ಜೂನ್ ಪೂರ್ತಿ ಪರಿಸರ ಮಾಸಾಚರಣೆ
ಮೈಸೂರು

ಜೂನ್ ಪೂರ್ತಿ ಪರಿಸರ ಮಾಸಾಚರಣೆ

May 31, 2018

ಮೈಸೂರು: ಪರಿಸರ ಸಂರಕ್ಷಣೆಯ ಹಿನ್ನೆಲೆಯಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಮೈಸೂರು ಕೇಂದ್ರ, ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಿಂದ ಜೂನ್ ತಿಂಗಳನ್ನು `ಪರಿಸರ ಮಾಸಾಚರಣೆ’ಯನ್ನಾಗಿ ಆಚರಿಸಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಸಂಸ್ಥೆಯ ಮೈಸೂರು ಘಟಕದ ಅಧ್ಯಕ್ಷ ಕೆ.ಸುಬ್ರಹ್ಮಣ್ಯರಾವ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಪರಿಸರ ಮಾಸಾಚರಣೆಯನ್ನಾಗಿ ಆಚರಿಸಲು ನಮ್ಮ ಸಂಸ್ಥೆ ನಿರ್ಧರಿಸಿದೆ. ಇದರ ಅಂಗವಾಗಿ ಗಿಡ ನೆಡುವುದು, ಗ್ರೀನ್ ಟ್ರಸರ್ ಹಂಟ್, ವಸ್ತು ಪ್ರದರ್ಶನ, ಶಾಲಾ ಮಕ್ಕಳಿಗೆ ಸ್ಪರ್ಧೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜೂ.2ರಂದು ಜೆ.ಪಿನಗರದಲ್ಲಿರುವ ಮೈಸೂರು ಬಿಲ್ಡರ್ಸ್ ಚಾರಿಟೆಬಲ್ ಟ್ರಸ್ಟ್ ಸಂಕೀರ್ಣದ ಸಭಾಂಗಣದಲ್ಲಿ ಸಂಜೆ 6ಕ್ಕೆ ಸಾವಯವ ಕೃಷಿಕ ಡಾ.ನಾರಾಯಣ ರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪರಿಸರವಾದಿ ಕಮಲ್ ಸಾಗರ್ ಆಶಯ ಭಾಷಣ ಮಾಡಲಿದ್ದಾರೆ. ಜೂ.4 ರಂದು ಗೃಹಿಣ ಯರಿಗಾಗಿ ಡೇವಿತ್ ಹೋಂ ಮೇಕರ್ಸ್ ಕಾರ್ಯಕ್ರಮದಡಿಯಲ್ಲಿ ಮಹಿಳಾ ಜಾಗೃತಿಗಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಯೋಗಗುರು ಡಾ.ರಾಘವೇಂದ್ರ ಪೈ, ಚಿತ್ರನಟಿ ರೇಖಾ ರೋಹಿತ್, ಡಾ.ಹೇಮಲತಾ, ಮಾತನಾಡುವ ಗೊಂಬೆ ಕಲಾವಿದೆ ಸುಮಾರಾಜ್ ಕುಮಾರ್ ಅವರಿಂದ ಕಾರ್ಯಕ್ರಮವಿದೆ ಎಂದರು.

ಜೂ.7ರಿಂದ 14ರವರೆಗೆ ಬೋಗಾದಿಯಲ್ಲಿ ಗಿಡ ನೆಡುವ ಕಾರ್ಯಕ್ರಮ, ಜೂ.17ರಂದು ಹಸಿರು ಸಂಪತ್ತಿನ ಶೋಧನೆ ಕಾರ್ಯಕ್ರಮವನ್ನು ಮೈಸೂರಿನ ಸುತ್ತಮುತ್ತ ನಡೆಸಲಾಗುತ್ತದೆ. ಜೂ.10ರರಂದು ಮಡಿಕೇರಿ ಬಳಿ ಇರುವ ತಡಿಯಾಂಡಮೋಲ್ ಗಿರಿಧಾಮದಲ್ಲಿ ಚಾರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೂ.22ರಿಂದ 24ರವರೆಗೆ ಎಂಬಿಸಿಟಿ ಆವರಣದಲ್ಲಿ ಮೈಗ್ರೀನ್ ಘೋಷಣೆಯಡಿ ಪರಿಸರ ಸ್ನೇಹಿ ಪದಾರ್ಥಗಳ ವಸ್ತುಪ್ರದರ್ಶನದಲ್ಲಿ ಸಾವಯವ ಪದಾರ್ಥಗಳು, ಪರಿಸರ ಸಂರಕ್ಷಣೆ ಬಗ್ಗೆ ಕಿರುಚಿತ್ರ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೂ.24ರಂದು ನಗರದ ವಿಜಯ ವಿಠಲ ಶಾಲೆಯಲ್ಲಿ ಮಕ್ಕಳಿಗಾಗಿ ಪರಿಸರ ಸಂರಕ್ಷಣೆ ಕುರಿತು, ಚಿತ್ರಕಲಾ ಸ್ಪರ್ಧೆ ಹಾಗೂ ಜೂ. 29ರಂದು ಎಂಬಿಸಿಟಿ ಆವರಣದಲ್ಲಿ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಎಐ ಕಾರ್ಯದರ್ಶಿ ಕೆ.ಅಜಿತ್ ನಾರಾಯಣ್, ಪರಿಸರ ಮಾಸಾಚರಣೆ ಕಮಿಟಿ ಅಧ್ಯಕ್ಷ ಜೆವಿಆರ್ ನೈಧ್ರುವ ಇದ್ದರು.

Translate »