ಮೈಸೂರು: ಕನ್ನಡದ ದುರ್ದೈವವೆಂದರೆ ನಮ್ಮಲ್ಲಿ ಮೀರ್‍ಸಾದಕರೇ ಹೆಚ್ಚಾಗಿದ್ದಾರೆ. ಕನ್ನಡಿಗರಿಗೆ ಕನ್ನಡಿಗರೇ ಶತ್ರುಗಳಾಗಿದ್ದಾರೆ. ಹೀಗೆಂದವರು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ಮೈಸೂರಿನ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂ ಗಣದಲ್ಲಿ ಭಾರತ ಕನ್ನಡ ಪರಿಷತ್ತು ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ದಸರಾ ಕವಿಗೋಷ್ಠಿಗೆ ಚಾಲನೆ ನೀಡಿ, ಎಂ. ಮುತ್ತುಸ್ವಾಮಿ ಅವರ `ಹಳ್ಳಿ ಹಾಡಿನ ಸೊಗಡು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕನ್ನಡಿಗರು ದುರ್ಬಲರಾಗಿದ್ದೇವೆ. ಕನ್ನಡ ಇಂದು ದುರವಸ್ಥೆ ಜೊತೆಗೆ ದೂರಾವಸ್ಥೆಯಲ್ಲಿದೆ. ಕನ್ನಡಿಗರಿಗೇ ಕನ್ನಡ ದೂರವಾಗಿದೆ. ಇಂಗ್ಲಿಷ್ ಹತ್ತಿರವಾಗುತ್ತಿದೆ. ಇಂಗ್ಲಿಷ್ ಕಲಿಯಬಾರದು ಎಂದೇನಿಲ್ಲ. ಆದರೆ ಕನ್ನಡವನ್ನು ಪ್ರೀತಿಸಬೇಕು. ಆ ಮೂಲಕ ಕನ್ನಡವನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕಿದೆ ಎಂದು ಅಭಿಪ್ರಾಯಪಟ್ಟರು.
63ನೇ ಕನ್ನಡ ರಾಜ್ಯೋತ್ಸವದ ಸನಿಹದಲ್ಲಿರುವ ನಾವು ರಾಜ್ಯೋತ್ಸವದ ಜೊತೆಗೆ ವ್ಯಾಜ್ಯೋತ್ಸವಗಳು ಸೇರಿಕೊಂಡಿವೆ. ಉತ್ತರ ಕರ್ನಾಟಕದ ಪ್ರತ್ಯೇಕತೆಯ ಕೂಗು ಮತ್ತೇ ಮತ್ತೆ ಕೇಳಿ ಬರುತ್ತಿದೆ. ಈ ಗುಮ್ಮದಿಂದ ನಮ್ಮ ಕನ್ನಡಮ್ಮನನ್ನು ಕಾಪಾಡಬೇಕಿದೆ. ಇದಕ್ಕಾಗಿ ಎಲ್ಲಾ ವಯಸ್ಸಿನ ಕನ್ನಡ ಮನಸ್ಸುಗಳು ಒಗ್ಗೂಡಬೇಕಿದೆ ಎಂದು ಕಿವಿಮಾತು ಹೇಳಿದರು.
