ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಸಲು ಸಲಹೆ
ಮೈಸೂರು

ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಸಲು ಸಲಹೆ

May 31, 2018

ಮೈಸೂರು: ಸರ್ಕಾರಿ ಉದ್ಯೋಗಗಳು ಮುಂದಿನ ದಿನಗಳಲ್ಲಿ ಸಿಗುವುದು ಕಷ್ಟಕರವಾಗಿ ಪರಿಣಮಿಸಲಿದ್ದು, ಮಹಿಳೆಯರು ಸರ್ಕಾರದ ಸವಲತ್ತು ಪಡೆದುಕೊಂಡು ಸ್ವಯಂ ಉದ್ಯೋಗ ಮಾಡುವುದಕ್ಕೆ ಮುಂದಾಗಬೇಕೆಂದು ಮೈಸೂರು ಜಿಲ್ಲಾ ಕೈಗಾರಿಕಾ ಸಂಸ್ಥೆಯ (ಡಿಐಸಿ) ಜಂಟಿ ನಿರ್ದೇಶಕ ರಾಮಕೃಷ್ಣೇಗೌಡ ಸಲಹೆ ನೀಡಿದ್ದಾರೆ.

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜಿಲ್ಲಾ ಕೈಗಾರಿಕಾ ಸಂಸ್ಥೆ ಆವರಣದಲ್ಲಿ ಬುಧವಾರ ಮಹಿಳಾ ವಾಣ ಜ್ಯ ಮತ್ತು ಕೈಗಾರಿಕೆಗಳ ಸಬಲೀಕರಣ(ವೆಬ್)ಸಂಸ್ಥೆ ಮಹಿಳಾ ಕೈಗಾರಿಕೋದ್ಯಮಿಗಳಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗಾರಿಕಾ ಕ್ಷೇತ್ರಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಮಹಿಳೆಯರು ಆರಂಭಿಸಿರುವ ಕೈಗಾರಿಕೆಗಳಲ್ಲಿ ಯಶಸ್ಸಿನ ಪ್ರಮಾಣ ಹೆಚ್ಚಾಗಿದೆ. ಕೈಗಾರಿಕಾ ಕ್ಷೇತ್ರಕ್ಕೆ ಬರುವ ಮಹಿಳೆಯರಿಗೆ ಸರ್ಕಾರ ಹಾಗೂ ಕೈಗಾರಿಕಾ ಸಂಸ್ಥೆ ಉತ್ತೇಜನ ನೀಡುತ್ತಾ ಬಂದಿದೆ. ಕೆಲವು ಯೋಜನೆಗಳು ಮಹಿಳೆಯರಿಗಾಗಿಯೇ ಇವೆ. ಇದರ ಸದುಪಯೋಗ ಪಡೆದುಕೊಂಡು ಉದ್ಯಮ ಆರಂಭಿಸಿ ಯಶಸ್ವಿಯಾಗುವಂತೆ ಕರೆ ನೀಡಿದರು.

ಮಹಿಳೆಯರಿಗೆ ಉದ್ಯಮ ಆರಂಭಿಸುವುದು, ಸಂಪನ್ಮೂಲ ಕ್ರೂಡೀಕರಿಸುವುದು, ಮಾರ್ಕೆಟಿಂಗ್, ಸ್ಥಳ ಸೇರಿದಂತೆ ವಿವಿಧ ಅಗತ್ಯ ಮಾಹಿತಿ ನೀಡುವುದಕ್ಕಾಗಿ ಇಂದು ತರಬೇತಿ ನಡೆಸಲಾಗುತ್ತಿದೆ. ಉದ್ಯಮ ಆರಂಭಕ್ಕು ಮುನ್ನ ಯಾವ ಉದ್ಯಮ ಆರಂಭಿಸಬೇಕೆಂದು ನಿರ್ಧರಿಸಬೇಕು. ಸುಮಾರು 10 ಯೋಜನೆಗಳು ನಿಮ್ಮ ಮುಂದೆ ಇದ್ದರೆ, ಅವುಗಳಲ್ಲಿ 5 ಯೋಜನೆಗಳನ್ನು ಶಾರ್ಟ್ ಲಿಸ್ಟ್ ಮಾಡಿಕೊಳ್ಳಬೇಕು. ನಂತರ ಆ ಐದರಲ್ಲಿ ಎರಡನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಮಾರುಕಟ್ಟೆ ಇರುವ ಯಾವುದಾದರೂ ಒಂದು ಉದ್ಯಮವನ್ನು ಅಂತಿಮಗೊಳಿಸಿ ದೃಡ ಮನಸ್ಸಿನಿಂದ ಉತ್ಪಾದನೆ ಆರಂಭಿಸಬೇಕು. ಪ್ರಸ್ತುತ ಯಾವುದೇ ಉದ್ಯಮ ಆರಂಭಿಸಿದರೂ ಯಶಸ್ಸು ಸಾಧಿಸಬಹುದಾಗಿದೆ. ಅಂತರ್ಜಾಲದ ಮೂಲಕ ಮಾರುಕಟ್ಟೆಯನ್ನು ಕುಳಿತ ಸ್ಥಳದಲ್ಲಿಯೇ ಕಲ್ಪಿಸಿಕೊಳ್ಳಬಹುದು. ಮೈಸೂರು, ಬೆಂಗಳೂರು, ರಾಜ್ಯದ ವಿವಿಧೆಡೆ, ಹೊರ ರಾಜ್ಯ ಅಥವಾ ವಿದೇಶಗಳಲ್ಲಿಯೂ ಮಾರುಕಟ್ಟೆ ಕಂಡುಕೊಳ್ಳಬಹುದು. ಪ್ರಸ್ತುತ ಜಾಗತಿಕ ಮಾರುಕಟ್ಟೆ ವ್ಯವಸ್ಥೆ ಇರುವುದರಿಂದ ಉದ್ಯಮಿಗಳಿಗೆ ನೆರವಾಗಲಿದೆ ಎಂದು ಹೇಳಿದರು.

