ಮೈಸೂರು, ಆ.18(ಆರ್‍ಕೆಬಿ)- ಹೆಚ್ಚುತ್ತಿರುವ ಕೊರೊನಾ ಸೋಂಕಿ ತರ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೈಸೂರಿನ ಹಲವೆಡೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ಆರ್‍ಎಟಿ) ಶಿಬಿರ ನಡೆಸಲಾಗುತ್ತಿದ್ದು, ಮಂಗಳವಾರವೂ ಪರೀಕ್ಷೆ ನಡೆಸುವುದನ್ನು ಮುಂದುವರಿಸಲಾಯಿತು. ಪುರಭವನ ಆವರಣ, ಹೆಬ್ಬಾಳ ಸಿಐಟಿಬಿ ಛತ್ರ, ಉದಯಗಿರಿಯ ಖುಬಾ ಸ್ಕೂಲ್, ರಾಜೀವ್‍ನಗರದ ಅಲ್-ಕರೀಂ ಸ್ಕೂಲ್, ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರ್‍ಎಟಿ ನಡೆಯುತ್ತಿದ್ದು, ಸಾರ್ವಜನಿಕರೇ ನೇರವಾಗಿ ಬಂದು ಪರೀಕ್ಷಿಸಿಕೊಳ್ಳುತ್ತಿದ್ದಾರೆ.
ಪುರಭವನ ಆವರಣದಲ್ಲಿ ಸೋಮವಾರ 180 ಮಂದಿ ಆರ್‍ಎಟಿಗೆ ಒಳಪಟ್ಟಿದ್ದು, 36 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಮಂಗಳವಾರವೂ ನೂರಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತರಾಗಿ ಟೆಸ್ಟ್ ಮಾಡಿಸಿಕೊಂಡರು. ನೆಗಡಿ, ಜ್ವರ, ಕೆಮ್ಮು, ಉಸಿ ರಾಟದ ತೊಂದರೆ ಇದ್ದವರು ಆರ್‍ಎಟಿ ಶಿಬಿರದಲ್ಲಿ ಸುಲಭದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ನಗರದಲ್ಲಿ ಅಲ್ಲಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ಹೆಚ್ಚು ಮಂದಿ ಪರೀಕ್ಷೆಗೆ ಒಳಪಟ್ಟರೆ ಸೋಂಕನ್ನು ಶೀಘ್ರ ನಿಯಂತ್ರಿಸಲು ಸಾಧ್ಯ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.