ಮೇಕೆದಾಟು ಅಣೆಕಟ್ಟು ನಿರ್ಮಾಣ: ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ
ಮಂಡ್ಯ

ಮೇಕೆದಾಟು ಅಣೆಕಟ್ಟು ನಿರ್ಮಾಣ: ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ

July 25, 2018

ಮಂಡ್ಯ:  ಮೇಕೆದಾಟು ಅಣೆಕಟ್ಟು ನಿರ್ಮಾಣ ಕಾರ್ಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಡ್ಯ ತಾಲೂಕಿನ ಸಿದ್ದಯ್ಯನಕೊಪ್ಪಲು ಗ್ರಾಮದಲ್ಲಿಂದು ದಿವಂಗತ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎನ್.ನಾಗರಾಜು ಅವರ 11ನೇ ದಿನದ ಶ್ರಾದ್ಧ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ನೀರಿನ ಅಭಾವದ ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಕಳೆದ ಸರ್ಕಾರದ ಅವಧಿ ಯಲ್ಲಿ ಅಣೆಕಟ್ಟು ಕಟ್ಟುವ ಬಗ್ಗೆ ನಿರ್ಧಾರವಾಗಿತ್ತು. ನಮಗೆ ಅಣೆಕಟ್ಟು ನಿರ್ಮಾಣದಿಂದ ಕುಡಿಯುವ ನೀರಿಗಷ್ಟೆ ಅನುಕೂಲ. ಉಳಿದ ನೀರು ತಮಿಳುನಾಡಿಗೆ ಬಿಡಲು ಅನುಕೂಲವಾಗುತ್ತೆ. ಹೀಗಾಗಿ ಹಿಂದೆ ಕೈಗೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲಾ ಎಂದರು.

ಮಂಡ್ಯ ಜನರು ಮುಂದೆ ಬೇಸಾಯ ಪದ್ಧತಿ ಬದಲಾವಣೆ ಮಾಡಿದರೆ ಒಳಿತು. ನೀರು ಅಮೂಲ್ಯವಾದುದು. ಹಾಗಾಗಿ ಹಿತಮಿತವಾಗಿ ಬಳಸಬೇಕು. ರಾಯಚೂರು ಕಡೆ ಕಡಿಮೆ ನೀರು ಬಳಸಿ ಹೊಸ ತಳಿಯ ಭತ್ತ ಬೆಳೆಯಲಾಗುತ್ತಿದೆ. ಆ ಭತ್ತದ ತಳಿಯನ್ನು ಮಂಡ್ಯದಲ್ಲಿಯೂ ಬೆಳೆಯುವುದರಿಂದ ನೀರಿನ ಸಮಸ್ಯೆ ತಪ್ಪುತ್ತದೆ ಎಂದು ಡಿಕೆಶಿ ಸಲಹೆ ನೀಡಿದರು.

ಲೋಕಸಭಾ ಚುನಾವಣೆವರೆಗೂ ಸಮ್ಮಿಶ್ರ ಸರ್ಕಾರ ಇರುತ್ತೆ. ಅನಂತರ ಪತನವಾಗುತ್ತದೆ ಎನ್ನುವ ಕೈ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಆ ಬಗ್ಗೆ ದಿನೇಶ್ ಗುಂಡೂರಾವ್ ಉತ್ತರ ನೀಡುತ್ತಾರೆ. ಅದರ ಜವಾಬ್ದಾರಿ ದಿನೇಶ್ ಗುಂಡೂರಾವ್ ಗೆ ವಹಿಸಲಾಗಿದೆ ಎಂದರು. ಲೋಕೋಪಯೋಗಿ ಇಲಾಖೆ ಅಕ್ರಮ ವರ್ಗಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಬೇರೆ ಇಲಾಖೆಗಳ ಬಗ್ಗೆ ನಾನು ಮಾತನಾಡಲ್ಲ. ನಾನು ಸ್ಪೋಕ್ಸ್ ಮನ್ ಅಲ್ಲ. ನನ್ನ ಇಲಾಖೆ ಬಗ್ಗೆ ಅಷ್ಟೇ ನಾನು ಮಾತನಾಡ್ತೀನಿ ಎಂದು ಸಚಿವ ಡಿಕೆಶಿ ಹೇಳಿದರು. ಅಲ್ಲದೇ, ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಅಭ್ಯರ್ಥಿ ರಮ್ಯಾನಾ ಅಥವಾ ಅಂಬರೀಶಾ..? ಅನ್ನೋ ಪ್ರಶ್ನೆಗೆ ಡಿಕೆಶಿ ಪ್ರತಿಕ್ರಿಯಿಸಲಿಲ್ಲ. ರಾಯಚೂರು ಜಿಲ್ಲಾಧಿಕಾರಿಯಾಗಿ ನಿವೃತ್ತಿಯಾಗಿದ್ದ ನಾಗರಾಜು, ನಮಗೆ ಆಪ್ತರು. ಹಾಗಾಗಿ ಕಾರ್ಯಕ್ಕೆ ಆಗಮಿಸಿದ್ದೇನೆ ಎಂದರು.

ಶ್ರಾದ್ಧ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ, ರಮೇಶ್‍ಬಾಬು ಮತ್ತಿತರರು ಭಾಗವಹಿಸಿದ್ದರು.

Translate »