ಸಂಸದ ಧ್ರುವನಾರಾಯಣ್ ಅಭಿಮಾನಿಗಳಿಂದ ಬೃಹತ್ ರಕ್ತದಾನ, ಉದ್ಯೋಗ ಮೇಳ
ಮೈಸೂರು

ಸಂಸದ ಧ್ರುವನಾರಾಯಣ್ ಅಭಿಮಾನಿಗಳಿಂದ ಬೃಹತ್ ರಕ್ತದಾನ, ಉದ್ಯೋಗ ಮೇಳ

August 1, 2018

ನಂಜನಗೂಡು: ಜನಪರ ಸಮಾಜಮುಖಿ ಕಾರ್ಯಕ್ರಮಗಳಿಂದ ಇಂದಿನ ಯುವ ರಾಜಕಾರಣಿಗಳಿಗೆ ಸಂಸದ ಆರ್.ಧ್ರುವನಾರಾಯಣ್‍ರವರು ಸ್ಫೂರ್ತಿಯಾಗಿದ್ದಾರೆ ಎಂದು ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸಂಸದ ಆರ್.ಧ್ರುವನಾರಾಯಣ್‍ರವರ 58ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ಇಲ್ಲಿನ ಯಾತ್ರಿ ಭವನದಲ್ಲಿ ಏರ್ಪಡಿಸಿದ್ದ ರಕ್ತದಾನ, ಮತ್ತು ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಜ್ಜನ ರಾಜಕಾರಣಿಯಾಗಿರುವ, ಹೋರಾಟದಿಂದ ಮೇಲೆ ಬಂದಿರುವ ಸಂಸದರೆಂದರೆ ಆರ್. ಧ್ರುವನಾರಾಯಣ್ ಎಂದ ಅವರು, ಜಾತಿ, ಹಣದ ಮೋಹಕ್ಕೆ ಒಳಗಾಗದೇ ಜನಪ್ರಿಯ ಸೇವೆಗಾಗಿ ಜನರು ಸಂಸದ ಆರ್.ಧ್ರುವನಾರಾಯಣ್ ಅವರನ್ನು ಇಷ್ಟ ಪಡುತ್ತಾರೆಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಸಂಸದ ಆರ್.ಧ್ರುವನಾರಾಯಣ್ ಅವರು ಮಿನುಗುವ ನಕ್ಷತ್ರದಂತೆ ದೇಶದ ಗಮನ ಸೆಳೆದಿದ್ದಾರೆ. ಕ್ಷೇತ್ರದಲ್ಲಿ ಪ್ರತಿ ಮನೆ ಮನೆಯಲ್ಲಿಯೂ ಕೂಡ ಸಂಸದ ಆರ್. ಧ್ರುವನಾರಾಯಣ್ ಅವರನ್ನು ಬಹಳ ಇಷ್ಟ ಪಡುತ್ತಾರೆ. ಜೊತೆಗೆ ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸುವ ಉತ್ತಮ ಜನನಾಯಕರಾಗಿ ಸಂಸದ ಆರ್. ಧ್ರುವನಾರಾಯಣ್ ಜನರ ಸೇವೆ ಮಾಡುತ್ತಿದ್ದಾರೆ ಎಂದರು.

ಕೆ.ಪಿ.ಸಿ.ಸಿ ಕಾರ್ಯದರ್ಶಿ ಶ್ರೀಕಂಠು, ಎಸ್.ಸಿ. ಬಸವರಾಜು, ಮುಂತಾದವರು ಸಂಸದರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದು ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ತಾಲೂಕುಗಳಲ್ಲೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಾಗಿ ಸಭೆಗೆ ತಿಳಿಸಿದರು. ಜನರಿಗೋಸ್ಕರ, ಜನರಿಗಾಗಿ ಇರುವ ಇಂತಹ ಸಂಸದರಿಗೆ ತಮ್ಮೆಲ್ಲರ ವಿಶ್ವಾಸ ಬೆಂಬಲ ಸದಾ ಕಾಲ ವಿರಬೇಕೆಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ .ಕುರಹಟ್ಟಿ ಮಹೇಶ, ಉಪಧ್ಯಾಕ್ಷ ವಿಜಯಕುಮಾರ್, ಎ.ಪಿ,ಎಂ,ಸಿ ಅಧ್ಯಕ್ಷ ಮಾದಪ್ಪ, ಉಪಾಧ್ಯಕ್ಷ ಸಿದ್ದರಾಜು, ಮಾಜಿ ಜಿ.ಪಂ.ಸದಸ್ಯ ಮಹ ದೇವ್,ದೇವರಸನಹಳ್ಳಿ ಸಿದ್ದಲಿಂಗು, ಹುಳಿಮಾವು ನಟರಾಜ್, ಮಾಜಿ ಜಿಪಂ ಸದಸ್ಯ ಕೆ.ಮಾರುತಿ, ಮಾಜಿ ತಾಪಂ ಅಧ್ಯಕ್ಷ ತಮ್ಮಣ್ಣೇಗೌಡ, ನಗರಸಭಾ ಅಧ್ಯಕ್ಷರಾದ ಪುಷ್ಪಲತಾ, ಉಪಾಧ್ಯಕ್ಷ ಪ್ರದೀಪ್, ಮಾಜಿ ವಾಲೀಕ್ಮಿ ನಿಗಮದ ಮಾಜಿ ಅಧ್ಯಕ್ಷರಾದ ಎಸ್.ಸಿ.ಬಸವರಾಜು, ಜಿಲ್ಲಾ ಕಾಂಗ್ರೆಸ್ ಮುಖಂಡ ಗುರುಪಾದಸ್ವಾಮಿ, ಜಿಲ್ಲಾ ಪಂಚಾ ಯಿತಿ ಸದಸ್ಯರಾದ ಲತಾ ಸಿದ್ದಶೆಟ್ಟಿ, ಪುಷ್ಪಾ ನಗರ ಸಭಾ ಸದಸ್ಯರಾದ ಸಿ.ಎಂ.ಶಂಕರ್, ಮುಖಂಡರಾದ ಎನ್.ಇಂದ್ರ, ಅಕ್ಬರ್, ಅಬ್ಬುಲ್‍ಖಾದರ್, ಗಂಗಾಧರ್, ತಗಡೂರು ಬ್ಲಾಕ್ ಅಧ್ಯಕ್ಷ ರಂಗಸ್ವಾಮಿ, ಶ್ರೀರಾಂಪುರ ಮಹದೇವು, ಅನ್ಸರ್ ಅಹಮ್ಮದ್ ಇನ್ನೂ ಅನೇಕ ಮುಖಂಡರು ಹಾಜರಿದ್ದರು.

ರಕ್ತದಾನ ಶಿಬಿರದ ವ್ಯವಸ್ಥೆಯನ್ನು ತಾಲೂಕು ಆರೋಗ್ಯಾಧಿಕಾರಿ ಕಲಾವತಿ ವಹಿಸಿದ್ದರು. ತಾಲೂಕಿನ ಸಾವಿರಾರು ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು. ಈ ಮೇಳದಲ್ಲಿ 50ಕ್ಕೂ ಹೆಚ್ಚು ಕಾರ್ಖಾನೆಯ ಪ್ರಮುಖರು ಇದ್ದರು.

Translate »