ಲಾಕ್‍ಡೌನ್ ಸಡಿಲಿಕೆ ಬೆನ್ನ ಹಿಂದೆಯೇ ಭೂತವಾಗಿ ಕಾಡಲಾರಂಭಿಸಿದ ತ್ಯಾಜ್ಯ ಸಮಸ್ಯೆ
ಮೈಸೂರು

ಲಾಕ್‍ಡೌನ್ ಸಡಿಲಿಕೆ ಬೆನ್ನ ಹಿಂದೆಯೇ ಭೂತವಾಗಿ ಕಾಡಲಾರಂಭಿಸಿದ ತ್ಯಾಜ್ಯ ಸಮಸ್ಯೆ

May 6, 2020

ಮೈಸೂರು, ಮೇ 5(ಎಸ್‍ಬಿಡಿ)- ಲಾಕ್‍ಡೌನ್ ಸಡಿಲಿಕೆ ಬೆನ್ನಲ್ಲೇ ಮೈಸೂರು ನಗರದಲ್ಲಿ ತ್ಯಾಜ್ಯದ ಸಮಸ್ಯೆ ಶುರುವಾಗಿದೆ.
ಮೈಸೂರು ಜಿಲ್ಲೆ ರೆಡ್ ಜೋನ್‍ನಲ್ಲಿದ್ದರೂ ಸರ್ಕಾರಗಳ ಸೂಚನೆಯಂತೆ ಲಾಕ್‍ಡೌನ್ ಅನ್ನು ಭಾಗಶಃ ಸಡಿಲಗೊ ಳಿಸಲಾಗಿದೆ. ಪ್ರಮುಖ ವಾಣಿಜ್ಯ ಕೇಂದ್ರಗಳು ಹಾಗೂ ರಸ್ತೆಗಳ ಹೊರತುಪಡಿಸಿ ಉಳಿದೆಡೆ ಎಲ್ಲಾ ರೀತಿಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಬಹುತೇಕ ಹೋಟೆಲ್‍ಗಳಲ್ಲಿ ಪಾರ್ಸೆಲ್ ಸೇವೆ ಆರಂಭ ವಾಗಿದೆ. ಮದ್ಯದಂಗಡಿಗಳಲ್ಲೂ ವ್ಯಾಪಾರ ಜೋರಾಗಿ ನಡೆಯುತ್ತಿದೆ. ವ್ಯಾಪಾರಕ್ಕೆ ನಿಗದಿಪಡಿಸಿದ್ದ ಅವಧಿ ಒಂದು ಗಂಟೆ ಅಂದರೆ ಸಂಜೆ 7ರವರೆಗೆ ವಿಸ್ತರಿಸ ಲಾಗಿದೆ. ಇದೇ ನೆಪದಲ್ಲಿ ವಾಹನ ಸಂಚಾರವೂ ಮಿತಿಮೀರಿದೆ. ಇದೆಲ್ಲದರ ಪರಿಣಾಮ ಮೈಸೂರಲ್ಲಿ ಮತ್ತೆ ಕಸದ ಸಮಸ್ಯೆ ಉಲ್ಬಣಿಸುತ್ತಿದೆ.

ಲಾಕ್‍ಡೌನ್‍ನಿಂದಾಗಿ 40 ದಿನಗಳು ಬಂದ್ ಮಾಡಿದ್ದ ಮಳಿಗೆಗಳನ್ನು ಶುಚಿಗೊಳಿಸಿ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿದಿದ್ದಾರೆ. ಹಲವೆಡೆ ಕಂಟೈನರ್‍ಗಳು ಮಾಯವಾಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಗೋಚರಿಸುತ್ತಿದೆ. ಭಾರೀ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಕಣ್ಣಿಗೆ ರಾಚುತ್ತಿದೆ. ಬಿಡಾಡಿ ಪ್ರಾಣಿಗಳು ಕಸವನ್ನು ಹೆಕ್ಕಿ, ಚೆಲ್ಲಾಪಿಲ್ಲಿಗೊಳಿಸುತ್ತಿವೆ. ಹೋಟೆಲ್‍ಗಳಲ್ಲಿ ಮಿಕ್ಕ ಅಥವಾ ಹಾಳಾದ ಆಹಾರ ವನ್ನು ಬೀದಿಗೆ ಸುರಿಯುತ್ತಿದ್ದಾರೆ. ಪೌರ ಕಾರ್ಮಿಕರು ಬೆಳಿಗ್ಗೆ ಶುಚಿಗೊಳಿಸಿ ತೆರಳಿದ ನಂತರ ಕಸ ಸುರಿಯು ವುದರಿಂದ ಮರುದಿನ ಬೆಳಿಗ್ಗೆವರೆಗೂ ಅಲ್ಲೇ ಬಿದ್ದಿರುತ್ತದೆ.

