ಕಾಯಕಯೋಗಿ 102 ಕಾಫಿ ಟೇಬಲ್ ಪುಸ್ತಕ ಬಿಡುಗಡೆ
ಮೈಸೂರು

ಕಾಯಕಯೋಗಿ 102 ಕಾಫಿ ಟೇಬಲ್ ಪುಸ್ತಕ ಬಿಡುಗಡೆ

May 31, 2018

ಮೈಸೂರು: ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಕಾಯಕಯೋಗಿ 102 ಕಾಫಿ ಟೇಬಲ್ ಪುಸ್ತಕವನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.

ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಮತ್ತು ವಿಆರ್‍ಎಲ್ ಮೀಡಿಯಾ ಲಿಮಿಟೆಡ್ ಸಹಯೋಗದಲ್ಲಿ ಹೊರತಂದಿರುವ ಕಾಯಕಯೋಗಿ 102 ಕಾಫಿ ಟೇಬಲ್ ಪುಸ್ತಕವನ್ನು ವಿಆರ್‍ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ವಿಜಯ ಸಂಕೇಶ್ವರ ಬಿಡುಗಡೆಗೊಳಿಸಿದರು.

ನಂತರ ಅವರು ಮಾತನಾಡಿ, ವೀರಶೈವ ಮಠಾಧೀಶರ ವಿದ್ಯಾ ಸಂಸ್ಥೆಗಳಿಗಿಂತ ಸುತ್ತೂರು ಶ್ರೀಗಳು ಮತ್ತು ಸಿದ್ದಗಂಗಾ ಶ್ರೀಗಳು ನಡೆಸುತ್ತಿರುವ ವಿದ್ಯಾ ಸಂಸ್ಥೆಗಳು ಹೆಚ್ಚು ಮುಂಚೂಣ ಯಲ್ಲಿವೆ. ಆದರೆ, ಕೆಲವು ವೀರಶೈವ ಮಠಾಧೀಶರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಜೋಳಿಗೆ ಹಾಕಿಕೊಂಡು ಊರೂರು ಸುತ್ತಿ, ಭಿಕ್ಷೆ ಬೇಡಿ ಮಕ್ಕಳಿಗೆ ವಿದ್ಯೆ ನೀಡುತ್ತಿದ್ದಾರೆ. ಈ ಸಂಸ್ಥೆಗಳಲ್ಲಿ ಎಲ್ಲಾ ಜಾತಿ, ಧರ್ಮದ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ಶಿಕ್ಷಣ ನೀಡುತ್ತಿದ್ದಾರೆ. ಇದು ವೀರಶೈವ ಪರಂಪರೆಯ ಒಂದು ಉದಾಹರಣೆ. ಇಂದಿಗೂ ಕೂಡ ಸಾವಿರಾರು ವೀರಶೈವ ಮಠಾಧೀಶರು ಸಮಾಜದ ಒಳಿತು ಮತ್ತು ವಿದ್ಯಾರ್ಜನೆಗಾಗಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇಂದು ವೀರಶೈವ-ಲಿಂಗಾಯಿತ ಬೇರೆ ಬೇರೆ ಎನ್ನುವ ಅಪಸ್ವರಗಳು ಕೇಳಿ ಬರುತ್ತಿದ್ದು, ನಾವು ಜಾತಿ-ಧರ್ಮವನ್ನು ಒಡೆಯದೆ ಒಗ್ಗಟ್ಟಿನಿಂದ ಸಮಾಜದಲ್ಲಿ ಅಭೂತಪೂರ್ವವಾದ ಬದಲಾವಣೆ ತರಲು ಪ್ರತಿಯೊಬ್ಬ ವೀರಶೈವರು ಕಂಕಣಬದ್ದರಾಗಬೇಕು. ಇತ್ತೀಚಿನ ದಿನಗಳಲ್ಲಿ ಬಸವಣ್ಣರವರ ನಂತರ ವೀರಶೈವರು ಹೆಚ್ಚು ಪ್ರಚಲಿತರಾಗಿದ್ದೇವೆ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಆದರೆ, ಸುತ್ತೂರು ಮಠ ಬಸವಣ್ಣ ಅವರಿಗಿಂತ ಮೊದಲಿನಿಂದ ಆದಿಯಾಗಿ ವೀರಶೈವ ಮಠವಾಗಿ ಬೆಳೆದು ಬಂದಿದೆ ಎಂದು ತಿಳಿಸಿದರು.

ಸುತ್ತೂರು ಮಠಕ್ಕೆ 1056 ವರ್ಷಗಳ ಹಿನ್ನೆಲೆಯಿದೆ. ಕಲ್ಯಾಣಕ್ರಾಂತಿಯಾದಾಗ ಕೆಲವರು ಅಲ್ಲಿಂದ ಹೊರ ಹೋದಾಗ ಬಸವಣ್ಣನವರ ಹಿಂಬಾಲಕರು ಸುತ್ತೂರು ಮಠದಲ್ಲಿ ಆಶ್ರಯ ಪಡೆದಿದ್ದರು. ಅಂತಹ ಪುಣ್ಯ ಕ್ಷೇತ್ರವಿದು. ಪ್ರಸಾದ-ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿದೆ. ಜತೆಗೆ ದುಬೈ, ಮಾರೀಷಸ್‍ನಲ್ಲಿ ಶಾಲೆಗಳನ್ನು ಆರಂಭಿಸಿ, ವಿದ್ಯೆಯ ಜತೆಗೆ ಭಾರತೀಯ ಸಂಸ್ಕøತಿ, ಪರಂಪರೆಯನ್ನು ಪರಿಚಯಿಸುತ್ತಿದ್ದಾರೆ ಎಂದು ಮೆಚ್ಚಗೆ ವ್ಯಕ್ತಪಡಿಸಿದ ಅವರು, ಇಂದು ಅನೇಕ ಮಾಧ್ಯಮಗಳು ವಿದೇಶಿ ಕೈಯ್ಯಲ್ಲಿ ಮತ್ತು ಭಾರತೀಯ ಪರಂಪರೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ದಿವ್ಯಸಾನಿಧ್ಯ ವಹಿಸಿದ್ದರು. ವಿಜಯ ಸಂಕೇಶ್ವರ್ ಅವರ ಪತ್ನಿ ಲಲಿತಾ ವಿಜಯಸಂಕೇಶ್ವರ್ ಉಪಸ್ಥಿತರಿದ್ದರು.

Translate »