ಡೀಸೆಲ್ ದರ ಏರಿಕೆ ಯದ್ವಾತದ್ವಾ ಒಂದೆರಡು ದಿನದಲ್ಲಿ ಬಸ್ ದರ ಶೇ.15ರಷ್ಟು ಹೆಚ್ಚಳ
ಮೈಸೂರು

ಡೀಸೆಲ್ ದರ ಏರಿಕೆ ಯದ್ವಾತದ್ವಾ ಒಂದೆರಡು ದಿನದಲ್ಲಿ ಬಸ್ ದರ ಶೇ.15ರಷ್ಟು ಹೆಚ್ಚಳ

September 5, 2018

ಬೆಂಗಳೂರು:  ರಾಜ್ಯ ರಸ್ತೆ ಸಾರಿಗೆ ದರ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ದಿನನಿತ್ಯ ಡೀಸೆಲ್ ದರ ಹೆಚ್ಚಳದ ಹಿನ್ನೆಲೆಯಲ್ಲಿ ಶೇ. 15 ರಷ್ಟು ದರ ಹೆಚ್ಚಳ ಮಾಡುವ ಸಂಬಂಧ ಒಂದೆರಡು ದಿನದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಇಂದಿಲ್ಲಿ ಪ್ರಕಟಿಸಿದ್ದಾರೆ.

ಹಿರಿಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ಮೊದಲು ಮೂರು ತಿಂಗಳು ಆರು ತಿಂಗಳಿಗೊಮ್ಮೆ ಡೀಸೆಲ್ ದರ ಹೆಚ್ಚಳ ಮಾಡುತ್ತಿತ್ತು. ಆದರೆ ಇದೀಗ ಪ್ರತಿನಿತ್ಯ ದರ ಹೆಚ್ಚಳವಾಗುತ್ತಿರುವುದರಿಂದ ನಾಲ್ಕು ನಿಗಮಗಳು ನಷ್ಟದಲ್ಲಿವೆ. ಕಳೆದ ಮೂರು ತಿಂಗಳಲ್ಲೇ 180 ಕೋಟಿ ರೂ.ಗಳಷ್ಟು ನಷ್ಟವುಂಟಾಗಿದ್ದು, ನಷ್ಟ ಸರಿತೂಗಿಸಲು ಮತ್ತು ಮೂಲ ಸೌಕರ್ಯ ಕಲ್ಪಿಸಲು ಪ್ರಯಾಣಿಕರ ಮೇಲೆ ಸ್ವಲ್ಪ ಹೊರೆ ಅನಿವಾರ್ಯ ಎಂದರು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಶೇ. 15 ರಷ್ಟು ದರ ಹೆಚ್ಚಳ ಮಾಡಬೇಕೆಂದು ನಿಗಮಗಳು ಪ್ರಸ್ತಾವನೆ ಇಟ್ಟಿದ್ದವು.

ಅಧಿಕಾರಕ್ಕೆ ಬಂದ ಹೊಸದರಲ್ಲೇ ಪ್ರಯಾಣಿಕರ ಮೇಲೆ ದರ ಹೆಚ್ಚಳ ಮಾಡು ವುದು ಬೇಡ ಎಂದು ತಳ್ಳಿಕೊಂಡು ಬಂದೆವು. ಆದರೆ ಕೇಂದ್ರ ದಿನನಿತ್ಯ ತೈಲ ಬೆಲೆ ಹೆಚ್ಚಳ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆ ಉಳಿಸಿಕೊಳ್ಳಲು ಪ್ರಯಾಣ ದರ ಹೆಚ್ಚಳ ಅನಿವಾರ್ಯ. ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯವರ ಜೊತೆ ಸಮಾಲೋಚಿಸಿ, ನಿಗಮಗಳು ನೀಡಿರುವ ಪ್ರಸ್ತಾವನೆ ಮತ್ತೊಮ್ಮೆ ಪರಿಶೀಲಿಸಿ ಸಾಧ್ಯವಾದರೆ ಪ್ರಸ್ತಾವ ಕಡಿಮೆ ಮಾಡಿ, ಹೆಚ್ಚಳಕ್ಕೆ ಹಸಿರು ನಿಶಾನೆ ನೀಡಲಾಗುವುದು.

