ಮೈಷುಗರ್ ಕಾರ್ಖಾನೆ ಆ.15 ರಿಂದ ಕಾರ್ಯಾರಂಭ
ಮಂಡ್ಯ

ಮೈಷುಗರ್ ಕಾರ್ಖಾನೆ ಆ.15 ರಿಂದ ಕಾರ್ಯಾರಂಭ

July 25, 2018
  • ಬರುವ 15 ರೊಳಗೆ ರೈತರು, ಕಾರ್ಮಿಕರ ಎಲ್ಲಾ ಬಾಕಿ ಪಾವತಿ
  • ಡಿಸ್ಟಿಲರಿ ಘಟಕ ಖಾಸಗಿಗೆ ವಹಿಸಲು ಸರ್ಕಾರ ನಿರ್ಧಾರ
  • ಎಫ್‍ಆರ್‍ಪಿ ದರ ನಿಗದಿ ನಿಯಮ ತಕ್ಷಣದಿಂದಲೇ ಜಾರಿಗೆ ರೈತರ ಆಗ್ರಹ

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಕಾರ್ಖಾನೆಯನ್ನು ಆಗಸ್ಟ್ 15 ರಿಂದ ಆರಂಭಿಸಲಾಗುವುದು ಎಂದು ಸಕ್ಕರೆ ಹಾಗೂ ಭಾರೀ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಮಂಗಳವಾರ ಮೈಷುಗರ್ ಕಾರ್ಖಾನೆಗೆ ದಿಢೀರ್ ಭೇಟಿ ನೀಡಿದ ಅವರು, ಕಾರ್ಖಾನೆಯ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಷುಗರ್ ಆರಂಭಕ್ಕೆ ಮುಹೂರ್ತ ಕೂಡಿ ಬಂದಿದೆ. ಕಬ್ಬು ನುರಿಸುವ ಜೊತೆಯಲ್ಲೇ ಕೋಜನ್ ಘಟಕವನ್ನೂ ಆರಂಭ ಮಾಡಲಾಗುತ್ತದೆ. ಬರುವ 15 ರೊಳಗೆ ರೈತರು, ಕಾರ್ಮಿಕರಿಗೆ ನೀಡಬೇಕಿರುವ ಎಲ್ಲಾ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಡಿಸ್ಟಿಲರಿ ಘಟಕವನ್ನು ಖಾಸಗಿಯವರಿಗೆ ವಹಿಸಲು ಸರ್ಕಾರ ನಿರ್ಧಾರ ಮಾಡಿದೆ. ಕಾರ್ಖಾನೆಯ ಬಾಯ್ಲರ್‍ಗಳ ಪೈಕಿ ಎರಡರಲ್ಲಿ ಒಂದು ಬಾಯ್ಲರ್ ನ್ನು ಪ್ರಾಯೋಗಿಕವಾಗಿ ಆರಂಭ ಮಾಡಲಾಗುತ್ತದೆ. ದುರಸ್ತಿ ಬಳಿಕ ಎರಡನೇ ಹಂತದಲ್ಲಿ ಮತ್ತೊಂದು ಬಾಯ್ಲರ್ ಅನ್ನು ಆರಂಭಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೈಷುಗರ್ ಪುನಶ್ಚೇತನಕ್ಕೆ ಮೈತ್ರಿ ಸರ್ಕಾರ ಬದ್ಧವಾಗಿದೆ. ಯಾವುದೇ ಗೊಂದಲ, ಅನುಮಾನಗಳಿಗೆ ಅವಕಾಶವಿಲ್ಲ. ರೈತರ ಹಿತ ಕಾಪಾಡಲು ಸರ್ಕಾರ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ ಎಂದು ಅವರು ತಿಳಿಸಿದರು.

