ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ, ಜೀವನಶೈಲಿ ಸಾಮಾಗ್ರಿಗಳ ವಸ್ತು ಪ್ರದರ್ಶನ ಮೈ ಗ್ರೀನ್-2018
ಮೈಸೂರು

ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ, ಜೀವನಶೈಲಿ ಸಾಮಾಗ್ರಿಗಳ ವಸ್ತು ಪ್ರದರ್ಶನ ಮೈ ಗ್ರೀನ್-2018

June 21, 2018

ಮೈಸೂರು:  ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ (ಬಿಎಐ) ಮೈಸೂರು ಕೇಂದ್ರ, ಮೈಸೂರು ಬಿಲ್ಡರ್ ಚಾರಿಟಬಲ್ ಟ್ರಸ್ಟ್ (ಎಂಬಿಸಿಟಿ) ವತಿಯಿಂದ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಹಾಗೂ ಜೀವನಶೈಲಿ ಸಾಮಾಗ್ರಿಗಳ ವಸ್ತು ಪ್ರದರ್ಶನ `ಮೈ ಗ್ರೀನ್-2018’ ಜೂ.23ರಿಂದ 24ರವರೆಗೆ ನಡೆಯಲಿದೆ ಎಂದು ಬಿಎಐ ಮೈಸೂರು ಕೇಂದ್ರದ ಅಧ್ಯಕ್ಷ ಕೆ.ಸುಬ್ರಹ್ಮಣ್ಯರಾವ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್‍ನಲ್ಲಿ ಪರಿಸರ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಶ್ವ ಪರಿಸರ ಮಾಸಾಚರಣೆಯನ್ನು ಬಿಎಐ ಮೈಸೂರು ಕೇಂದ್ರ ಆಚರಿಸುತ್ತಿದೆ. ಈ ಮಾಸಾಚರಣೆ ಅಂಗವಾಗಿ 7 ಪರಿಸರ ಪೂರಕ ಕಾರ್ಯಕ್ರಮಗಳನ್ನು ನಡೆಸಿದ್ದು, ಇದರ ಭಾಗವಾಗಿ ವಿಶ್ವೇಶ್ವರನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ (ಸ್ಟರ್ಲಿಂಗ್ ಥಿಯೇಟರ್ ರಸ್ತೆ) ಬಿಎಐ ಮೈಸೂರು ಕೇಂದ್ರದ ಆವರಣದಲ್ಲಿ ಎರಡು ದಿನಗಳ `ಮೈ ಗ್ರೀನ್-2018’ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಇದು 5ನೇ ಮೈ ಗ್ರೀನ್ ವಸ್ತು ಪ್ರದರ್ಶನವಾಗಿದ್ದು, ಜೂ.22ರ ಸಂಜೆ 6.30ಕ್ಕೆ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಯಾಗಿ ಜಲ ತಜ್ಞ ವಿಶ್ವನಾಥ್ ಶ್ರೀಕಂಠಯ್ಯ, ಅತಿಥಿಯಾಗಿ ಎಂಬಿಸಿಟಿ ವ್ಯವಸ್ಥಾಪಕ ಟ್ರಸ್ಟಿ ಎ.ಆರ್.ರವೀಂದ್ರ ಭಟ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ವಸ್ತು ಪ್ರದರ್ಶನದಲ್ಲಿ ಸಾವಯವ ಕೃಷಿ ಮೇಳ ಏರ್ಪಡಿಸಲಾಗಿದೆ. ಜೊತೆಗೆ ಕುಕ್ಕರಹಳ್ಳಿ ಕೆರೆ ಆವರಣದ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ ಹಾಗೂ ವನ್ಯಜೀವಿ ಚಲನಚಿತ್ರ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.

ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ತಾವು ಆವಿಷ್ಕಾರಗೊಳಿಸಿದ ಪರಿಸರ ಸ್ನೇಹಿ ತಂತ್ರಜ್ಞಾನದ ಉಪಕರಣಗಳ ಪ್ರದರ್ಶನ ಮಾಡಲಿದ್ದಾರೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆ (ಕೆಆರ್‍ಇಡಿಎಲ್) ಹಾಗೂ ಎನ್‍ಐಇ-ಕ್ರೆಸ್ಟ್ ವತಿಯಿಂದ ಪರಿಸರ ಸ್ನೇಹಿ ತಂತ್ರಜ್ಞಾನದ ಅಗತ್ಯ ವಸ್ತುಗಳ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.
ಶೌಚಾಲಯ ಶುದ್ಧಿಕರಣ ಉಪಕರಣಗಳು, ಉತ್ಪಾದಿತ ಮರಳು, ನವೀಕರಿಸದ ಮರದ ಉತ್ಪನ್ನಗಳು, ಪರಿಸರ ಸ್ನೇಹಿ ಕಟ್ಟಡ ತಂತ್ರಜ್ಞಾನ ಹಾಗೂ ಉತ್ಪನ್ನಗಳು, ಸೋಲಾರ್ ವಾಟರ್ ಹೀಟರ್, ಸೋಲಾರ್ ಲೈಟ್‍ಗಳು, ಕುಡಿಯುವ ನೀರಿನ ಸಂಸ್ಕರಣೆ ಸಾಧನಗಳು, ಲಂಟಾನ ಗಿಡದ ಕಡ್ಡಿಗಳಿಂದ ತಯಾರಿಸಿದ ಪೀಠೋಪಕರಣಗಳು, ಕರಕುಶಲ ವಸ್ತುಗಳು ಪ್ರದರ್ಶನದಲ್ಲಿ ಇರಲಿವೆ. ನೀರು ರಹಿತ ವಾಹನ ಶುದ್ದೀಕರಣ, ಕೊಳಚೆ ನೀರಿನ ಸಂಸ್ಕರಣೆ ಮತ್ತು ಮರು ಉಪಯೋಗದ ತಂತ್ರಜ್ಞಾನದ ಬಗ್ಗೆಯೂ ಪ್ರದರ್ಶನ ಬೆಳಕು ಚೆಲ್ಲಲಿದೆ.

ಎರಡು ದಿನಗಳ ವಸ್ತು ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, ಬೆಳಿಗ್ಗೆ 10ರಿಂದ ಸಂಜೆ 9ರವರೆಗೆ ಸಾರ್ವಜನಿಕರು ಭೇಟಿ ನೀಡಬಹುದು. ಪ್ರದರ್ಶನ ನಡೆಯುವ ಆವರಣದಲ್ಲಿಯೇ ಜೂ.23 ಮತ್ತು 24ರಂದು ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಬಿಎಐ ಮೈಸೂರು ಕೇಂದ್ರದ ಕಾರ್ಯದರ್ಶಿ ಕೆ.ಅಜಿತ್‍ನಾರಾಯಣ್, ಮೈ ಗ್ರೀನ್-2018ರ ಅಧ್ಯಕ್ಷ ಬಿ.ಎಸ್.ದಿನೇಶ್, ಕಾರ್ಯದರ್ಶಿ ಕೆ.ಆರ್.ಪ್ರಭಾಕರ್‍ರಾವ್, ವಿಶ್ವ ಪರಿಸರ ಮಾಸಾಚರಣೆ ಸಮಿತಿ ಅಧ್ಯಕ್ಷ ಜೆ.ವಿ.ಆರ್.ನೈಧ್ರುವ ಗೋಷ್ಠಿಯಲ್ಲಿದ್ದರು.

ವನ್ಯಜೀವಿ ಚಲನಚಿತ್ರ ಪ್ರದರ್ಶನ

ಮೈಸೂರು:  `ಮೈ ಗ್ರೀನ್-2018’ ವಸ್ತು ಪ್ರದರ್ಶನದ ಅಂಗವಾಗಿ ಬಿಎಐ ಮೈಸೂರು ಕೇಂದ್ರದ ಸಭಾಂಗಣದಲ್ಲಿ ವನ್ಯಜೀವಿ ಚಲನಚಿತ್ರ ಪ್ರದರ್ಶನ ಸಹ ಏರ್ಪಡಿಸಲಾಗಿದೆ ಎಂದು `ಮೈ ಗ್ರೀನ್-2018’ರ ಅಧ್ಯಕ್ಷ ಬಿ.ಎಸ್.ದಿನೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಸಿ ಪ್ಲ್ಯಾನೆಟ್ ಆರ್ತ್ ಸೀರಿಸ್-2ರ ವನ್ಯಜೀವಿ ಚಲನಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಜೂ.23ರಂದು ಮಧ್ಯಾಹ್ನ 12ರಿಂದ 1ರವರೆಗೆ `ಗ್ರಾಸ್ಲ್ಯಾಂಡ್’, ಸಂಜೆ 4ರಿಂದ 5ರವರೆಗೆ `ಮೌಂಟೆನ್ಸ್’ ಹಾಗೂ ಸಂಜೆ 6ರಿಂದ 7ರವರೆಗೆ `ಡೆಸರ್ಟ್’ ಚಿತ್ರಗಳ ಪ್ರದರ್ಶನವಿದೆ. ಅದೇ ರೀತಿ ಜೂ.24ರಂದು ಮಧ್ಯಾಹ್ನ 12ರಿಂದ 1ರವರೆಗೆ `ಐಸ್‍ಲ್ಯಾಂಡ್’, ಸಂಜೆ 4ರಿಂದ 5ರವರೆಗೆ `ಸಿಟೀಸ್’ ಹಾಗೂ ಸಂಜೆ 6ರಿಂದ 7ರವರೆಗೆ `ಜಂಗಲ್ಸ್’ ಚಿತ್ರಗಳ ಪ್ರದರ್ಶನ ಇರಲಿದೆ. ಚಲನಚಿತ್ರ ಪ್ರದರ್ಶನಕ್ಕೂ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.

Translate »