ಮೈಸೂರು: ದಾಂಡೇಲಿಯಲ್ಲಿ ನಡೆದ ವಕೀಲರೊಬ್ಬರ ಹತ್ಯೆ ಖಂಡಿಸಿ ಮೈಸೂರು ವಕೀಲರ ಸಂಘದ ವತಿಯಿಂದ ಮೈಸೂರಿನ ನ್ಯಾಯಾಲಯ ಎದುರಿನ ಗಾಂಧಿ ಪುತ್ಥಳಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನ್ಯಾಯಾಲಯದ ಕಲಾಪಯಿಂದ ದೂರ ಉಳಿದ ನ್ಯಾಯವಾದಿಗಳು, ಪ್ರತಿಭಟನೆಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಹಂತಕರನ್ನು ಕೂಡಲೇ ಬಂಧಿಸಬೇಕು. ಮುಂದೆ ವಕೀಲರ ಮೇಲಿನ ಹಲ್ಲೆ ನಡೆಯದಂತೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ದಾಂಡೇಲಿಯಲ್ಲಿ ವಕೀಲರೊಬ್ಬರ ಹತ್ಯೆಯಾಗಿದೆ. ವಕೀಲರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದ್ದು, ಇದು ಖಂಡನಾರ್ಹ. ನ್ಯಾಯ ದೊರಕಿಸಿಕೊಡುವವರಿಗೇ ಇಂದು ಭದ್ರತೆ ಇಲ್ಲದಂತಾಗಿದೆ. ಹೀಗಾದರೆ ಕಾರ್ಯನಿರ್ವಹಿಸುವುದು ಹೇಗೆ ಎಂದು ಪ್ರಶ್ನಿಸಿದರಲ್ಲದೇ, ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ರಾಮಮೂರ್ತಿ ಸೇರಿದಂತೆ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.