ಬಸ್ ಡಿಕ್ಕಿ: ಬಾಲಕಿ ಸ್ಥಳದಲ್ಲೇ ಸಾವು
ಮೈಸೂರು

ಬಸ್ ಡಿಕ್ಕಿ: ಬಾಲಕಿ ಸ್ಥಳದಲ್ಲೇ ಸಾವು

December 26, 2018

ನಂಜನಗೂಡು: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಚಾ.ನಗರ- ನಂ.ಗೂಡು ಬೈಪಾಸ್ ರಸ್ತೆಯ ಮೇದರಗೇರಿ ಬಳಿ ನಡೆದಿದೆ. ಮೇದರಗೇರಿಯ ನಿವಾಸಿ ಸಿದ್ದರಾಜು ಪುತ್ರಿ ಅಶ್ವಿನಿ(13) ಅಪಘಾತದಲ್ಲಿ ಮೃತಪಟ್ಟ ಬಾಲಕಿ. ಈಕೆ ಸಂಜೆ ಮನೆಯಿಂದ ಹೊರಟು ರಸ್ತೆ ದಾಟುವ ಸಂದರ್ಭದಲ್ಲಿ ತಗಡೂರಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್(ಕೆಎ.09,ಎಫ್4247) ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಅಶ್ವಿನಿ ನಡುರಸ್ತೆಯಲ್ಲೇ ಅಸುನೀಗಿದ್ದಾಳೆ.

ರೊಚ್ಚಿಗೆದ್ದ ಸಾರ್ವಜನಿಕರು: ಬಾಲಕಿ ಅಶ್ವಿನಿಯ ಸಾವಿಗೆ ಕಾರಣವಾದ ಬಸ್ ಚಾಲಕ ಗಿರಿಯನ್ನು ಸಾರ್ವಜನಿಕರು ಹಾಗೂ ಬಾಲಕಿಯ ಸಂಬಂಧಿಕರು ತರಾಟೆಗೆ ತೆಗೆದು ಕೊಂಡರಲ್ಲದೆ, ಕಲ್ಲು ತೂರಿ ಬಸ್ ಗಾಜು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯಿಂದ ಅಸ್ವಸ್ಥಗೊಂಡ ಚಾಲಕ ಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ಆರಾಧ್ಯ, ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

Translate »