`ಮೈಸೂರು ಪತ್ರಿಕೆ’ ಸಂಪಾದಕ ಟಿ.ವೆಂಕಟರಾಮ್ ನಿಧನ
ಮೈಸೂರು

`ಮೈಸೂರು ಪತ್ರಿಕೆ’ ಸಂಪಾದಕ ಟಿ.ವೆಂಕಟರಾಮ್ ನಿಧನ

May 31, 2018

ಮೈಸೂರು: ಮೈಸೂರಿನ ಹಿರಿಯ ಪತ್ರಕರ್ತ, `ಮೈಸೂರು ಪತ್ರಿಕೆ’ ಸಂಪಾದಕ ಟಿ.ವೆಂಕಟರಾಮ್ ಬುಧವಾರ ಮಧ್ಯಾಹ್ನ ವಿದ್ಯಾರಣ್ಯಪುರಂನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ವೃತರು ಏಳು ಪುತ್ರಿಯರು ಹಾಗೂ ಓರ್ವ ಪುತ್ರ ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಮೇ 31ರ ಗುರುವಾರ ಬೆಳಿಗ್ಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಮೈಸೂರಿನಲ್ಲಿ 75 ವರ್ಷಗಳಿಗೂ ಹೆಚ್ಚು ಕಾಲದಿಂದ ಸತತವಾಗಿ ಪ್ರಕಟವಾಗುತ್ತಿರುವ `ಮೈಸೂರು ಪತ್ರಿಕೆ’ಯ ಸಂಸ್ಥಾಪಕರಾದ ತಮ್ಮ ತಂದೆ ಟಿ.ನಾರಾಯಣ ಅವರ ನಂತರ 1976ರಿಂದ ಪತ್ರಿಕೆಯ ಸಂಪಾದಕರಾಗಿ ಜವಾಬ್ದಾರಿ ಹೊತ್ತ ಟಿ.ವೆಂಕಟರಾಮ್, ಇದುವರೆಗೂ ನಿರಂತರವಾಗಿ ಪತ್ರಿಕೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಕೇವಲ ಸರ್ಕಾರಿ ಜಾಹಿರಾತನ್ನೇ ನಂಬಿ ಪತ್ರಿಕೆ ನಡೆಸಿಕೊಂಡು ಬಂದಿದ್ದ ಅವರು ಇಡೀ ಜೀವನವನ್ನು ಪತ್ರಿಕಾ ವೃತ್ತಿಗೇ ಮೀಸಲಿಟ್ಟಿದ್ದರು.

ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ ಅವರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಹಿರಿಯ ಸದಸ್ಯರೂ ಆಗಿದ್ದರು. ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಟಿ.ವೆಂಕಟರಾಮ್ ಅವರ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ.

Translate »