`ಕನ್ನಂಬಾಡಿ ಕಟ್ಟೆ ಉಳಿಸಿ-ನಮ್ಮ ಬದುಕು ಉಳಿಸಿ’ ಬಹಿರಂಗ ಸಭೆ
ಮಂಡ್ಯ

`ಕನ್ನಂಬಾಡಿ ಕಟ್ಟೆ ಉಳಿಸಿ-ನಮ್ಮ ಬದುಕು ಉಳಿಸಿ’ ಬಹಿರಂಗ ಸಭೆ

December 26, 2018

ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತ: ಕಾರ್ಮಿಕರ ಬದುಕು ಅತಂತ್ರ ಜನಪದ ಸಾಹಿತಿ ಡಾ.ಪಿ.ಕೆ. ರಾಜಶೇಖರ್

ಪಾಂಡವಪುರ:  ಬೇಬಿ ಬೆಟ್ಟ ದಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವ ಮೂಲಕ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕೂಲಿ ಕಾರ್ಮಿಕರ ಬದುಕನ್ನು ಜಿಲ್ಲಾಡಳಿತ ಕಿತ್ತು ಕೊಂಡಿದೆ ಎಂದು ಜನಪದ ಸಾಹಿತಿ ಡಾ. ಪಿ.ಕೆ.ರಾಜಶೇಖರ್ ಆರೋಪಿಸಿದರು.

ತಾಲೂಕಿನ ನಾರ್ಥ್‍ಬ್ಯಾಂಕ್ ಗ್ರಾಮದಲ್ಲಿ ಮಂಗಳವಾರ ಪಾಂಡವಪುರ ತಾಲೂಕು ಕಲ್ಲು ಕ್ವಾರಿ ಮಾಲೀಕರು, ಕೂಲಿ ಕಾರ್ಮಿಕರು, ಲಾರಿ, ಟ್ರಾಕ್ಟರ್ ಹಾಗೂ ಕ್ರಷರ್ ಮಾಲೀಕರು, ಕಾರ್ಮಿಕರ ಸಂಘ, ಕಲ್ಲು ಕುಟಿಕರ ಸಂಘ, ಲಾರಿ ಚಾಲಕರ ಸಂಘ, ಬೋವಿ ಸಂಘ ಸೇರಿದಂತೆ ಕ್ವಾರಿ ಕೆಲಸ ಅವಲಂಬಿಸಿರುವ ಹಲವು ಸಂಘ ಸಂಸ್ಥೆಗಳ ಸಹಯೋಗ ದಲ್ಲಿ ನಡೆದ `ಕನ್ನಂಬಾಡಿ ಕಟ್ಟೆ ಉಳಿಸಿ-ನಮ್ಮ ಬದುಕು ಉಳಿಸಿ’ ಬಹಿರಂಗ ಸಭೆ ಯಲ್ಲಿ ಅವರು ಮಾತನಾಡಿದರು.

ಇಲ್ಲಿನ ಕಲ್ಲುಕ್ವಾರಿ ಕೆಲಸ ನಂಬಿ ಕೊಂಡು ಈ ಭಾಗದ 40 ಸಾವಿರ ಕೂಲಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಇದೀಗ ಜಿಲ್ಲಾಡಳಿತ ಯಾವುದೋ ಶಬ್ದ ಕೇಳಿ ಬಂತು ಎಂಬ ಕಾರಣಕ್ಕೆ ಕಲ್ಲು ಕ್ವಾರೆ ಗಳನ್ನು ಸ್ಥಗಿತಗೊಳಿಸುವ ಮೂಲಕ ಕಾರ್ಮಿಕರ ಬದುಕನ್ನು ಕಿತ್ತುಕೊಂಡಿದೆ. ಜಿಲ್ಲಾಡಳಿತ ಮೊದಲು ಆ ಶಬ್ದ ಯಾವುದು? ಎಲ್ಲಿಂದ ಬಂದಿರಬಹುದು ಎನ್ನುವುದನ್ನು ತಜ್ಞರಿಂದ ತನಿಖೆ ನಡೆಸಿ ಸ್ಪಷ್ಟ ಮಾಹಿತಿ ನೀಡಬೇಕು. ಯಾರೋ ಕಿಡಿಗೇಡಿಗಳು, ಮತ್ತೊಬ್ಬರ ಏಳಿಗೆ ಸಹಿಸಲಾರದ ದುಷ್ಟರು ಬೇಕೆಂತಲೇ ಶಬ್ದ ಮಾಡಿರಬಹುದು ಅದನ್ನು ತನಿಖೆ ಮಾಡಬೇಕು. ಒಂದು ವೇಳೆ ಗಣಿಗಾರಿಕೆ ಯಿಂದಲೇ ಶಬ್ದ ಕೇಳಿ ಬಂದಿದೆ ಎನ್ನುವು ದಾದರೆ ಕಲ್ಲು ಕ್ವಾರೆಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿರುವ ಎಲ್ಲಾ ಕಾರ್ಮಿಕರÀ ಜೀವನಕ್ಕಾಗಿ ಬೇರೆ ವ್ಯವಸ್ಥೆ ಮಾಡಿಕೊಡ ಬೇಕು. ಅದನ್ನು ಬಿಟ್ಟು ಜಿಲ್ಲಾಡಳಿತ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬಂತೆ ಯಾರೋ ದುಷ್ಟರು ಬೇಕಂತಲೇ ಮಾಡಿರುವ ಕೃತ್ಯಕ್ಕೆ ಕಾರ್ಮಿಕರ ಬದುಕು ಕಿತ್ತುಕೊಂಡು ಅವರ ಹೊಟ್ಟೆ ಮೇಲೆ ಹೊಡೆಯುವುದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಬಿ ಬೆಟ್ಟದ ಕ್ವಾರೆಗಳಲ್ಲಿ ಬೆಲೆ ಬಾಳುವ ಚಿನ್ನ, ಕಬ್ಬಿಣದ ಅದಿರು ಸಿಗುತ್ತಿಲ್ಲ. ಅಲ್ಲಿ ಕೇವಲ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಕಲ್ಲಿನ ಕಚ್ಚಾ ವಸ್ತುಗಳು ಮಾತ್ರ ದೊರೆಯುತ್ತಿವೆ. ಇಲ್ಲಿ ದೊರೆಯುವ ವಸ್ತು ಗಳನ್ನು ಬೇರೆ ರಾಜ್ಯ, ದೇಶಕ್ಕೆ ಪೂರೈಕೆ ಮಾಡುತ್ತಿಲ್ಲ. ಬದಲಾಗಿ ಇಲ್ಲಿ ಸಿಗುವ ಕಲ್ಲಿನ ಕಚ್ಚಾವಸ್ತುಗಳನ್ನು ಮಂಡ್ಯ, ಮೈಸೂರು ಸುತ್ತಮುತ್ತಲಿನ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡ ಲಾಗುತ್ತಿದೆ. ಕಳೆದ 3ತಿಂಗಳಿಂದ ಕ್ವಾರೆಗಳು, ಕ್ರಷರ್‍ಗಳು ಸ್ಥಗಿತಗೊಂಡಿರುವುದರಿಂದ ಈ ಭಾಗದ ಅಭಿವೃದ್ಧಿ ಕೆಲಸಗಳು ಸಹ ಕುಂಠಿತಗೊಂಡಿವೆ. ಮನೆ ಕಟ್ಟುವವರು ಕಲ್ಲಿನ ಕಚ್ಚಾವಸ್ತುಗಳಿಗಾಗಿ ಪರದಾಟ ನಡೆಸುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಜೊತೆಗೆ ಇಲ್ಲಿ ನಡೆಯುವ ಗಣಿಗಾರಿಕೆಯಿಂದ ಕೆಆರ್‍ಎಸ್ ಅಣೆಕಟ್ಟೆಗೆ ಯಾವುದೇ ತೊಂದರೆ ಯಾಗುವುದಿಲ್ಲ. ಏಕೆಂದರೆ ಅದನ್ನು ಸರ್ ಎಂ.