ರೈತರು, ಅಧಿಕಾರಿಗಳೊಂದಿಗೆ ಸಭೆ: ಇದಕ್ಕೂ ಮುನ್ನಾ ಕಾರ್ಖಾನೆ ಪುನ ಶ್ಚೇತನ ಕುರಿತಂತೆ ಕಾರ್ಖಾನೆಯಲ್ಲಿ ಅಧಿಕಾರಿ ವರ್ಗ ಮತ್ತು ರೈತರೊಂದಿಗೆ ಸಚಿವರು ಸಮಾಲೋಚನೆ ನಡೆಸಿ, ಸ್ಥಗಿತಗೊಂಡಿರುವ ಕಾರ್ಖಾನೆ ಪುನ ರಾರಂಭಕ್ಕೆ ರೈತರು ಮತ್ತು ಅಧಿಕಾರಿ ಗಳಿಂದ ಸಲಹೆ ಪಡೆದರು.

ಇದೇ ವೇಳೆ ಮೈಷುಗರ್ ಹಾಗೂ ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಆರ್ಥಿಕ ನೆರವು ನೀಡ ಬೇಕೆಂದು ಒತ್ತಾಯಿಸಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ರಾಜ್ಯ ರೈತ ಸಂಘದ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ರೈತರು, ಕಾರ್ಮಿಕರ ಜೀವ ನಾಡಿಯಾಗಿರುವ ಮೈಷುಗರ್ ಕಾರ್ಖಾನೆ ಯನ್ನು ಪುನಶ್ಚೇತನಗೊಳಿಸಬೇಕು. ಸಾಲಬಾಧೆ, ಬೆಳೆ ನಷ್ಟದಿಂದಾಗಿ ಆತ್ಮ ಹತ್ಯೆಯ ಹಾದಿ ಹಿಡಿದಿರುವ ರೈತರ ರಕ್ಷಣೆಗೆ ಮುಂದಾಗಬೇಕು. ರೈತರು, ಕಾರ್ಮಿಕರಿಗೆ ನೀಡಬೇಕಿರುವ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಮೈಷುಗರ್ ಜೊತೆಗೆ ಪಿಎಸ್‍ಎಸ್‍ಕೆ ಪುನಶ್ಚೇತನಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ದರ್ಶನ್ ಪುಟ್ಟಣ್ಣಯ್ಯ ಸಚಿವರನ್ನು ಒತ್ತಾಯಿಸಿದರು.

ಚಾಂಷುಗರ್, ಎನ್‍ಎಸ್‍ಎಲ್ ಕೊಪ್ಪ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ 2016-17ರ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿಸಿ ಕೊಡಬೇಕು. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ನಿಗದಿ ಪಡಿಸಿರುವ ಎಫ್‍ಆರ್‍ಪಿ ದರವನ್ನು ಅಕ್ಟೋಬರ್‍ಗೆ ಬದಲಾಗಿ ಕಾರ್ಖಾನೆ ಆರಂಭಿಸಿದ ದಿನದಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಈ ಸಂದರ್ಭ ರವಿಕುಮಾರ್ ಗಣಿಗ, ಶಂಭೂನಹಳ್ಳಿ ಸುರೇಶ್, ಲತಾಶಂಕರ್, ಲಿಂಗಪ್ಪಾಜಿ, ಚಿದಂಬರ್, ಮತ್ತಿತರರಿದ್ದರು.

ಸಕ್ಕರೆ ಹಾಗೂ ಭಾರೀ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಅವರು ಮೈಷು ಗರ್‍ಗಿಂದು ದಿಢೀರ್ ಭೇಟಿ ಪುನಶ್ಚೇತನ ಕುರಿತಂತೆ ಸಮಾಲೋಚನೆ ನಡೆಸಿರು ವುದು ರೈತ ವಲಯದಲ್ಲಿ ತುಸು ಆಶಾಭಾವನೆ ಮೂಡಿಸಿದೆ.

ಕಳೆದ 3 ವರ್ಷಗಳಿಂದ ಸ್ಥಗಿತ ಗೊಂಡಿರೋ ಮೈಷುಗರ್ ಕಾರ್ಖಾನೆ ಆರಂಭವಾದಲ್ಲಿ ರೈತರಿಗೆ ಅಲ್ಪಮಟ್ಟಿನ ನೆಮ್ಮದಿಸಿಗಲಿದೆ. ಸರ್ಕಾರ ರೈತರ ಈ ಆಶಾಭಾವನೆಗೆ ಯಾವ ರೀತಿಯ ಪೂರಕ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Translate »