ಒಂದೆಡೆ ಸಾರಿಗೆ ದರ ಹೆಚ್ಚಳ

ಮಾಡಿದರೆ, ಮತ್ತೊಂದೆಡೆ ಪ್ರಯಾಣಿಕರಿಗೆ ಹೆಚ್ಚಿನ ಮೂಲ ಸೌಕರ್ಯ ಕಲ್ಪಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಒಂದೆಡೆ ಸೋರಿಕೆ ತಡೆಗಟ್ಟಲು ಜನದಟ್ಟಣೆ ಇಲ್ಲದ ಸಂದರ್ಭದಲ್ಲಿ ಕೆಲವು ಮಾರ್ಗಗಳಲ್ಲಿ ಬಸ್‍ಗಳ ಓಡಾಟದ ಸಂಖ್ಯೆ ಕಡಿಮೆ ಮಾಡಲು ಸಂಬಂಧಪಟ್ಟ ಎಲ್ಲಾ ಡಿಸಿಗಳಿಗೆ ಸೂಚಿಸಲಾಗಿದೆ. ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್‍ಗಳು ಮನಸ್ಸೋ ಇಚ್ಛೆ ಟಿಕೆಟ್ ದರ ದುಬಾರಿ ಆಗುತ್ತಿರುವುದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ವತಿಯಿಂದಲೇ ಹೊಸದಾಗಿ 50 ಸ್ಲೀಪರ್ ಬಸ್ ಹಾಗೂ ಲಕ್ಸುರಿ ಬಸ್‍ಗಳನ್ನು ಖರೀದಿ ಮಾಡಲು ತೀರ್ಮಾನಿಸಲಾಗಿದೆ.

ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್‍ಗಳಿಗೆ ಚಾಲನೆ ನೀಡಲು ತೀರ್ಮಾನಿಸಿದ್ದು, ಕೇಂದ್ರ ಸರ್ಕಾರ 80 ಬಸ್‍ಗಳ ಖರೀದಿಗೆ ಶೇಕಡ 75 ರಷ್ಟು ಸಬ್ಸಿಡಿ ನೀಡುತ್ತದೆ. ಎಲೆಕ್ಟ್ರಿಕ್ ಬಸ್‍ಗಳನ್ನು ಖಾಸಗಿ ಸಂಸ್ಥೆಯವರಿಗೆ ವಹಿಸಿಕೊಟ್ಟರೆ, ಅವರು ಕೇಂದ್ರದಿಂದ ಶೇಕಡ 75 ರಷ್ಟು ಸಬ್ಸಿಡಿ ಪಡೆಯುವುದಲ್ಲದೆ, ನಮ್ಮ ಸಂಸ್ಥೆ ವತಿಯಿಂದ ಪ್ರತಿ ಕಿಲೋ ಮೀಟರ್‍ಗೆ 35 ರೂ. ತೆರಬೇಕು. ಇದರ ಬದಲು ನಾವೇ ಪ್ರತ್ಯೇಕ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‍ಗಳನ್ನು ಓಡಾಡಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು. ಇನ್ನು ಮುಂದೆ ನಗರದ ಹೊರ ವಲಯದಲ್ಲಿರುವ ಸ್ಯಾಟ್‍ಲೈಟ್ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್‍ಗಳು ಪ್ರತ್ಯೇಕವಾಗಿ ಆಪರೇಟ್ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುವುದು. ಯಾರು ನಗರದಲ್ಲಿ ತಮ್ಮ ಸ್ವಂತ ನಿಲ್ದಾಣಗಳನ್ನು ಇಟ್ಟುಕೊಂಡಿರುತ್ತಾರೋ ಅಂತಹ ವರನ್ನು ಹೊರತುಪಡಿಸಿ, ಉಳಿದವರು ಇಲ್ಲಿಂದಲೇ ಬಸ್‍ಗಳ ಆಪರೇಟ್ ಮಾಡಬೇಕಾ ಗುತ್ತದೆ. ಇದಕ್ಕೆ ಅಗತ್ಯವಾದ ನಿಯಮವನ್ನು ರೂಪಿಸುವುದಾಗಿ ಹೇಳಿದರು. ಕಳೆದ ಕೆಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 400 ಆರ್‍ಟಿಓ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Translate »