ವಿಶ್ವೇಶ್ವರಯ್ಯನಂತಹ 20 ಇಂಜಿನಿ ಯರ್‍ಗಳು ಕಟ್ಟಿರುವ ಅಣೆಕಟ್ಟೆಯಾಗಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಮಂತ್ರಿ ಸಿ.ಎಸ್.ಪುಟ್ಟರಾಜು ಅವರು ಈ ಭಾಗದ ಜನರ, ಕೂಲಿಕಾರ್ಮಿಕರ ಕಷ್ಟ ವನ್ನು ಅರಿತು ಮುಖ್ಯಮಂತ್ರಿಗಳ ಗಮನಕ್ಕೂ ತಂದು ಕಲ್ಲು ಕ್ವಾರೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಕ್ರಷರ್, ಕ್ವಾರೆ ಮಾಲೀಕರ ಸಂಘದ ಉಪಾಧ್ಯಕ್ಷ ನಟರಾಜು ಮಾತನಾಡಿ, ಬೇಬಿಬೆಟ್ಟದಲ್ಲಿ ನಾವು ಯಾವುದೇ ರೀತಿಯ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ಬದಲಿಗೆ ಕಾನೂನುಬದ್ಧವಾಗಿಯೇ ಕ್ವಾರೆ ಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಸುಮಾರು 25 ಲೀಸ್‍ನಲ್ಲಿ ಸರ್ಕಾರ ನಮಗೆ 75 ಎಕರೆ ಕೊಟ್ಟಿದೆ. ಅಲ್ಲದೇ ಸುತ್ತಮುತ್ತ ಲಿನ ಜಮೀನಿನ ರೈತರು ತಮ್ಮ ಜಮೀನನಲ್ಲಿ ರುವ ಕಲ್ಲಿಗೆ ಸರ್ಕಾರÀದಿಂದ ಅನುಮತಿ ಪಡೆದು ಕ್ವಾರೆ ನಡೆಸುತ್ತಿದ್ದಾರೆ. ಆದರೆ ಕೆಲವರು ಮಾಧ್ಯಮಗಳ ಮೂಲಕ 7 ಸಾವಿರ ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆಆರ್‍ಎಸ್ ಅಣೆಕಟ್ಟೆ ನಿರ್ಮಾಣದಲ್ಲಿ ಶ್ರಮಿಸಿದ ಬೋವಿ ಜನರ ಬೇಡಿಕೆ ಮೇರೆಗೆ 1950ರಲ್ಲಿ ಮೈಸೂರು ಮಹಾರಾಜರು ಬೇಬಿಬೆಟ್ಟದಲ್ಲಿ ಸುಮಾರು 1626 ಎಕರೆ ಸ್ವಂತ ಜಮೀನಿನಲ್ಲಿ ಕ್ವಾರೆ ಕೆಲಸ ಮಾಡÀಲು ಸುಮಾರು 327 ಎಕರೆ ಜಮೀನನ್ನು ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ. ಬಳಿಕ ಮೈಸೂರು ಮಹಾರಾಜರು 1954ರಲ್ಲಿ ಇದು ವ್ಯವಸಾಯಕ್ಕೆ ಯೋಗ್ಯ ಭೂಮಿಯಲ್ಲ ಎಂಬ ಕಾರಣಕ್ಕೆ 1626 ಎಕರೆಯನ್ನು ಸರ್ಕಾರಕ್ಕೆ ಬರೆದು ಕೊಟ್ಟಿದ್ದಾರೆ. ಮತ್ತೆ 1960ರಲ್ಲಿ ಅಧಿಕೃತ ವಾಗಿ ಸರ್ಕಾರವೇ ಬೋವಿ ಸಮಾಜದ ವರಿಗೆ ಲೀಸ್ ರೂಪದಲ್ಲಿ ಭೂಮಿ ಕೊಟ್ಟಿದೆ. ಅಂದು ರಾಯಲ್ಟಿ ಪಡೆದುಕೊಂಡ ಸುಮಾರು 25 ಲೀಸ್‍ಗಳಿದ್ದು, ಇಂದು ಕೂಡ ಸರ್ಕಾರಕ್ಕೆ ರಾಜಧನವನ್ನು ಕಟ್ಟಿಕೊಂಡು ಕ್ವಾರೆ ನಡೆಸುತ್ತಿ ದ್ದಾರೆ. ಅಲ್ಲಿಯ ರೈತರು ಕೃಷಿಗೆ ಯೋಗ್ಯ ವಲ್ಲದ ಭೂಮಿಯಲ್ಲಿ ಕ್ವಾರೆ ನಡೆಸಲು ಸರ್ಕಾರಕ್ಕೆ ರಾಜಧನ ಪಾವತಿಸಿ ಕೊಂಡು ಈ ಉದ್ಯಮವನ್ನು ನಡೆಸಿಕೊಂಡು ಬರುತ್ತಿ ದ್ದೇವೆ. ನಾವು ಯಾವುದೇ ಅಕ್ರಮ ನಡೆಸು ತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲವು ಸಾಹಿತಿಗಳು, ಪ್ರಗತಿಪರ ಚಿಂತಕರು ಇಲ್ಲಿನ ಕ್ವಾರೆಗಳು, ಕೂಲಿ ಕಾರ್ಮಿಕರ ಜನರ ಬದುಕಿನ ಬಗ್ಗೆ ಸರಿಯಾದ ಮಾಹಿತಿ ಗಳನ್ನು ಪಡೆಯದೇ ಕೆಲವು ಹೋರಾಟ ಗಾರರು ನಕಲಿ ಆರ್‍ಟಿಐ ಕಾರ್ಯಕರ್ತರು ನೀಡುತ್ತಿರುವ ತಪ್ಪು ಮಾಹಿತಿಗಳನ್ನು ಪಡೆದು ಮಾತನಾಡುತ್ತಿದ್ದಾರೆ. ಹೀಗಾಗಿ ಸತ್ಯಾಂಶವನ್ನು ತಿಳಿದುಕೊಂಡು ಜನತೆಗೆ, ಜಿಲ್ಲಾಡಳಿತಕ್ಕೆ ಸರಿಯಾದ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಮೈಸೂರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಮಾತನಾಡಿದರು. ಕ್ರಷರ್, ಕ್ವಾರೆ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಬಹಿರಂಗ ಸಭೆಯ ಅಧ್ಯಕ್ಷೆ ವಹಿಸಿ ದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಆರ್.ಎ.ನಾಗಣ್ಣ, ಹೊನಗಾನ ಹಳ್ಳಿ ಎಚ್.ಕೃಷ್ಣೇಗೌಡ(ಕಿಟ್ಟಿ), ಕೆ.ಎಸ್. ಜಯರಾಮು, ಜಿಪಂ ಸದಸ್ಯೆ ಅನುಸೂಯ, ತಾಪಂ ಅಧ್ಯಕ್ಷೆ ಸುಮಲತ, ಸದಸ್ಯರಾದ ವಿ.ಎಸ್.ನಿಂಗೇಗೌಡ, ಶಿವಣ್ಣ, ಗೋವಿಂದಯ್ಯ, ಗ್ರಾಪಂ ಅಧ್ಯಕ್ಷರಾದ ವರಲಕ್ಷ್ಮಿ, ಮಹದೇವು, ಕೃಷ್ಣೇಗೌಡ, ಕಮಲಮ್ಮ, ಎಪಿಎಂಸಿ ಅಧ್ಯಕ್ಷ ಕುಳ್ಳೇಗೌಡ, ಪುರಸಭೆ ಸದಸ್ಯರಾದ ಸೋಮಶೇಖರ್, ಗಿರೀಶ್, ಶಿವಣ್ಣ, ಚಿಕ್ಕ ತಮ್ಮೇಗೌಡ, ಶಿವಕುಮಾರ್, ತಾಪಂ ಮಾಜಿ ಅಧ್ಯಕ್ಷ ಬಿ.ಪಿ.ಶ್ರೀನಿವಾಸ್, ಕೋದಂಡರಾಮಪ್ಪ, ಡಾ.ಎಂ.ಬಿ. ಶ್ರೀನಿವಾಸ್, ಜೆಡಿಎಸ್ ಅಧ್ಯಕ್ಷ ಧರ್ಮರಾಜು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಲಹೆಗಾರ ಸುರೇಂದ್ರ, ಎಚ್. ಎಲ್.ಸ್ವಾಮೀಗೌಡ, ಬನ್ನಂಗಾಡಿ ರೇವಣ್ಣ, ಮುಖಂಡ ಕ್ಯಾತನಹಳ್ಳಿ ಚೇತನ್ ಹಲವರಿದ್ದರು.

Translate »