ಮಹಿಳಾ ಉದ್ಯಮಿಗಳಿಗೆ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯವೂ ದೊರೆಯಲಿದೆ. ಜಿಲ್ಲಾ ಕೈಗಾರಿಕಾ ಸಂಸ್ಥೆಯ ವತಿಯಿಂದ ಮಹಿಳಾ ಉದ್ಯಮಿಗಳಿಗೆ ಉದ್ಯಮ ಸ್ಥಾಪಿಸಲು ನಿವೇಶನದ ಸೌಲಭ್ಯವನ್ನು ನೀಡುತ್ತಿದೆ. ಸಂಸ್ಥೆಯ ವತಿಯಿಂದ ನಿವೇಶನ ಸಿಗುವವರೆಗೂ ಮಹಿಳೆಯರು ಯಾವುದಾದರೂ ಸ್ಥಳದಲ್ಲಿ ಉತ್ಪಾದನೆಗೆ ಅನುಗುಣವಾಗಿ ಅಗತ್ಯವಿರುವ ವಿಸ್ತೀರ್ಣದ ಮಳಿಗೆ ಅಥವಾ ನಿವೇಶನದಲ್ಲಿ ಉದ್ಯಮ ಆರಂಭಿಸುವುದು ಸೂಕ್ತ. ಮಾಹಿತಿಯ ಕೊರತೆಯಿಂದ ಸಣ್ಣ ಉದ್ಯಮವನ್ನು ದೊಡ್ಡ ಸ್ಥಳದಲ್ಲಿ ಆರಂಭಿಸುವುದರಿಂದ ನಷ್ಟ ಸಂಭವಿಸುವ ಸಂದರ್ಭ ಎದುರಾಗಬಹುದು ಎಂದು ಎಚ್ಚರಿಸಿದರು.

ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಕೆ.ರಾಧ, ರುಡ್‍ಸೆಟ್ ಸಂಸ್ಥೆಯ ರವೀಂದ್ರ, ಕೆನರಾ ಬ್ಯಾಂಕ್ ವತಿಯಿಂದ ಮೋಹನ್ ಅವರು ಉದ್ಯಮ ಆರಂಭಿಸುವುದಕ್ಕೆ ಇಲಾಖೆ ಹಾಗೂ ಬ್ಯಾಂಕ್ ನೀಡುವ ಸಹಕಾರವನ್ನು ವಿವರಿಸಿದರಲ್ಲದೆ, ಯಾವ ಮಾರ್ಗ ಅನುಸರಿಸಿದರೆ ಕೈಗಾರಿಕೆಯಲ್ಲಿ ಯಶಸ್ಸು ಸಾಧಿಸಬಹುದೆಂಬ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ವಾಣ ಜ್ಯ ಮತ್ತು ಕೈಗಾರಿಕೆಗಳ ಸಬಲೀಕರಣ(ವೆಬ್)ಸಂಸ್ಥೆ ಅಧ್ಯಕ್ಷೆ ಗಾಯತ್ರಿ, ಒಕ್ಕೂಟದ ಅಧ್ಯಕ್ಷೆ ಪ್ರೇಮಕುಮಾರಿ, ಸದಸ್ಯೆ ರಚನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »