ಮೇಕೆದಾಟು ಅಣೆಕಟ್ಟೆ ಯೋಜನೆಗೆ  ತಮಿಳುನಾಡು ಅಡ್ಡಿ ಖಂಡಿಸಿ ಪ್ರತಿಭಟನೆ
ಮೈಸೂರು

ಮೇಕೆದಾಟು ಅಣೆಕಟ್ಟೆ ಯೋಜನೆಗೆ  ತಮಿಳುನಾಡು ಅಡ್ಡಿ ಖಂಡಿಸಿ ಪ್ರತಿಭಟನೆ

July 31, 2018

ಮೈಸೂರು: ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಅಣೆಕಟ್ಟು ಯೋಜನೆಗೆ ತಮಿಳುನಾಡು ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ, ಕರ್ನಾಟಕ ಸೇನಾ ಪಡೆ ಮೈಸೂರು ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು.

ಕಾವೇರಿ ವಿವಾದವನ್ನು ಮುಂದಿಟ್ಟುಕೊಂಡು ತಮಿಳುನಾಡಿನವರು ಕರ್ನಾಟಕ ರಾಜ್ಯದ ಉದ್ಧೇಶಿತ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಮೂಲಕ ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಖಂಡಿಸಿದರು.

ಪಕ್ಕದ ರಾಜ್ಯಗಳು ತಮ್ಮ ಅನುಕೂಲಕ್ಕಾಗಿ ನೀರಾವರಿ ಹಾಗೂ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಕಾಲ ಕಾಲಕ್ಕೆ ಅನುಷ್ಠಾನಗೊಳಿಸಿಕೊಳ್ಳುವ ನೆರೆ ರಾಜ್ಯಗಳು, ಅದೇ ರೀತಿ ಕರ್ನಾಟಕ ಕೂಡ ನಮ್ಮ ಅನುಕೂಲಕ್ಕೆ ಯಾವುದಾದರೂ ಯೋಜನೆ ಆರಂಭಿಸಲು ಮುಂದಾದರೆ ಅದಕ್ಕೆ ಅಡ್ಡಗಾಲು ಹಾಕುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎಂ.ಕರುಣಾನಿಧಿ ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕದ ವಿರೋಧವಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಹೊಗೇನಕಲ್ ಸಮೀಪ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಿತು. ಅದೇ ರೀತಿ ರಾಜ್ಯ ಸರ್ಕಾರವೂ ತಮಿಳುನಾಡಿನ ವಿರೋಧವನ್ನು ಲೆಕ್ಕಿಸದೆ ಉದ್ಧೇಶಿತ ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸಬೇಕು. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕು. ತಮಿಳುನಾಡಿಗೆ ತಿಳಿ ಹೇಳಿ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.

ಸೇನಾ ಪಡೆ ಮೈಸೂರು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ಶಾಂತರಾಜೇ ಅರಸ್, ಆರ್.ಶಾಂತಮೂರ್ತಿ, ನಂದಕುಮಾರ್, ಕಲೀಂ, ಪ್ರದೀಪ್, ವಿಜಯೇಂದ್ರ, ಪ್ರೀತಂ, ಶ್ರೀನಿವಾಸ್ ರಮೇಶ್, ಮಿನಿ ಬಂಗಾರಪ್ಪ, ಕೆ.ಸಿ.ಗುರುಮಲ್ಲಪ್ಪ, ನಿತ್ಯಾನಂದ, ದೂರ ಸುರೇಶ್, ಎಂ.ರಾಘವೇಂದ್ರ, ನಾಸಿರ್, ರವಿತೇಜ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »