ರೇಷ್ಮೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಮಂಡ್ಯ

ರೇಷ್ಮೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

July 17, 2018

ಮಂಡ್ಯ:  ರೇಷ್ಮೆ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ವಿದೇಶಿ ರೇಷ್ಮೆ ಆಮದು ಸ್ಥಗಿತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ನಗರ ದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.

ಸೋಮವಾರ ಬೆಳಿಗ್ಗೆ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಬಳಿಕ ಬೆಂಗಳೂರು -ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿ ಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕೆಲಕಾಲ ಧರಣಿ ನಡೆಸಿದ ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ರೇಷ್ಮೆ ಗೂಡಿಗೆ ಕನಿಷ್ಠ 500 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು. ಬೆಲೆ ಕುಸಿತದಿಂದ ಕಂಗಲಾಗಿರುವ ಎಲ್ಲಾ ರೇಷ್ಮೆ ಬೆಳೆಗಾರರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಹರಾಜಾಗುವ ಪ್ರತಿ ರೇಷ್ಮೆಗೂಡಿಗೆ ಕೆಜಿಗೆ 500 ರೂ.ಗೆ ಹೊಂದಾಣಿಕೆ ಆಗುವಂತೆ ಪ್ರೋತ್ಸಾಹ ಧನ ನೀಡಬೇಕು. ಖಾಸಗಿ ಚಾಕಿ ಸಾಕಾಣಿಕೆ ರೇಷ್ಮೆ ಹುಳು ದರ ನಿಯಂತ್ರಿ ಸಲು ಸರ್ಕಾರ ಕ್ರಮ ಜರುಗಿಸಬೇಕು. ರೇಷ್ಮೆ ಬೆಳೆಗಾರರಿಗೆ ನೆರವು, ಸಹಾಯಧನ ಸಿಗು ವಂತೆ ರೇಷ್ಮೆ ಇಲಾಖೆಯನ್ನು ಬಲಪಡಿಸ ಬೇಕು. ರೇಷ್ಮೆ ಗೂಡನ್ನು ಕೆಎಸ್‍ಎಂಬಿ ಹಾಗೂ ಕೆಎಸ್‍ಐಎಲ್ ಮೂಲಕ ಖರೀದಿ ಸಬೇಕು ಹಾಗೂ ಅಗತ್ಯ ಹಣಕಾಸು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಕಳೆದ 3 ತಿಂಗಳ ಹಿಂದೆ ರೇಷ್ಮೆಗೂಡಿಗೆ ಪ್ರತಿ ಕೆಜಿಗೆ ರೂ. 450 ರಿಂದ 530 ಇದ್ದದ್ದು, ಈಗ ರೂ.180 ರಿಂದ 230ಕ್ಕೆ ಕುಸಿದಿದೆ.

ಪರಿಣಾಮ ರೈತರು ಸಂಕಷ್ಠಕ್ಕೆ ಸಿಲುಕಿ ಅಪಾರ ನಷ್ಟ ಅನುಭವಿಸಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಕ್ರಮ ಕೈಗೊಂಡು ರೇಷ್ಮೆ ಬೆಳೆಗಾರರ ಹಿತ ಕಾಪಾಡಬೇಕೆಂದು ಅವರು ಆಗ್ರಹಿಸಿದರು.

ಡಿಸಿ ಭರವಸೆ: ಪ್ರತಿಭಟನಾಕಾರರ ಬಳಿ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿ ಕಾರಿ ಎನ್.ಮಂಜುಶ್ರೀ, ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಪ್ರತಿಭಟನೆ ಕೈ ಬಿಡುವಂತೆ ಪ್ರತಿಭಟನಾಕಾರರ ಮನವೊಲಿಸಿದರು. ಜಿಲ್ಲಾಧಿಕಾರಿಗಳ ಮನವಿಗೆ ಸ್ಪಂದಿಸಿದ ರೈತರು ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನರಪರ ವೇದಿಕೆ ರಾಜ್ಯಾಧ್ಯಕ್ಷ ರಾಮೇಗೌಡ, ಯೋಗೇಶ್, ಹೆಮ್ಮಿಗೆ ಚಂದ್ರಶೇಖರ್, ಸುರೇಶ್, ಬೊಮ್ಮೇ ಗೌಡ, ಲತಾಶಂಕರ್ ಕೃಷ್ಣೇಗೌಡ, ಚೆನ್ನಪ್ಪ, ಬೆಟ್ಟೇಗೌಡ, ಜವರೇಗೌಡ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಸಿಎಂ ಸ್ಪಂದನೆ: ರೈತರ ಆತ್ಮಹತ್ಯೆ ಯತ್ನ ಮತ್ತು ಪ್ರತಿಭಟನೆ ಕುರಿತಂತೆ ದೂರವಾಣಿ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರೇಷ್ಮೆ ಬೆಳೆಗಾರರ ಬೇಡಿಕೆ ಈಡೇರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ದ್ದಾರೆ ಎಂದು ಜಿಲ್ಲಾಧಿಕಾರಿ ಮಂಜುಶ್ರೀ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮದ್ದೂರು: ರೇಷ್ಮೆಗೂಡಿಗೆ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಶಿವ ಪುರದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಯಿತು.

ಹೆದ್ದಾರಿಯಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು, ರೇಷ್ಮೆಗೆ ಬೆಂಬಲ ಬೆಲೆ ನೀಡದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಳ ವಿರುದ್ಧ ಘೋಷಣೆಕೂಗಿ ಆಕ್ರೋಶ ವ್ಯಕ್ತಪಡಿಸಿ, ಹೆದ್ದಾರಿ ಸಂಚಾರ ತಡೆದರು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತ ಗೊಂಡಿತ್ತು.

ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ರೇಷ್ಮೆ ಬೆಲೆ ಪಾತಾಳಕ್ಕೆ ಕುಸಿದಿರುವುದರಿಂದ ರೈತರು ಆತಂಕಕ್ಕೆ ಒಳಾಗಿದ್ದಾರೆ. ಈ ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಧ್ಯ ಪ್ರವೇಶ ಮಾಡಿ ಬೆಂಬಲ ಬೆಲೆ ಘೋಷಣೆ ಮಾಡ ಬೇಕು. ಖಾಸಗಿ ಚಾಕಿ ಸಾಕಾಣಿಗೆ ದಾರರನ್ನು ನಿಯಂತ್ರಿಸಲು ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರವೇ ಚಾಕಿ ಕೇಂದ್ರ ಸ್ಥಾಪಿಸುವ ಮೂಲಕ ಚಾಕಿ ಮರಿ ಗಳನ್ನು ವಿತರಿಸುವ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರೇಷ್ಮೆ ಬೆಳೆಗಾರರ ಒಕ್ಕೂಟದ ರಾಂಪುರ ಸ್ವಾಮಿ, ರೈತ ಸಂಘದ ತಾಲೂಕು ಅಧ್ಯಕ್ಷ ಜಿ.ಎ.ಶಂಕರ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮುಖಂಡ ರಾದ ರಾಮಕೃಷ್ಣಯ್ಯ, ಗೊಲ್ಲರದೊಡ್ಡಿ ಅಶೋಕ್, ವರದರಾಜು, ಮಹೇಂದ್ರ, ಶಿವಲಿಂಗಯ್ಯ, ಸತೀಶ್ ಸೇರಿದಂತೆ ಇನ್ನಿತರರಿದ್ದರು.

Translate »