ಜನಸಾಮಾನ್ಯರು ತತ್ತರಿಸುವಂತೆ ಮಾಡಿರುವ  ಪೆಟ್ರೋಲ್, ಡೀಸೆಲ್ ದರ ಜಿಎಸ್‍ಟಿ ವ್ಯಾಪ್ತಿಗೆ ತರಲು ಒತ್ತಾಯಿಸಿ ಪ್ರತಿಭಟನೆ
ಮೈಸೂರು

ಜನಸಾಮಾನ್ಯರು ತತ್ತರಿಸುವಂತೆ ಮಾಡಿರುವ  ಪೆಟ್ರೋಲ್, ಡೀಸೆಲ್ ದರ ಜಿಎಸ್‍ಟಿ ವ್ಯಾಪ್ತಿಗೆ ತರಲು ಒತ್ತಾಯಿಸಿ ಪ್ರತಿಭಟನೆ

May 31, 2018

ಮೈಸೂರು:  ಜನಸಾಮಾನ್ಯರ ಅತೀ ಅಗತ್ಯವಾದ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಸತತವಾಗಿ ಏರುತ್ತಲೇ ಇದ್ದು, ಇದರಿಂದ ಜನ ತತ್ತರಿಸುತ್ತಿದ್ದರೂ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಬುಧವಾರ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು. ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಪ್ರತಿ 6 ರಿಂದ 9 ತಿಂಗಳಿಗೊಮ್ಮೆ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಯಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಜನರಿಗೆ ಅರಿವಿಲ್ಲದಂತೆ ಪ್ರತಿನಿತ್ಯ 10ರಿಂದ 15 ಪೈಸೆಯಂತೆ ಸತತವಾಗಿ ಏರಿಕೆ ಮಾಡುತ್ತಾ ಜನರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಪೆಟ್ರೋಲ್, ಡೀಸೆಲ್ ದರ ಸತತ ಏರಿಕೆಯಿಂದ ಜನಸಾಮಾನ್ಯರ ಅಗತ್ಯ ವಸ್ತುಗಳ ದರವೂ ಹೆಚ್ಚುತಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ. ನೋಟು ಅಮಾನ್ಯೀಕರಣ, ಜಿಎಸ್‍ಟಿಯಂತಹ ಜನವಿರೋಧಿ ನಿರ್ಧಾರಗಳನ್ನು ಏಕಾ-ಏಕಿ ಕೈಗೊಂಡು ಸರ್ಕಾರಕ್ಕೆ ಆದಾಯ ಬರುವ ಎಲ್ಲಾ ಸರಕುಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದಿರುವ ಸರ್ಕಾರ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ಒಳಪಡಿಸದಿರುವುದು ಆಶ್ಚರ್ಯಕರವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ಒಳಪಡಿಸಿದರೆ ಪೆಟ್ರೋಲ್, ಡೀಸೆಲ್ ದರಗಳು ಈಗಿನ ದರಕ್ಕಿಂತ ಶೇ.50ರಷ್ಟು ಇಳಿಯುವ ಸಾಧ್ಯತೆಗಳಿವೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ನಗರಾಧ್ಯಕ್ಷ ಪಿ.ಪ್ರಜೇಶ್, ಮುಖಂಡರಾದ ಆರ್.ಶಾಂತಮೂರ್ತಿ, ಸಿ.ಎಸ್.ನಂಮಜುಂಸಸ್ವಾಮಿ, ಶಾಂತರಾಜೇ ಅರಸ್, ಜಗದೀಶ್, ಸುನೀಲ್‍ಲಕುಮಾರ್, ಕೆ.ಸಿ.ಗುರುಮಲ್ಲಪ್ಪ, ಮನುನಾಯಕ್, ವಿಜಯೇಂದ್ರ ಇನ್ನಿತರರು ಭಾಗವಹಿಸಿದ್ದರು.

Translate »