ನಾಲ್ಕು ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಾಳೆಯಿಂದ (ಜೂ.30) ಪ್ರತಿ ಮಂಗಳವಾರ ಮೃಗಾಲಯಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿರು ತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ ತಿಳಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರು, ಸಿಬ್ಬಂದಿ ಹಾಗೂ ಪ್ರಾಣಿ-ಪಕ್ಷಿಗಳ ಹಿತಕಾಯುವ ನಿಟ್ಟಿನಲ್ಲಿ ಮೃಗಾಲಯದಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಮಂಗಳವಾರ ಮೃಗಾಲಯಕ್ಕೆ ರಜೆ ನೀಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಮುಂದಿನ ನಾಲ್ಕು ಭಾನುವಾರ ಲಾಕ್‍ಡೌನ್ ಮಾಡಲು ಆದೇಶಿಸಿರುವುದರಿಂದ ಅಂದು ಮೃಗಾಲಯ ಬಂದ್ ಆಗಿರುತ್ತದೆ. ಅದಕ್ಕೆ ಪರ್ಯಾಯವಾಗಿ ಮಂಗಳವಾರ ಪ್ರವೇಶ ಕಲ್ಪಿಸಲಾಗುತ್ತಿದೆ.

ದತ್ತು ಸ್ವೀಕಾರ: ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ.ಲಿ ವತಿಯಿಂದ 10 ಲಕ್ಷ ರೂ. ಪಾವತಿಸಿ ಎರಡು ಭಾರತೀಯ ಆನೆ, ಒಂದು ಸಿಂಹ, ಒಂದು ಹುಲಿ, ಎರಡು ಜಿರಾಫೆ, ಎರಡು ಝೀಬ್ರಾ, ಒಂದು ಚಿಂಪಾಂಜಿ, ಒಂದು ಬಿಳಿ ಘೇಂಡಾ ಮೃಗಗಳನ್ನು ಒಂದು ವರ್ಷಗಳ ಅವಧಿಗೆ ದತ್ತು ಪಡೆದಿದೆ. ನೋಟು ಮುದ್ರಣ ಪ್ರೈ.ಲಿ ಕಳೆದ 5 ವರ್ಷದಿಂದ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುತ್ತಾ ಬಂದಿದೆ. ಲಾಕ್‍ಡೌನ್‍ನಿಂದಾಗಿ ಆದಾಯ ಗಳಿಕೆಯಿಲ್ಲದೆ ಸೊರಗಿದ್ದ ಮೃಗಾಲಯಕ್ಕೆ 10 ಲಕ್ಷ ರೂ. ದೇಣಿಗೆ ನೀಡಿ ಪ್ರಾಣಿಗಳನ್ನು ದತ್ತು ಪಡೆದು ನೆರವಾಗಿದೆ.

ಜೊತೆಗೆ ಬೆಂಗಳೂರಿನ ಬಿ.ಪೂರ್ಣಿಮಾ ಅವರು 5 ಸಾವಿರ ಪಾವತಿಸಿ ಮ್ಯಾಂಡರಿನ್ ಡಕ್, ನಕ್ಷತ್ರ ಆಮೆ, ಸಾಮಾನ್ಯ ಹಾವು, ಸುಜಿತ್ ರಘುರಾಮ್ ಎಂಬುವರು 7500 ರೂ. ಪಾವತಿಸಿ ಚುಕ್ಕೆ ಜಿಂಕೆ (ಹೆಣ್ಣು), ಕೆ.ಬಿ. ಬೋರೆಗೌಡ ಅವರು 3500 ರೂ. ಪಾವತಿಸಿ ಬಿಳಿ ನವಿಲು ದತ್ತು ಪಡೆದಿದ್ದಾರೆ. ಇವೆಲ್ಲಾ ಒಂದು ವರ್ಷ ಅವಧಿಗೆ ಅನ್ವಯವಾಗಿರುತ್ತದೆ.

Translate »