ವಾಹನ ನೋಂದಣಿ ಮಾಡಿಸುವಾಗ ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಯಲ್ಲೂ ಸಂಖ್ಯೆ ಹಾಕಿದ್ದ ಹಲವರಿಗೆ ಕನ್ನಡದ ಅಧಿಕಾರಿಗಳೇ ತೊಂದರೆ ಕೊಟ್ಟಿದ್ದಾರೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಅವರು, ಕನ್ನಡಕೆ ಹೋರಾಡು ಕನ್ನಡದ ಕಂದ ಎಂದು ಕುವೆಂಪು ಅವರ ಪದ್ಯವನ್ನು ಪ್ರಸ್ತಾಪಿಸಿ, ಕನ್ನಡಕ್ಕಾಗಿ ಕನ್ನಡಿಗರೇ ಹೋರಾಡಬೇಕಾದ ಅನಿವಾರ್ಯತೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಇಂಗ್ಲಿಷ್ ಅಪಾಯಕ್ಕಿಂತ ಆತಂಕಕಾರಿ. ಕನ್ನಡಕ್ಕೆ ತೊಂದರೆ ಇರುವುದು ತಮಿಳರು, ಮರಾಠಿಗರಿಂದ ಅಲ್ಲ. ಕನ್ನಡಿಗರಿಂದಲೇ ಕನ್ನಡ ನಾಡು, ನುಡಿ ಅಭಿವೃದ್ಧಿಗೆ ತೊಡಕಾ ಗಿದೆ. ಬೇರೆ ಭಾಷೆಗಳು ಪೂರಕವಾಗಿರಬೇಕು. ಆದರೆ ದ್ವೇಷಿಸು ವುದು ಬೇಡ. ನಾವು ಕನ್ನಡವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಕನ್ನಡ ಧರ್ಮವೂ ಹೌದು. ಇಂಗ್ಲಿಷ್ ಎಂಬುದು ಪರ ಧರ್ಮ. ಅವುಗಳಿಂದ ಕನ್ನಡದಷ್ಟು ಪ್ರಯೋಜನವಿಲ್ಲ ಎಂದು ಆಭಿಪ್ರಾಯಪಟ್ಟರು.
ಭಾಷಾಂತರದ ಮೂಲಕವೂ ಕನ್ನಡ ಬೆಳೆಸಬಹುದು: ಕನ್ನಡ ಭಾಷೆ, ಸಾಹಿತ್ಯ ಬೆಳೆಯಬೇಕು. ಭಾಷಾಂತರ ಬಹಳ ಮುಖ್ಯವಾದ ಕೆಲಸ. ಬೇರೆ ಭಾಷೆಗಳ ಕೃತಿಗಳು ಕನ್ನಡಕ್ಕೆ ಬರಬೇಕು. ಭಾಷಾಂತರದ ಕಡೆಗೂ ಮನಸ್ಸು ಮಾಡಬೇಕು. ಭಾಷಾಂತರ ಮೂಲಕವೂ ನಾವು ಕನ್ನಡ ಭಾಷೆ ಬೆಳೆಸಬಹುದು. ಪುಸ್ತಕ ಸಂಸ್ಕøತಿಗೆ ಹೆಚ್ಚು ಮಾನ್ಯತೆ ಕೊಡಬೇಕು. ಪುಸ್ತಕಗಳನ್ನು ಮುಟ್ಟಬೇಕು, ಮೇಯಬೇಕು, ಮೆಲುಕು ಹಾಕಬೇಕು, ಜೊತೆಗೆ ಜೀರ್ಣಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ನೀ.ಗಿರಿಗೌಡ, ಕರಾಮುವಿ ಡೀನ್ ಪ್ರೊ.ಜಗದೀಶ್, ರಂಗಭೂಮಿ ಕಲಾವಿದ ಸಿ.ನಾಗರಾಜ್ ಅªರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತ ಕನ್ನಡ ಪರಿಷತ್ತಿನ ರಾಜ್ಯಾಧ್ಯಕ್ಷ ರಾಘವೇಂದ್ರ ಕುಮಾರ್, ಕವಯಿತ್ರಿ ಎ.ಹೇಮಗಂಗಾ, ಪ್ರೊ.ಕೆ.ಭೈರವಮೂರ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿವೃತ್ತ ನಿರ್ದೇಶಕ ಮ.ಗು.ಸದಾ ನಂದಯ್ಯ, ಪರಿಷತ್‍ನ ರಾಜ್ಯ ಗೌರವಾಧ್ಯಕ್ಷರಾದ ಕೆ.ಜೆ.ಚಂಪಾಪತಿ ಶಿವಣ್ಣ, ರಾಜ್ಯ ಉಪಾಧ್ಯಕ್ಷೆ ಎಸ್.ನಾಗರತ್ನ ಇನ್ನಿತರರು ಉಪಸ್ಥಿತರಿದ್ದರು.