ವರುಣಾ ಕ್ಷೇತ್ರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯರ ಮೊದಲ ಪ್ರಗತಿ ಪರಿಶೀಲನಾ ಸಭೆ: ನದಿ ನೀರಿನ ಮೂಲ ಸದ್ಬಳಕೆಗೆ ಅಧಿಕಾರಿಗಳಿಗೆ ಸೂಚನೆ
ಮೈಸೂರು

ವರುಣಾ ಕ್ಷೇತ್ರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯರ ಮೊದಲ ಪ್ರಗತಿ ಪರಿಶೀಲನಾ ಸಭೆ: ನದಿ ನೀರಿನ ಮೂಲ ಸದ್ಬಳಕೆಗೆ ಅಧಿಕಾರಿಗಳಿಗೆ ಸೂಚನೆ

June 21, 2018

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸುತ್ತಲೂ ನದಿ ನೀರಿನ ಮೂಲವಿದ್ದು, ಇಂತಹ ವಾತಾವರಣ ರಾಜ್ಯದ ಹಲವು ಜಿಲ್ಲೆಗಳಿಗೆ ಇಲ್ಲ. ನೀರಿನ ಮೂಲವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು. ಕೆರೆಗಳನ್ನು ತುಂಬಿಸುವ ಬಗ್ಗೆ ಅಧಿಕಾರಿಗಳು ತಿಂಗಳೊಳಗೆ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಆರ್.ಧ್ರುವನಾರಾಯಣ್ ಮತ್ತು ವರುಣಾ ಕ್ಷೇತ್ರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಇಂದಿಲ್ಲಿ ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೈಸೂರಿನ ಮಿನಿ ವಿಧಾನಸೌಧದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ನಡೆಸಿದ ಮೊಟ್ಟ ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ವರುಣಾ ಕ್ಷೇತ್ರದ ನೀರಿನ ಸಮಸ್ಯೆ ಕುರಿತು ಪ್ರಸ್ತಾಪವಾದಾಗ ಈ ಸೂಚನೆ ನೀಡಿದರು.
ತಾಲೂಕಿನ ಹೊಸಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ದೂರುಗಳಿರುವ ಬಗ್ಗೆ ಶಾಸಕ ಯತೀಂದ್ರ ಅಧಿಕಾರಿಯನ್ನು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್, ಹೊಸಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಜಾಗದ ಸಮಸ್ಯೆ ಇದೆ. ಗ್ರಾಮದಲ್ಲಿ ನಾವು ಜಾಗ ಗುರುತಿಸಿದ್ದರೂ ಗ್ರಾಮ ಪಂಚಾಯಿತಿಯವರು ಊರಿನಿಂದ ಹೊರ ಭಾಗದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಎನ್ನುತ್ತಾರೆ. ಆದರೆ ಗ್ರಾಮಸ್ಥರು ಗ್ರಾಮದ ಹೊರ ವಲಯದಲ್ಲಿ ಸ್ಥಾಪಿಸಿದರೆ ನೀರು ತರಲು ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಎಂದು ವಾಸ್ತವ ಸ್ಥಿತಿಯನ್ನು ಮುಂದಿಟ್ಟರು.

ಇದೆಲ್ಲವನ್ನೂ ಆಲಿಸಿದ ಶಾಸಕರು, ಗ್ರಾಮ ಪಂಚಾಯಿತಿಯವರನ್ನು ಒಪ್ಪಿಸಿ, ಹೊಸಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅಧಿಕಾರಿಗೆ ತಾಕೀತು ಮಾಡಿದರು. ಕ್ಷೇತ್ರದಲ್ಲಿ ಎಲ್ಲೆಲ್ಲಿ ಹೊಸ ಕೆರೆಗಳ ನಿರ್ಮಾಣ ಹಾಗೂ ಹಳೆ ಕೆರೆಗಳ ದುರಸ್ತಿ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಆದ್ಯತೆ ನೀಡುವಂತೆಯೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ಸೂಚಿಸಿದರು.

ವರುಣಾದಲ್ಲಿ ತಾಲೂಕು ಆಸ್ಪತ್ರೆ ಸ್ಥಾಪನೆಗೆ ಸಲಹೆ: ಮೈಸೂರು ತಾಲೂಕಿನಲ್ಲಿ ಯಾವುದೇ ಪ್ರಮುಖ ಆಸ್ಪತ್ರೆ ಇಲ್ಲ. ಹೀಗಾಗಿ ತಾಲೂಕು ಹಾಗೂ ವರುಣಾ ಕ್ಷೇತ್ರದ ಜನರು ಚಿಕಿತ್ಸೆಗಾಗಿ ಮೈಸೂರಿಗೆ ಓಡಾಡುವಂತಾಗಿದೆ. ಹೋಬಳಿ ಕೇಂದ್ರವಾದ ವರುಣಾದಲ್ಲಿ 100 ಬೆಡ್ ಸಾಮಥ್ರ್ಯದ ತಾಲೂಕು ಆಸ್ಪತ್ರೆ ಹಾಗೂ ತಾಲೂಕಿನಲ್ಲಿ ಅಗತ್ಯವಿರುವ ಕಡೆಗಳಲ್ಲಿ 4-5 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವಂತೆ ಸಂಸದ ಆರ್.ಧ್ರುವನಾರಾಯಣ್, ತಾಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ಗ್ರಾಮೀಣ ಭಾಗದ ಜನರು ಕೃಷಿ ಹಾಗೂ ತಮ್ಮ ಕೆಲಸದಲ್ಲಿಯೇ ಹೆಚ್ಚಾಗಿ ಆಸಕ್ತಿ ವಹಿಸುತ್ತಾರೆ. ಈ ಜಂಜಾಟದ ನಡುವೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರುವುದಿಲ್ಲ. ಇವರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಚಿಕಿತ್ಸೆ ನೀಡಲು ಹಾಗೂ ತಳ ಸಮುದಾಯ ಮತ್ತು ಹಿಂದುಳಿದ ವರ್ಗದವರ ಜನರಿಗೆ ವೈದ್ಯಕೀಯ ಸೌಲಭ್ಯ ನೀಡಲು ಸಮುದಾಯ ಆರೋಗ್ಯ ಕೇಂದ್ರದ ಅಗತ್ಯವೂ ಇದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ, ಸಿದ್ದರಾಮಯ್ಯಹುಂಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರೇ ಇಲ್ಲ. ವೈದ್ಯರನ್ನು ನೇಮಿಸಬೇಕೆಂದು ವರ್ಷದಿಂದ ಹೇಳುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ವೈದ್ಯರ ಶೀಘ್ರ ನೇಮಕವಾಗಬೇಕು. ತಾಲೂಕಿನ ಪ್ರಮುಖ ಆರೋಗ್ಯ ಕೇಂದ್ರದಲ್ಲಿ ಸ್ಕ್ಯಾನಿಂಗ್ ಯಂತ್ರಕ್ಕೆ ಅವಶ್ಯಕತೆಯೂ ಇದೆ ಎಂದು ಶಾಸಕರ ಗಮನಕ್ಕೆ ತಂದರು.

ವರುಣಾ ಕ್ಷೇತ್ರ ವ್ಯಾಪ್ತಿಯ ಗುಡಮಾದನಹಳ್ಳಿಯಲ್ಲಿ ಶಾಲಾ ಕಟ್ಟಡ ದುರವಸ್ಥೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಬಗ್ಗೆ ಸಂಸದ ಆರ್.ಧ್ರುವನಾರಾಯಣ್ ಸಭೆಯಲ್ಲಿ ಪ್ರಸ್ತಾಪಿಸಿ, ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದರು.

 ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮೊಂದಿಗೆ ಸಹಕಾರ ಮನೋಭಾವದಿಂದ ಕೆಲಸ ನಿರ್ವಹಿಸುವ ಮೂಲಕ ಸೌಲಭ್ಯಗಳು ಜನರಿಗೆ ಸಮರ್ಪಕವಾಗಿ ತಲುಪಲು ಸಹಕಾರ ನೀಡಬೇಕು. – ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ.

ರೈತರ ಒಕ್ಕಣೆ ಕಣಗಳ ನಿರ್ಮಾಣಕ್ಕೆ ಸೂಚನೆ: ರೈತರು ರಸ್ತೆಯಲ್ಲೇ ಒಕ್ಕಣೆ ಮಾಡುವುದರಿಂದ ಜನರಿಗೆ, ವಾಹನಗಳಿಗೆ ತೊಂದರೆಯಾಗುತ್ತದೆ. ಇದರಿಂದ ರೈತರಿಗೂ ನಷ್ಟವಾಗುತ್ತಿದೆ. ಹಾಗಾಗಿ ರೈತರ ಅನುಕೂಲಕ್ಕಾಗಿ ಪ್ರತಿ ಪಂಚಾಯಿತಿಗೂ ದೊಡ್ಡ ಒಕ್ಕಣೆ ಕಣಗಳನ್ನು ನಿರ್ಮಿಸಲು ಸೂಚಿಸಿದರು.

ಕೃಷಿಯೊಂದಿಗೆ ರೈತರಿಗೆ ಹೆಚ್ಚು ಲಾಭ ನೀಡುವ ಹಾಗೂ ಕಷ್ಟಕಾಲದಲ್ಲಿ ಕೈ ಹಿಡಿಯುವ ಕೋಳಿ, ಕುರಿ, ಪಶು, ಹಂದಿ ಇತ್ಯಾದಿ ಜಾನುವಾರು ಸಾಕಣೆಗೆ ಒತ್ತು ನೀಡುವಂತೆ ಪಶು ಸಂಗೋಪನಾಧಿಕಾರಿಗೆ ಸಲಹೆ ನೀಡಿದರು.
ಸಭೆಯಲ್ಲಿ ಜಿಪಂ ಸದಸ್ಯೆ ಭಾಗ್ಯಮ್ಮ, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಇಓ ಲಿಂಗರಾಜಯ್ಯ, ತಹಶೀಲ್ದಾರ್ ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.

