ಶೋಷಿತ ಸಮುದಾಯಗಳು ಸಿದ್ದರಾಮಯ್ಯರ ಕೊಡುಗೆ ಅರ್ಥ ಮಾಡಿಕೊಳ್ಳದ ಕಾರಣ ಅವರಿಗೆ ಸೋಲಾಯಿತು
ಮೈಸೂರು

ಶೋಷಿತ ಸಮುದಾಯಗಳು ಸಿದ್ದರಾಮಯ್ಯರ ಕೊಡುಗೆ ಅರ್ಥ ಮಾಡಿಕೊಳ್ಳದ ಕಾರಣ ಅವರಿಗೆ ಸೋಲಾಯಿತು

July 31, 2018

ಮೈಸೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯ 2ನೇ ವರ್ಷದ ಸ್ಮರಣೆ ಅಂಗವಾಗಿ ಸಾಮಾಜಿಕ ನ್ಯಾಯ ಕುರಿತಂತೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಅವರು ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸದೇ ಇದ್ದದ್ದೇ ಕಾರಣ ಎಂಬ ಅಭಿಪ್ರಾಯವನ್ನು ಅತಿಥಿಗಳು ವ್ಯಕ್ತಪಡಿಸಿದರು.

ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ರಾಕೇಶ್ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಂಸ್ಥೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಸಾಮಾಜಿಕ ನ್ಯಾಯದ ಹಲವು ಆಯಾಮಗಳ ವಿಚಾರ ಮಂಡನೆಯೊಂದಿಗೆ ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲಲು ಕಾರಣವಾದ ಅಂಶಗಳನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ಮಾತನಾಡಿ, ಹಿಂದುಳಿದ ವರ್ಗಗಳ ಹಾಗೂ ದಲಿತ ಸಮುದಾಯ ಪ್ರತಿನಿಧಿಸುವ ನಾಯಕನಾಗಬೇಕಿದ್ದ ರಾಕೇಶ್ ಸಿದ್ದರಾಮಯ್ಯ ಅಕಾಲಿಕ ಮರಣಕ್ಕೆ ತುತ್ತಾಗಿ ಇಂದಿಗೆ 2 ವರ್ಷವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಸ್‍ಸಿ-ಎಸ್‍ಟಿ ಹಾಗೂ ಓಬಿಸಿ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿತು. ಅವರು ಮಂಡಿಸಿದ ಐದು ವರ್ಷಗಳ ಬಜೆಟ್ ಅವಲೋಕಿಸಿದರೆ ಸಾಕು, ಅವರು ಏನು ಕೊಡುಗೆ ನೀಡಿದ್ದಾರೆ ಎಂಬುದು ಅರಿವಾಗುತ್ತದೆ ಎಂದು ತಿಳಿಸಿದರು.

ಇಷ್ಟು ಮಾಡಿಯೂ ಸೋಲಿಸಿದರಲ್ಲಾ: ಎಂ.ರಾಮಯ್ಯ ಅವರು ಸಿದ್ದರಾಮಯ್ಯರ ಕಾರ್ಯಕ್ರಮಗಳ ಬಗ್ಗೆ ಹೇಳುತ್ತಿದ್ದಾಗ `ಇಷ್ಟು ಕೆಲಸ ಮಾಡಿಯೂ ಸೋಲಿಸಿದರಲ್ಲಾ ಸಾರ್’ ಎಂದು ಸಭಿಕರೊಬ್ಬರು ಬೇಸರದಿಂದ ನುಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಂ.ರಾಮಯ್ಯ, ಸಿದ್ದರಾಮಯ್ಯರು ಸಿಎಂ ಆಗಿದ್ದ ವೇಳೆ ಕೈಗೊಂಡ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವಲ್ಲಿ ನಾವು ವಿಫಲವಾದ ಕಾರಣ ಅವರು ಸೋಲು ಕಾಣಬೇಕಾಯಿತು ಎಂದರು.

