ನಾಗಮಂಗಲ: ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡರಿಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಗಲಾಟೆ ಮಾಡುತ್ತಿದ್ದ ಬೆಂಬಲಿಗರ ವಿರುದ್ಧ ಅಸಮಾಧಾನಗೊಂಡು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶದಿಂದ ಮೈಕ್ ಎಸೆದ ಘಟನೆ ನಾಗ ಮಂಗಲದಲ್ಲಿ ಭಾನುವಾರ ನಡೆಯಿತು.
ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸದ ಎನ್.ಚಲುವ ರಾಯಸ್ವಾಮಿ ನಾಗಮಂಗಲದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಕರೆದಿ ದ್ದರು. ಸಭೆಗೆ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರು ಕೂಡ ಆಗಮಿಸಿದ್ದರು.
ಸಭೆಯಲ್ಲಿ ವರಿಷ್ಠರ ಮಾತಿನಂತೆ ಜೆಡಿಎಸ್‍ಗೆ ಸಹಕಾರ ನೀಡಿ ಎನ್ನುತ್ತಿದ್ದಂತೆ ಜೋರು ಧ್ವನಿಯಲ್ಲಿ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ ಎಂಬುದನ್ನು ಮರೆತು ಕ್ಷೇತ್ರದ ಶಾಸಕ ಸುರೇಶ್‍ಗೌಡರು ಕಾಂಗ್ರೆಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೈತ್ರಿ ಅಭ್ಯರ್ಥಿಗೆ ನಮ್ಮ ಬೆಂಬಲವೇಕೆ ಎಂದು ಅಸಮಾಧಾನ ಹೊರಹಾಕಿದರು.
ಈ ವೇಳೆ ಸುಮ್ಮನಿರಿ ಎಂದು ಎಷ್ಟೇ ಹೇಳಿದರೂ ಬೆಂಬಲಿಗರು ತಮ್ಮ ಮಾತು ಕೇಳದಿದ್ದಾಗ ಶಾಸಕ ಚಲುವರಾಯಸ್ವಾಮಿ ಸಿಟ್ಟಿನಿಂದ ಮೈಕ್ ಕೆಳಕ್ಕೆ ಎಸೆದು ಅಸಮಾಧಾನ ಹೊರಹಾಕಿದರು. ಸ್ವಲ್ಪ ಸಮಯದ ಬಳಿಕ ಸ್ವತಃ ತಾಳ್ಮೆ ತೆಗೆದುಕೊಂಡ ಚಲುವರಾಯಸ್ವಾಮಿ ಕಾರ್ಯಕರ್ತರನ್ನು ಸಮಾಧಾನ ಮಾಡಿದರು. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಹಾಗೂ ರಾಷ್ಟ್ರ ಮತ್ತು ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ವರಿಷ್ಠರು ಮೈತ್ರಿ ಮಾಡಿದ್ದಾರೆ. ಪಕ್ಷದ ರಾಷ್ಟ್ರ ನಾಯಕರ ಆದೇಶವನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದರು.
ಜೆಡಿಎಸ್‍ನಿಂದ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಆಗುತ್ತಿರುವ ತೊಂದರೆ ಬಗ್ಗೆ ನನಗೂ ಅರಿವಿದೆ. ನಮ್ಮ ವಿಷಯದಲ್ಲಿ ಜೆಡಿಎಸ್ ನಡೆದುಕೊಳ್ಳುತ್ತಿರುವುದು ರಾಜ್ಯದ ಅಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಹಾಗಾಗಿ, ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ. ಹಳೆಯ ಮೈಸೂರಿನವರಿಗೆ ಸಮನ್ವಯ ಸಮಿತಿ ಕರೆದು ಮಾತನಾಡುತ್ತೇನೆ. ಅದು ಆದ ನಂತರವೂ ಮುಂದುವರಿದರೆ ಕಡೆಗಣಿಸಲು ಸಾಧ್ಯವಿಲ್ಲ. ನಾಗಮಂಗಲ ದಿಂದ ಆರಂಭಿಸಿ ಏಳು ತಾಲೂಕುಗಳಲ್ಲಿ ಸಭೆ ನಡೆಸಲಾಗುವುದು. ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ಚುನಾವಣೆಯ ಬಳಿಕ ಜೆಡಿಎಸ್‍ನಲ್ಲಿ ಬದಲಾವಣೆ ಆಗದಿದ್ದರೆ ಮುಂದಿನ ಚುನಾವಣೆ ಬಹಳ ದೂರವಿಲ್ಲ. ಆಗ ನಿರ್ಧಾರ ತೆಗೆದುಕೊಳ್ಳೋಣ. ಒಮ್ಮೆ ಬೆಂಬಲ ನೀಡಿ ಪರಿಸ್ಥಿತಿ ನೋಡೋಣ ಎಂದು ಕಾರ್ಯಕರ್ತರನ್ನು ಸಮಾಧಾನ ಮಾಡಿದರು.
ಇದೇ ವೇಳೆ ಸಚಿವ ಸಿ.ಎಸ್.ಪುಟ್ಟರಾಜು ತಮ್ಮ ವಿರುದ್ಧ ನೀಡಿದ್ದ ಡೆಡ್ ಹಾರ್ಸ್ ಹೇಳಿಕೆ ನೆನಪಿಸಿಕೊಂಡ ಚಲುವರಾಯಸ್ವಾಮಿ, ಅವರು ಹೇಳಿದ್ದು ಸತ್ಯ. ನಮ್ಮ ಜನ ನಮ್ಮನ್ನು ರಕ್ಷಣೆ ಮಾಡಿಕೊಳ್ಳದಿದ್ದಾಗ ಬೇರೆಯವರನ್ನು ಯಾಕೆ ದೂರ ಬೇಕು. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಬೇಕು ಅನ್ನುವ ರೀತಿ ನೀವು ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಬೇಕು ಎನ್ನ ಬೇಕಿತ್ತು. ಹಾಗೇ ನಡೆದುಕೊಂಡಿದರೆ ಪುಟ್ಟರಾಜು ಯಾಕೆ ಡೆಡ್ ಹಾರ್ಸ್ ಅಂತಿದರು. ನಾನು ಶಿವರಾಮೇಗೌಡ ಅಥವಾ ಕುಮಾರಸ್ವಾಮಿ ಅವರಿಂದ ನಿರೀಕ್ಷೆ ಇಟ್ಟು ಕೊಂಡು ಚುನಾವಣೆ ಮಾಡುತ್ತಿಲ್ಲ. ಪಕ್ಷ ಹೇಳಿದಂತೆ ಚುನಾವಣೆ ಮಾಡುತ್ತಿದ್ದೇವೆ ಅಷ್ಟೆ. ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಕೆಪಿಸಿಸಿ ಪ್ರಧಾನಕಾರ್ಯ ದರ್ಶಿ ಸಂಪಂಗಿ, ಜಿಲ್ಲಾ ಉಸ್ತುವಾರಿ ಬಲರಾಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಬೆಂಗಳೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಭುವೀರ್‍ಗೌಡ, ಅಮೃತ್ ಪಾಲ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಹೆಚ್.ಟಿ. ಕೃಷ್ಣೇಗೌಡ, ಬಿದರಕೆರೆ ಮಂಜೇಗೌಡ, ಎಂ.ಹುಚ್ಚೇ ಗೌಡ, ಎಂ.ಪ್ರಸನ್ನ, ಬಿ.ರಾಜೇಗೌಡ, ಕೆ.ಪಿ. ಶಿವನಂಜೇಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.
ದೊಡ್ಡ ಗೌಡರ ವಿರುದ್ಧ ಗುಡುಗಿದ ಸಿಆರ್‍ಎಸ್
‘ಕಳೆದ ಎರಡು ದಶಕಗಳ ಹಿಂದೆಯೇ ದೇವೇಗೌಡರು ನಮ್ಮನ್ನು ಬೆಳೆಯಲು ಬಿಡುತ್ತಿರಲಿಲ್ಲ’ ಎಂದು ಮಾಜಿ ಸಚಿವ ಚಲುರಾಯಸ್ವಾಮಿ ಗುಡುಗಿದರು.
ಸಭೆಯಲ್ಲಿ ಮಾತನಾಡಿದ ಅವರು, ಆಗಿನಿಂದಲೂ ನಾವು ಕಷ್ಟದ ಪರಿಸ್ಥಿತಿಯನ್ನು ಎದುರಿಸಿಕೊಂಡೇ ಕ್ಷೇತ್ರದಲ್ಲಿ ರಾಜಕಾರಣ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದರು. ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ ಎರಡು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದ್ದರೆ ಮೈತ್ರಿ ಸರ್ಕಾರದಲ್ಲಿ ಮಂತ್ರಿಗಿರಿಯನ್ನೂ ಕೊಟ್ಟು ಸರಿ ದೂಗಿಸುತ್ತಿದ್ದರು. ಆದರೆ, ನಮ್ಮ ದುರಾದೃಷ್ಟ ಯಾರೂ ಸಹ ಗೆಲ್ಲಲಿಲ್ಲ. 7 ಕ್ಷೇತ್ರಗಳಲ್ಲಿ ಗೆದ್ದಿರುವ ಜೆಡಿಎಸ್‍ನಿಂದ ನಮಗೆ ಕಠಿಣ ಪರಿಸ್ಥಿತಿ ಎದುರಾಗಿದೆ. 2019ರ ಮೇ ತಿಂಗಳಲ್ಲಿ ಮತ್ತೆ ಲೋಕಸಭೆ ಚುನಾವಣೆ ನಡೆಯುತ್ತದೆ ಎಂಬುದನ್ನು ಮನಗಂಡು ಜೆಡಿಎಸ್ ಮೈತ್ರಿ ಧರ್ಮ ಪಾಲಿಸಲೇ ಬೇಕು ಎಂದು ತಿಳಿಸಿದರು.
ಸಿಆರ್‍ಎಸ್‍ಗೆ ಜೈಕಾರ ಹಾಕಿದ ಎಲ್‍ಆರ್‍ಎಸ್
ಕಾಂಗ್ರೆಸ್ ಕಚೇರಿಯಲ್ಲಿ ಮತಯಾಚನೆ ಮಾಡಿದ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ, ನಾನು ಚಲುವರಾಯಸ್ವಾಮಿ ವಿರುದ್ಧ ಸೋತಿದ್ದೇನೆ. ಈ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಸೋಲನುಭವಿಸಿದ್ದರೂ ಸಹ ನಾನು ಮಾತ್ರ ಜಿಲ್ಲೆ ಮತ್ತು ರಾಜ್ಯ ನಾಯಕರಾಗಿರುವ ಅವರನ್ನು ಮಾಜಿ ಎಂದು ಕರೆಯುವುದಿಲ್ಲ ಎಂದು ಸಭೆಯಲ್ಲಿ ಚಲುವರಾಯಸ್ವಾಮಿಗೆ ಜೈಕಾರ ಹಾಕಿದರು.
ನಾನೂ ಚಲುವರಾಯಸ್ವಾಮಿ ಕಳೆದ ಇಪ್ಪತ್ತು ವರ್ಷಗಳಿಂದ ಜಿದ್ದಾಜಿದ್ದಿನ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಎಂದಿಗೂ ಅವರೊಂದಿಗೆ ಮಾತನಾಡಿದವನಲ್ಲ. ಆದರೆ, ವೈಯಕ್ತಿಕವಾಗಿ ಅವರ ಬಗ್ಗೆ ಯಾವುದೇ ದ್ವೇಷವಿಲ್ಲ ಎಂದು ಚಲುವರಾಯಸ್ವಾಮಿ ಅವರನ್ನು ಕೊಂಡಾಡಿದರು.
ನಾವು ಕನಸು ಮನಸ್ಸಿನಲ್ಲಿಯೂ ಜೆಡಿಎಸ್ ಕಾಂಗ್ರೆಸ್ ಒಂದಾಗುತ್ತೇವೆಂದು ಅಂದು ಕೊಂಡಿರಲಿಲ್ಲ. ಈ ಮೈತ್ರಿ ನನ್ನ ಹಾಗೂ ಚಲುವರಾಯಸ್ವಾಮಿಯ ತೀರ್ಮಾನ ವಲ್ಲ. ಜೆಡಿಎಸ್ ವರಿಷ್ಠ ದೇವೇಗೌಡರು ಮತ್ತು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಯವರ ತೀರ್ಮಾನವಾಗಿದ್ದು, ಕಳೆದ 22 ವರ್ಷಗಳಿಂದ ಅಧಿಕಾರ ವಿಲ್ಲದೆ ಕುಳಿತಿರುವ ನನಗೆ ಕಾಂಗ್ರೆಸ್ ಕಾರ್ಯಕರ್ತರೂ ಸೇರಿದಂತೆ ಎಲ್ಲರೂ ಆಶೀರ್ವದಿಸಿ ಲೋಕಸಭೆಗೆ ಕಳುಹಿಸಿದರೆ, ಮೈತ್ರಿ ಧರ್ಮವನ್ನು ಪ್ರಾಮಾಣಿಕವಾಗಿ ಪಾಲಿಸುವ ಜೊತೆಗೆ ಸದಾಕಾಲ ನಿಮ್ಮೊಂದಿಗೆ ನಾನಿರುತ್ತೇನೆ ಎಂದು ಭರವಸೆ ನೀಡಿದರು.