ಬಹುತೇಕ ಎಲ್ಲಾ ಚಟುವಟಿಕೆಗಳಿಗೂ ಏಕಾಏಕಿ ಅನುಮತಿ ನೀಡಿರುವುದರಿಂದ ರಸ್ತೆಗೆ ಬಿಟ್ಟಿರುವ ಹಸಿದ ಹುಲಿಯಂತೆ ಜನ ವರ್ತಿಸುತ್ತಿದ್ದಾರೆ. ಇಷ್ಟು ದಿನ ಅವರಲ್ಲಿದ್ದ ಕೊರೊನಾ ಭೀತಿ ಈಗ ಇಲ್ಲವೇ ಇಲ್ಲ. ವ್ಯಾಪಾರಿಗಳೂ ಹಾಗೆಯೇ ಸ್ವಚ್ಛತೆ ಮರೆತಿದ್ದಾರೆ. ಎಲ್ಲೆಂದರಲ್ಲಿ ಕಸ ಸುರಿಯಲು ಆರಂಭಿಸಿದ್ದಾರೆ. ಸಾಮಾ ಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವು ದಷ್ಟೇ ಅಲ್ಲ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ಮುಖ್ಯ ಎಂಬುದು ನೆನಪೇ ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ಮುಖಗವಸು ಧರಿಸದವರು, ಎಲ್ಲೆಂದರಲ್ಲಿ ಉಗುಳುವ ವರಿಗೆ ದಂಡ ಹಾಕುವಲ್ಲಿ ನಿರತವಾಗಿರುವ ನಗರ ಪಾಲಿಕೆ, ಕಸದ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ಗಳನ್ನು ಟನ್‍ಗಟ್ಟಲೆ ವಶಪಡಿಸಿಕೊಳ್ಳುವ ಪರಿಸರ ಇಂಜಿನಿಯರ್‍ಗಳು, ಇತರೆ ಮೂಲದಿಂದ ಉತ್ಪತ್ತಿಯಾಗುವ ಹಾನಿಕಾರಕ ಪ್ಲಾಸ್ಟಿಕ್ ನಿಯಂತ್ರಣದ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ಹಾಗಾಗಿ ಸ್ವಚ್ಛ ನಗರಿಯಲ್ಲಿ ತ್ಯಾಜ್ಯದ ಸಮಸ್ಯೆ ಹೆಚ್ಚುತ್ತಲೇ ಇದೆ.

ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಲಾಗಿರುವ ಮೈಸೂರಿನ 91 ವಾಣಿಜ್ಯ ರಸ್ತೆಗಳಲ್ಲಿ ಧನ್ವಂತ್ರಿ ರಸ್ತೆಯೂ ಒಂದು. ಆದರೆ ಈ ರಸ್ತೆಯಲ್ಲೇ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದಿದೆ. ಅದನ್ನು ಬಿಡಾಡಿ ರಾಸುಗಳು, ಶ್ವಾನಗಳು ಎಳೆದಾಡಿದ್ದರಿಂದ ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಯಾಗಿದೆ. ಭಾಗಶಃ ಚಟುವಟಿಕೆ ಆರಂಭವಾಗಿರು ವುದರಿಂದ ತ್ಯಾಜ್ಯ ಉತ್ಪತ್ತಿ ಹೆಚ್ಚಾಗುತ್ತದೆ. ಈ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು, ಸಮರ್ಪಕ ವಾಗಿ ವಿಲೇವಾರಿ ಮಾಡಿಸುವುದರೊಂದಿಗೆ ಎಲ್ಲೆಂದರಲ್ಲಿ ಕಸ ಹಾಕುವವರಿಗೂ ದಂಡ ವಿಧಿಸಿ, ಎಚ್ಚರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Translate »