ಇಂದಿನಿಂದ 4 ದಿನ ಜೆ.ಕೆ. ಮೈದಾನದಲ್ಲಿ ಹೂ ಮಾರಾಟ
ಮೈಸೂರು

ಇಂದಿನಿಂದ 4 ದಿನ ಜೆ.ಕೆ. ಮೈದಾನದಲ್ಲಿ ಹೂ ಮಾರಾಟ

August 19, 2020

ಮೈಸೂರು, ಆ.18(ಆರ್‍ಕೆ)- ನಾಳೆ (ಆ.19)ಯಿಂದ ನಾಲ್ಕು ದಿನಗಳ ಕಾಲ ಮೈಸೂರಿನ ಜೆ.ಕೆ. ಮೈದಾನದಲ್ಲಿ ಹೂವಿನ ಮಾರಾಟ ನಡೆಯಲಿದೆ.

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹೂ, ಹಣ್ಣು-ಹಂಪಲು, ಪೂಜಾ ಸಾಮಗ್ರಿ ಖರೀದಿಸಲು ಜನರು ಮುಗಿ ಬೀಳುವುದರಿಂದ ದೇವರಾಜ ಮಾರುಕಟ್ಟೆಯಲ್ಲಿ ನೂಕು-ನುಗ್ಗಲು ಉಂಟಾಗುವ ಕಾರಣ ಕೊರೊನಾ ವೈರಸ್ ಸೋಂಕು ಹರಡಲಿದೆ ಎಂಬ ಭೀತಿಯಿಂದಾಗಿ ಮೈಸೂರು ಮಹಾನಗರ ಪಾಲಿಕೆಯು ಮುಂಜಾಗ್ರತೆ ಕ್ರಮವಾಗಿ ದೇವರಾಜ ಮಾರುಕಟ್ಟೆಯಿಂದ ಹೂ ಅಂಗಡಿಗಳನ್ನು ಜೆ.ಕೆ.ಮೈದಾನಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹೂ ವ್ಯಾಪಾರಿಗಳು ಇಂದು ಜೆ.ಕೆ.ಮೈದಾನದಲ್ಲಿ ಜಾಗ ಗುರುತಿಸಿಕೊಂಡು ಪೆಂಡಾಲ್ ಹಾಕಿ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ವಚ್ಛಗೊಳಿಸಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.

ದೇವರಾಜ ಠಾಣೆ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್ ಅವರು ಮಂಗಳವಾರ ಸಂಜೆ ಜೆ.ಕೆ. ಮೈದಾನಕ್ಕೆ ಭೇಟಿ ನೀಡಿ ದೂರ ದೂರದಲ್ಲಿ ಅಂಗಡಿ ಹಾಕಿ ಸಾಮಾಜಿಕ ಅಂತರ ಕಾಪಾಡಿಕೊಂಡು ಗ್ರಾಹಕರು ಗುಂಪು ಗುಂಪಾಗಿ ಸೇರದಂತೆ ಹೂ ವ್ಯಾಪಾರ ಮಾಡುವ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಿದರು.

Translate »