55 ಗಂಟೆಯ ವಾರಾಂತ್ಯ ಕಫ್ರ್ಯೂ ನಂತರ  ಮೈಸೂರಲ್ಲಿ ಸಹಜ ಜನಜೀವನ
ಮೈಸೂರು

55 ಗಂಟೆಯ ವಾರಾಂತ್ಯ ಕಫ್ರ್ಯೂ ನಂತರ ಮೈಸೂರಲ್ಲಿ ಸಹಜ ಜನಜೀವನ

January 11, 2022

ಮೈಸೂರು, ಜ.10(ಎಸ್‍ಬಿಡಿ)- ಮೊದಲ ವಾರಾಂತ್ಯ ಕಫ್ರ್ಯೂ ನಂತರ ಸೋಮವಾರ ಜನ ಜೀವನ ಸಹಜ ಸ್ಥಿತಿಗೆ ಮರಳಿತು. ಸೋಮವಾರ ಮುಂಜಾನೆ 5 ಗಂಟೆಗೆ ವಾರಾಂತ್ಯ ಕಫ್ರ್ಯೂ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳು ತೆರೆದಿದ್ದವು. ಬ್ಯಾಂಕ್ ಗಳು, ಸರ್ಕಾರಿ ಕಚೇರಿಗಳಲ್ಲಿ ಸಾರ್ವ ಜನಿಕರ ಸಂಖ್ಯೆ ಹೆಚ್ಚಾಗಿತ್ತು. ವಾಹನ ಸಂಚಾರ ಸಹಜ ಸ್ಥಿತಿಯಲ್ಲಿತ್ತು. ವಾರಾಂತ್ಯ ದಿನಗಳಲ್ಲಿ ವ್ಯಾಪಾರವಿಲ್ಲದೆ ಕಂಗಾಲಾಗಿದ್ದ ಮಾರುಕಟ್ಟೆ ಹಾಗೂ ಬೀದಿಬದಿ ವ್ಯಾಪಾರಿ ಗಳು ಇಂದು ಕೊಂಚ ನಿಟ್ಟುಸಿರು ಬಿಟ್ಟರು. ಮಾಲ್‍ಗಳು ಹಾಗೂ ಥಿಯೇಟರ್‍ಗಳಲ್ಲಿ ಮಾರ್ಗಸೂಚಿಯನ್ವಯ ಸಿನಿಮಾ ಪ್ರದರ್ಶನ ಮಾಡಲಾಯಿತು. ಸಾರ್ವಜನಿಕ ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಆಟೋ ಇನ್ನಿತರ ಖಾಸಗಿ ವಾಹನ ಸಂಚಾರವೂ ಎಂದಿನಂತಿತ್ತು. ಹೋಟೆಲ್ ವ್ಯಾಪಾರದಲ್ಲೂ ಸುಧಾರಣೆ ಕಂಡುಬಂದಿತು.

`ಒಮಿಕ್ರಾನ್’ ಪ್ರಕರಣ ಹೆಚ್ಚಳ ಹಾಗೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿ ರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 10ರಿಂದ ಇಂದು ಮುಂಜಾನೆ 5 ಗಂಟೆವರೆಗೆ ತುರ್ತು ಹಾಗೂ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಯಿತು. ಪರಿಣಾಮ ವಾರಾಂತ್ಯದಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದಲ್ಲದೆ, ರಸ್ತೆಗಳೂ ವಾಹನ ಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಸದ್ಯ ವಾರಾಂತ್ಯ ಕಫ್ರ್ಯೂ ಅವಧಿ ಮುಕ್ತಾಯದ ನಂತರ ಮೈಸೂರು ನಗರದಲ್ಲಿ ಸಹಜ ಸ್ಥಿತಿ ಕಂಡುಬಂದಿತು. ವಾರಾಂತ್ಯ ಕಪ್ರ್ಯೂ ಹಾಗೂ ಕೆಲ ನಿರ್ಬಂಧಗಳನ್ನು ಜ.19 ರವರೆಗೆ ಅನ್ವಯವಾಗುವಂತೆ ಜಾರಿಗೊಳಿ ಸಲಾಗಿದೆ. ಅಂದರೆ ಜ.14ರ ರಾತ್ರಿ 10ರಿಂದ ಜ.17ರ ಬೆಳಗ್ಗೆ 5 ಗಂಟೆವರೆಗೆ 2ನೇ ವಾರಾಂತ್ಯ ಕಫ್ರ್ಯೂ ಜಾರಿಯಲ್ಲಿರಲಿದೆ. ಪರಿಣಾಮ ಜ.15ರಂದು ಸಂಕ್ರಾಂತಿ ಹಬ್ಬ ಆಚರಣೆಗೂ ಅಡ್ಡಿಯಾಗಬಹುದು. ಹಬ್ಬದ ಹಿನ್ನೆಲೆಯಲ್ಲಿ ಮುಂದಿನ ಮೂರ್ನಾಲ್ಕು ದಿನ ಮಾರುಕಟ್ಟೆ, ಮಳಿಗೆಗಳಲ್ಲಿ ಜನ ದಟ್ಟಣೆ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ವಾಹನ ದಟ್ಟಣೆಯೂ ನಿರ್ಮಾಣವಾಗು ವುದರಿಂದ ಪೊಲೀಸರು ಸೂಕ್ತ ನಿರ್ವ ಹಣಾ ಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ತಾಳದೆ ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಇನ್ನಿತರ ಸುರಕ್ಷತಾ ಕ್ರಮ ಅನುಸರಿಸುವುದು ಅತ್ಯಗತ್ಯ.

Translate »