ಪ್ರಗತಿಪರ ಚಿಂತಕ ಇಂದೂಧರ ಹೊನ್ನಾಪುರ ಮಾತನಾಡಿ, ಸಿದ್ದರಾಮಯ್ಯ ಅವರು ತಮಗೆ ಸಿಕ್ಕ ಅಧಿಕಾರಾವಧಿಯಲ್ಲಿ ಕೈಮೀರಿ ಶೋಷಿತ ಸಮುದಾಯಗಳ ಏಳಿಗೆಗೆ ಅಗತ್ಯ ಕಾರ್ಯಕ್ರಮ ನೀಡಿದ್ದಾರೆ. ಆದರೆ ಇದರ ಫಲಾನುಭವಿಗಳು ಅವರ ಕೊಡುಗೆ ಅರ್ಥ ಮಾಡಿಕೊಳ್ಳದೇ ಸೋಲಿಸಿದರು. ಹೀಗಾಗಿ ಮಾಡುವ ಕೆಲಸದೊಂದಿಗೆ ಅದರ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡುವುದು ಮುಖ್ಯ. ದಲಿತ ಸಮುದಾಯಕ್ಕಿಂತಲೂ ಹಿಂದುಳಿದ ಸಣ್ಣ ಸಣ್ಣ ಜಾತಿಗಳು ಇಂದಿಗೂ ಜಾಗೃತಗೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ನಿರೀಕ್ಷಿತ ಮಟ್ಟದ ಹೋರಾಟಗಳು ಹಿಂದುಳಿದ ವರ್ಗಗಳಲ್ಲಿ ಸಂಘಟನೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2019ರ ಲೋಕಸಭೆಯಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕರೆ ವೈದಿಕ ದೇಶವಾಗಿ ಭಾರತವನ್ನು ಕಟ್ಟಲು ಅವರಿಗೆ ಮತ್ತಷ್ಟು ಬಲ ಸಿಗಲಿದೆ. ಮನುಧರ್ಮಶಾಸ್ತ್ರವನ್ನೇ ಸಂವಿಧಾನ ಮಾಡಿದರೂ ಅಚ್ಚರಿಯಿಲ್ಲ. ಈಗಾಗಲೇ ಸಣ್ಣ ಸಣ್ಣ ಹಿಂದುಳಿದ ಜಾತಿಗಳನ್ನು ಮನುವಾದಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಈಗಲಾದರೂ ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ, ವೈದಿಕ ಶಕ್ತಿಯ ಗುಲಾಮರಾಗಿ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಇರುವ ಮೀಸಲಾತಿ ಪದ್ಧತಿ ಮಾದರಿಯನ್ನು ವಿಧಾನಸಭೆ ಹಾಗೂ ಲೋಕಸಭೆಗೂ ವಿಸ್ತರಿಸಬೇಕು. ಇದಕ್ಕೆ ಆಗ್ರಹಿಸಿ ದೊಡ್ಡ ಮಟ್ಟದ ಹೋರಾಟ ದೇಶದಲ್ಲಿ ರೂಪುಗೊಳ್ಳಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ದೇಶದ ರಾಜಕೀಯ ಶಕ್ತಿ ಇಂದು ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಲುಕಿದೆ. ಇವು ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯಗಳನ್ನೇ ಬಳಸಿಕೊಂಡು ರಾಜಕೀಯ ಶಕ್ತಿ ಪಡೆಯುವಲ್ಲಿ ಸಫಲತೆ ಕಾಣುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ. ಇಂತಹ ಸನ್ನಿವೇಶದಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರು ಜಾಗೃತಗೊಳ್ಳುವ ಅಗತ್ಯವಿದೆ ಎಂದು ಎಚ್ಚರಿಸಿದರು.

ದಲಿತರ ಹಾಗೂ ಹಿಂದುಳಿದವರ ಓಟು ಗಿಟ್ಟಿಸಿಕೊಳ್ಳಲು ಹಲವು ಬಗೆಯ ಕುತಂತ್ರ ನಡೆಸುತ್ತಿರುವ ಮೂಲಭೂತ ವಾದಿಗಳು ಅಂದು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿ, ಇಂದು ಗೌರವಿಸುವ ನಾಟಕವಾಡುತ್ತಿದ್ದಾರೆ. ದಲಿತ ರಾಜಕಾರಣದ ಮಧ್ಯೆ ಇದೀಗ ಶ್ರೀರಾಮನನ್ನು ತರುವ ನಿಟ್ಟಿನಲ್ಲಿ ಡಾ.ಅಂಬೇಡ್ಕರ್ ಅವರ ಹೆಸರಿನ ಆರಂಭದಲ್ಲಿ ಅವರ ತಂದೆ ರಾಮ್‍ಜೀ ಹೆಸರು ಸೇರ್ಪಡಿಸುವ ಉದ್ದೇಶ ಹೊಂದಿರುವ ಇವರ ಈ ನಡೆಯಲ್ಲಿ ಯಾವುದೇ ಉದಾತ್ತ ಉದ್ದೇಶವಂತೂ ಇಲ್ಲ. ಇದು ಕೇವಲ ರಾಜಕೀಯ ಗಿಮಿಕ್ ಅಷ್ಟೇ ಎಂದರು.

1956ರಲ್ಲಿ ಡಾ.ಅಂಬೇಡ್ಕರ್ ಅವರು ಭೌದ್ಧ ಧರ್ಮ ಸ್ವೀಕರಿಸುವ ವೇಳೆ ತೆಗೆದುಕೊಂಡ ವಿಧಿಗಳಲ್ಲಿ ರಾಮನ ಪೂಜೆ ಮಾಡಬಾರದು ಎಂಬ ಅಂಶವೂ ಸೇರಿತ್ತು. ಕೇಂದ್ರ ಸರ್ಕಾರವನ್ನು ಸಂಘ ಪರಿವಾರ ನಡೆಸುತ್ತಿದ್ದು, ಇದೇ ಸಂಘ ಪರಿವಾರದ ಪಬ್ಲಿಕೇಷನ್ ಅಂಬೇಡ್ಕರ್ ಅವರ ಕುರಿತಂತೆ ಹೊರತಂದಿರುವ ಪುಸ್ತಕಗಳಲ್ಲಿ ಅವರ ಚಿಂತನೆಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದರು.

ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಚಿಂತಕ ಕಾಳೇಗೌಡನಾಗವಾರ, ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಡೈರಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.

Translate »