ನಾಗಮಂಗಲ: ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ನಾಗಮಂಗಲದ ಮಂಡ್ಯ ರಸ್ತೆಯ ಅಮ್ಮನಕಟ್ಟೆ ಸಮೀಪದ ತಿರುವಿ ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಜಡೆಮಾಯಸಂದ್ರ ನಿವಾಸಿ ಅಸ್ಕರ್ ಅಹಮದ್ (60) ಸ್ಥಳದಲ್ಲೇ ಮೃತ ಪಟ್ಟಿದ್ದು, ಮುನಿರಾಭಾನು, ಚಾಲಕ ತಾಯರ್ ಪಾಷ, ತಾಲೀಬ್ ಪಾಷ ಹಾಗೂ ಲಾರಿ ಚಾಲಕ ರೆಹಮಾನ್ ಷರೀಫ್ ಗಾಯಗೊಂಡಿದ್ದಾರೆ.
ಇಂದು ಸಂಜೆ ತುಮಕೂರು ಜಿಲ್ಲೆ ಜಡೆಮಾಯಸಂದ್ರದ ಅಸ್ಕರ್ ಅಹಮ್ಮದ್, ಮುನಿರಾಭಾನು, ಚಾಲಕ ತಾಯರ್ ಪಾಷ ಹಾಗೂ ತಾಲೀಬ್ ಪಾಷ ಅವರ ನ್ನೊಳಗೊಂಡ ಒಂದೇ ಕುಟುಂಬದವರು ಸಂಬಂಧಿಕರೊಬ್ಬರ ಮನೆಗೆ ಶವ ನೋಡಲು ಮಂಡ್ಯ ಕಡೆಗೆ ಕಾರ್‍ನಲ್ಲಿ (ಕೆ.ಎ.19 ಜಡ್.1515) ತೆರಳುತ್ತಿದ್ದರು. ಮಾರ್ಗಮಧ್ಯೆ ನಾಗಮಂಗಲ ಹೊರವಲಯದ ಮಂಡ್ಯ ರಸ್ತೆಯ ಅಮ್ಮನಕಟ್ಟೆ ತಿರುವಿನಲ್ಲಿ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಅಸ್ಕರ್ ಅಹಮ್ಮದ್, ಮುನಿರಾ ಭಾನು, ಚಾಲಕ ತಾಯರ್ ಪಾಷ, ತಾಲೀಬ್ ಪಾಷ ಮತ್ತು ಲಾರಿ ಚಾಲಕ ರೆಹಮಾನ್ ಷರೀಫ್ ಗಾಯ ಗೊಂಡಿದ್ದಾರೆ. ತಕ್ಷಣ ಎಲ್ಲರನ್ನೂ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಸ್ಕರ್ ಅಹಮದ್ ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಇನ್ನುಳಿದಂತೆ ಲಾರಿ ಚಾಲಕ ಸೇರಿದಂತೆ ನಾಲ್ವರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಿಜಿ ನಗರದ ಎಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಆರಕ್ಷಕ ಉಪನಿರೀಕ್ಷಕ ಚಂದ್ರಶೇಖರ ನೇತೃತ್ವದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ನಾಗಮಂಗಲ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.