ಲೇಖಕ ಎಂಎಸ್‍ಕೆ ಪ್ರಭು ವಿರಚಿತ ಕೃತಿಗಳ ಬಿಡುಗಡೆ
ಮೈಸೂರು

ಲೇಖಕ ಎಂಎಸ್‍ಕೆ ಪ್ರಭು ವಿರಚಿತ ಕೃತಿಗಳ ಬಿಡುಗಡೆ

July 17, 2018

ಮೈಸೂರು: ಬೆಂಗಳೂರಿನ ಸಾಹಿತ್ಯ ಭಂಡಾರ ಪ್ರಕಾಶನ ಹೊರತಂದಿರುವ ಲೇಖಕ ಎಂ.ಎಸ್.ಕೆ. ಪ್ರಭು ರಚಿತ `ಸಮಗ್ರ ಕಥೆಗಳು’ ಮತ್ತು `ವಿರೋಧ ವಿಲಾಸ’ ಕೃತಿಗಳನ್ನು ಹಿರಿಯ ರಂಗಕರ್ಮಿ ಎಚ್.ಎಸ್.ಉಮೇಶ್ ಸೋಮವಾರ ಬಿಡುಗಡೆಗೊಳಿಸಿದರು.

ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನಭಾರತಿ (ವೀಣೆ ಶೇಷಣ್ಣ) ಸಭಾಂಗಣದಲ್ಲಿ `ಎಂ.ಎಸ್.ಕೆ.ಪ್ರಭು ಅವರ 80ನೇ ಜನ್ಮ ದಿನದ ಸ್ಮರಣಾರ್ಥ’ ಅವರ ಅಭಿಮಾನಿ ಬಳಗದ ವತಿಯಿಂದ ನಡೆದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಗೊಳಿಸಿ,ನಂತರ ಮಾತನಾಡಿದ ಅವರು, ಲೇಖಕ ಎಂ.ಎಸ್.ಕೆ.ಪ್ರಭು ಅವರು, ರಾಜಕೀಯದಿಂದ ದೂರವಿದ್ದ ಬರಹಗಾರ.

ಅಂತೆಯೇ ಅವರ ಬರವಣಿಗೆಗಳೂ ರಾಜಕೀಯದಿಂದ ದೂರವಿದೆ. ಅವರು ಎಂದಿಗೂ ತಮ್ಮ ಬರಹಗಳಲ್ಲಿ ರಾಜಕಾರಣವನ್ನು ಕಥವಸ್ತುವಾಗಿ ಬಳಸಿಕೊಂಡಿಲ್ಲ. ಬದಲಾಗಿ, ಸಮಾಜದ ಸಮಸ್ಯೆಗಳು, ಪ್ರಕೃತಿ ಪರ ಬರಹಗಳು ಹಾಗೂ ತಾಯ್ತನ ಬಿಂಬಿಸುವ ಕಥಾವಸ್ತುಗಳು ಅವರ ಬರಹದಲ್ಲಿತ್ತು ಎಂದು ತಿಳಿಸಿದರು.

1980ರ ದಶಕದಲ್ಲಿ ಎಂಎಸ್‍ಕೆ ಪ್ರಭು ಅವರು ಮೈಸೂರು ಹವ್ಯಾಸ ರಂಗಭೂಮಿಯಲ್ಲಿ ಅಷ್ಟಾಗಿ ಪರಿಚಿತರಾಗಿರಲಿಲ್ಲ. ಮುಂದೆ ಸಣ್ಣ ಕಥೆಗಳ ಮೂಲಕ ಹವ್ಯಾಸ ರಂಗಭೂಮಿ ಕಲಾವಿದರ ಆಕರ್ಷಿತ ಲೇಖಕರಾಗಿ ಹೊರಹೊಮ್ಮಿದ್ದು ಇತಿಹಾಸ. ಇವರ ನಂತರ ಬಂಧ ಬರಹಗಾರರು, ಸಣ್ಣ ಕಥೆಗಳ ಬಗ್ಗೆ ಅಷ್ಟಾಗಿ ಒಲವು ವ್ಯಕ್ತಪಡಿಸಲಿಲ್ಲ. ಇದರಿಂದಾಗಿ ಸಣ್ಣ ಕಥೆಗಾರರು ಇತ್ತೀಚಿನ ದಿನಗಳಲ್ಲಿ ವಿರಳರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

`ವಿರೋಧ ವಿಲಾಸ’ ಪುಸ್ತಕದಲ್ಲಿ ಪುರುಷರ ಹಕ್ಕುಗಳು, ಮನೆವಾರ್ತೆ ಸಲಹೆಗಳು, ಚೀಲಿ ಮತ್ತು ಇಲಿ, ವಿದ್ಯಾರ್ಥಿಗಳು ಮೇಷ್ಟರನ್ನು ಹೊಡೆಯಬಹುದೇ?, ಮುಳ್ಳು, `ಮುಖಾಮುಖಿ’, ಹನಿ ಹನಿಗೂಡಿದರೆ, ನೀನಾರಿಗಾದೆಯೋ ಎಲೆ ಮಾನವ, ಗೋಡೆ ಮೇಲಿನ ಬರಹ, ಉದ್ಯೋಗಾರಣ್ಯಕ-ವಾರಕ್ಕೆ ಏಳು ದಿನ?, ಉದ್ಯೋಗಾರಣ್ಯಕ-ಮುಕ್ತಿ ರಹಸ್ಯ ವಿಚಾರ, ಉದ್ಯೋಗಾರಣ್ಯಕ, ಚಿಂತಿಸಿ ದೈವವ ಪಡೆದುದುಂಟೆ, ಹಾಸ್ಯದ ಥರ್ಮೋಡೈನಾಮಿಕ್ಸ್, ವಿರೋಧ ವಿಲಾಸ, ಆರ್ಥಿಕ ಚಿಂತೆ- ಒಂದು ದಾರಿ ದ್ರೋಪಖ್ಯಾನ, ನರಖಾದ್ಯ ವಿಶೇಷ, ನಾನೇಕೆ ಬಡವನೋ, ಹೊಟ್ಟೆ ಪಾಡು-ಆಡಿ ಟಿಪ್ಪಣಿಗಳೊಂದಿಗೆ ಒಂದು ಅಸಂಶೋಧನಾ ಪ್ರಬಂಧ, ಆರ್ಥಿಕ ಚಿಂತೆ-ಒಂದು ಒಳ ನೋಟ ಹಾಗೂ ಕೊರವಂಜಿ ಬರಹಗಳಾದ ತಾಪತ್ರಯ, ಸೌಂದರ್ಯ ರಾಯಭಾರ, ಅಭ್ಯಾಸ/ಅಪರಾಹ್ನದ ನಿದ್ದೆ, ಪಂಚಾಜ್ಞೆ, ಸಾಧು ಸಮ್ಮಿತಿ, ಧ್ವನಿವರ್ಧಕ ಪ್ರಾರ್ಥನೆ/ ಜ್ಯೋತಿಷಿಯ ಶುಕ್ರದೆಶೆ, ಒಂದು ಮಹಾಚುನಾವಣೆಯ ಮೇಲೆ, ಒಂದು ಹೊಸ ಒಸೆಗೆ ಒಟ್ಟು 30 ಕಥೆಗಳಿವೆ.

ಎಂ.ಎಸ್.ಸೋಮಶೇಖರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಡಿ.ಎ.ಶಂಕರ್, ಹಿರಿಯ ಪತ್ರಕರ್ತ ಈಚನೂರು ಕುಮಾರ್, ಸಂಸ್ಕೃತಿ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮ ನಂತರ ಎಂಎಸ್‍ಕೆ ಪ್ರಭು ರಚಿತ `ಒಳ್ಳೆಯ ಸಮಯ ನಾಟಕವನ್ನು ಅಪ್ರವರಂಬೆ ಕಲಾತಂಡದವರು ಅಮೋಘವಾಗಿ ಅಭಿನಯಿಸಿದರು. ಯು.ಎಸ್.ರಾಮಣ್ಣ ನಾಟಕ ನಿರ್ದೇಶಿಸಿದ್ದಾರೆ.

ಬೆಂಗಳೂರಿನ ಸಾಹಿತ್ಯ ಭಂಡಾರ ಪ್ರಕಾಶನ ಹೊರತಂದಿರುವ ಲೇಖಕ ಎಂ.ಎಸ್.ಕೆ. ಪ್ರಭು ರಚಿತ `ಸಮಗ್ರ ಕಥೆಗಳು’ ಮತ್ತು `ವಿರೋಧ ವಿಲಾಸ’ ಕೃತಿಗಳನ್ನು ಹಿರಿಯ ರಂಗಕರ್ಮಿ ಎಚ್.ಎಸ್.ಉಮೇಶ್ ಸೋಮವಾರ ಬಿಡುಗಡೆಗೊಳಿಸಿದರು.

Translate »