ಶಾಸಕರ ಮೊದಲ ಸಭೆಯೇ 2 ಗಂಟೆ ವಿಳಂಬ

ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಮೊಟ್ಟ ಮೊದಲ ಪ್ರಗತಿ ಪರಿಶೀಲನಾ ಸಭೆ ಎರಡು ಗಂಟೆಗಳಷ್ಟು ವಿಳಂಬವಾಗಿ ಆರಂಭವಾಯಿತು. ಮಿನಿ ವಿಧಾನಸೌಧದ ತಾಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಸಭೆ ನಿಗದಿಯಾಗಿತ್ತು. ಶಾಸಕರ ಆಗಮನಕ್ಕಾಗಿ ಅಧಿಕಾರಿಗಳು, ಮಾಧ್ಯಮದವರು ಸಾಕಷ್ಟು ಕಾದಿದ್ದರು.

ನಂತರ ಮಧ್ಯಾಹ್ನ 12.15 ಗಂಟೆಗೆ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಡಾ.ಯತೀಂದ್ರ ಮೊದಲಿಗೆ ತಮ್ಮ ಶಾಸಕರ ಕಚೇರಿಯನ್ನು ಉದ್ಘಾಟಿಸಿ ಬಳಿಕ 12.30ರ ವೇಳೆಗೆ ತಾಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಪ್ರಾರಂಭಿಸಿದರು.

ಸಿದ್ದರಾಮಯ್ಯನವರು 2 ಬಾರಿ ಪ್ರತಿನಿಧಿಸಿದ ವರುಣಾ ಕ್ಷೇತ್ರದ ನೂತನ ಶಾಸಕ ಡಾ.ಯತೀಂದ್ರ ಅವರಿಗೆ ಅಧಿಕಾರಿಗಳು ಸಹಕಾರ ನೀಡಿ. ಸರ್ಕಾರದ ಯಾವುದೇ ಕಾರ್ಯಕ್ರಮವನ್ನು ಪ್ರಮಾಣ ಕವಾಗಿ ಜಾರಿ ಮಾಡಿದರೆ ಅದರ ಯಶಸ್ಸು ಶಾಸಕರಿಗೆ ಸಿಗುತ್ತದೆ. ಜೊತೆಗೆ ಜನರ ಕೆಲಸವೂ ಸಮರ್ಪಕವಾಗಿ ಆದಂತಾಗುತ್ತದೆ. ವಸತಿ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಒಂದು ವರ್ಷ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡಿದ ಡಾ.ಯತೀಂದ್ರಗೆ ಅಧಿಕಾರಿಗಳು ಆಡಳಿತಾತ್ಮಕವಾಗಿ ಸಂಪೂರ್ಣ ಸಹಕಾರ ನೀಡಬೇಕು. – ಆರ್.ಧ್ರುವನಾರಾಯಣ್, ಸಂಸದ.

ಮೈಸೂರಿನ ಮಿನಿ ವಿಧಾನಸೌಧದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಚೇರಿ ಆರಂಭ: ಟಿ.ನರಸೀಪುರ, ನಂಜನಗೂಡು ತಾಪಂ ಆವರಣದಲ್ಲೂ ಕಚೇರಿ

ಮೈಸೂರು: ವರುಣಾ ಕ್ಷೇತ್ರದ ಜನರು ಇನ್ನು ಮುಂದೆ ತಮ್ಮ ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರಿನ ಮಿನಿ ವಿಧಾನಸೌಧದ ನೆಲ ಅಂತಸ್ತಿನ 7ನೇ ನಂಬರಿನ ಕೊಠಡಿಯಲ್ಲಿ ಶಾಸಕರ ಕಚೇರಿಯನ್ನು ಆರಂಭಿಸಿದ್ದಾರೆ.

ಬುಧವಾರ ಅವರು ಟೇಪು ಕತ್ತರಿಸುವ ಮೂಲಕ ತಮ್ಮ ಕಚೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸದ ಆರ್.ಧ್ರುವನಾರಾಯಣ್, ಜಿಪಂ ಸದಸ್ಯೆ ಭಾಗ್ಯಮ್ಮ, ತಾಪಂ ಇಒ ಲಿಂಗರಾಜಯ್ಯ ಇನ್ನಿತರರು ಉಪಸ್ಥಿತರಿದ್ದರು.

ನಂಜನಗೂಡು ಮತ್ತು ಟಿ.ನರಸೀಪುರದಲ್ಲೂ ಅಲ್ಲಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶಾಸಕರ ಕಚೇರಿ ತೆರೆಯಲಾಗಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.

Translate »